ರಜನಿಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರದಾನ ; ತನ್ನ ಗುರು ಕೆಬಿ, ತನ್ನೊಳಗಿನ ನಟನನ್ನು ಗುರುತಿಸಿದ ಬಸ್ ಡ್ರೈವರ್ ಗೆ ಪ್ರಶಸ್ತಿ ಅರ್ಪಣೆ

25-10-21 05:15 pm       Headline Karnataka News Desk   ದೇಶ - ವಿದೇಶ

ದೆಹಲಿಯಲ್ಲಿ ಇಂದು ನಡೆದ 67ನೇ ನ್ಯಾಶನಲ್ ಫಿಲ್ಮ್ ಅವಾರ್ಡ್ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿಯನ್ನು ಮೇರುನಟ ರಜನಿಕಾಂತ್ ಗೆ ಪ್ರದಾನ ಮಾಡಿದರು.

ನವದೆಹಲಿ, ಅ.25: ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಅದನ್ನು ತಮ್ಮ ನೆಚ್ಚಿನ ಗುರು ಕೆ. ಬಾಲಚಂದರ್, ತನ್ನ ಶ್ರೇಯಸ್ಸಿಗೆ ಕಾರಣವಾದ ಸೋದರ ಸತ್ಯನಾರಾಯಣ ಗಾಯಕ್ವಾಡ್ ಮತ್ತು ತನ್ನಲ್ಲಿನ ನಟನನ್ನು ಮೊದಲಿಗೆ ಗುರುತಿಸಿ ಬೆನ್ನು ತಟ್ಟಿದ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಚಾಲಕ ರಾಜ್ ಬಹಾದೂರ್ ಅವರಿಗೆ ಅರ್ಪಿಸಿದ್ದಾರೆ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕಳೆದ ಎಪ್ರಿಲ್ ನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಸಮಾರಂಭ ನಡೆದಿರಲಿಲ್ಲ. ದೆಹಲಿಯಲ್ಲಿ ಇಂದು ನಡೆದ 67ನೇ ನ್ಯಾಶನಲ್ ಫಿಲ್ಮ್ ಅವಾರ್ಡ್ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿಯನ್ನು ಮೇರುನಟ ರಜನಿಕಾಂತ್ ಗೆ ಪ್ರದಾನ ಮಾಡಿದರು.

ಆಬಳಿಕ ಮಾತನಾಡಿದ ರಜನಿಕಾಂತ್, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ. ಪ್ರತಿಷ್ಠೆಯ ಗೌರವದ ಪುರಸ್ಕಾರವನ್ನು ನಾನು ನನ್ನ ಗುರು ಬಾಲಚಂದರ್ ಸರ್ ಅವರಿಗೆ ಅರ್ಪಿಸುತ್ತೇನೆ. ಇಂಥ ಕ್ಷಣದಲ್ಲಿ ಅವರನ್ನು ತುಂಬ ಸ್ಮರಿಸಿಕೊಳ್ಳುತ್ತೇನೆ. ಇದರ ಜೊತೆಗೆ, ನನ್ನ ಸೋದರ ಸತ್ಯನಾರಾಯಣ ಗಾಯಕ್ವಾಡ್ ಅವರನ್ನ ಸ್ಮರಿಸುತ್ತೇನೆ. ಅವರು ನನಗೆ ತಂದೆಯ ಸ್ಥಾನದಲ್ಲಿ ನಿಂತು ದೊಡ್ಡ ಗುಣಗಳನ್ನು ಕಲಿಸಿಕೊಟ್ಟಿದ್ದಾರೆ. ಇದರ ಜೊತೆಗೆ, ನನ್ನ ಗೆಳೆಯ ಮತ್ತು ಸಹೋದ್ಯೋಗಿಯಾಗಿದ್ದ ರಾಜ್ ಬಹಾದುರ್ ಅವರನ್ನೂ ಸ್ಮರಿಸುತ್ತೇನೆ. ನಾನು ಅವರ ಜೊತೆಗೆ ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ ನನ್ನೊಳಗಿನ ನಟನನ್ನು ಗುರುತಿಸಿ, ಸಿನೆಮಾಗೆ ಸೇರುವಂತೆ ಪ್ರೋತ್ಸಾಹ ನೀಡಿದ್ದ. ಇದರ ಜೊತೆಗೆ ನನ್ನ ಶ್ರೇಯಸ್ಸಿಗೆ ಕಾರಣವಾದ ಎಲ್ಲ ನಿರ್ದೇಶಕರು, ಕಲಾವಿದರು, ತಂತ್ರಜ್ಙರಿಗೂ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ರಜನಿಕಾಂತ್, 1975ರಲ್ಲಿ ಮೊದಲ ಬಾರಿಗೆ ಕೆ.ಬಾಲಚಂದರ್ ಅವರ ಅಪೂರ್ವ ರಾಗಂಗಲ್ ಚಿತ್ರದ ಮೂಲಕ ಸಿನೆಮಾ ಪ್ರವೇಶ ಮಾಡಿದ್ದರು. ನಾಲ್ಕು ದಶಕಗಳಲ್ಲಿ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಜನಿ, ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಅಭಿಮಾನಿಗಳಿಂದ ನೆಚ್ಚಿನ ತಲೈವರ್ ಎಂದು ಹೆಸರಾಗಿದ್ದಾರೆ. 

Superstar Rajinikanth received the prestigious Dadasaheb Phalke Award at the 67th National Film Awards ceremony in New Delhi today, October 25. Speaking at the ceremony, Rajinikanth dedicated his award to his mentor K Balachander, his elder brother Satyanarayana Gaikwad and his best friend Raj Bahadur, who was the Karnataka bus transport driver when Rajinikanth was a conductor.