ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿ ನಾಯಕರು ಶಾಮೀಲು ; ಪ್ರಧಾನಿ ಕಚೇರಿಗೆ ದೂರು, ರಾಜ್ಯ ಬಿಜೆಪಿ ನಾಯಕರ ತಲೆದಂಡಕ್ಕೆ ಚಿಂತನೆ

06-11-21 09:12 pm       Political Correspondent, H.K Desk   ದೇಶ - ವಿದೇಶ

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ದೆಹಲಿ ಮಟ್ಟದಲ್ಲಿ ಭಾರೀ ವದಂತಿ ಹಬ್ಬಿದೆ.

ನವದೆಹಲಿ, ನ.6: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ದೆಹಲಿ ಮಟ್ಟದಲ್ಲಿ ಭಾರೀ ವದಂತಿ ಹಬ್ಬಿದೆ. ಇದೇ ವೇಳೆ, ರಾಜ್ಯ ಬಿಜೆಪಿ ನಾಯಕರು ಹಗರಣದಲ್ಲಿ ಶಾಮೀಲಾಗಿರುವ ಆರೋಪದ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಬಿಜೆಪಿ ಪಕ್ಷದ ಒಳಗಿಂದಲೇ ದೂರು ಹೋಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಗಂಭೀರ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದಾರೆ ಎನ್ನುವುದನ್ನು ಮೂಲಗಳು ಖಚಿತಪಡಿಸಿವೆ.  

ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಪ್ರಕರಣದಲ್ಲಿ ಹಲವರ ಹೆಸರನ್ನು ಹೇಳಿದ್ದು, ಬಿಜೆಪಿ ನಾಯಕರು ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳ ಹೆಸರೂ ಇದೆಯೆಂದು ಹೇಳಲಾಗುತ್ತಿದೆ. ಇದೇ ವಿಚಾರದಲ್ಲಿ ರಾಜ್ಯ ಬಿಜೆಪಿ ಒಳಗಿನವರೇ ಪ್ರಧಾನಿ ಗಮನಕ್ಕೆ ತಂದಿದ್ದಾರೆ. ಬಿಜೆಪಿ ಪಕ್ಷದ ಪ್ರಭಾವಿ ನಾಯಕರೊಬ್ಬರು ನೇರವಾಗಿ ಶಾಮೀಲಾಗಿದ್ದಾರೆ ಎಂದು ಪ್ರಧಾನಿ ಗಮನಕ್ಕೆ ತರಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕರ ತಲೆದಂಡಕ್ಕೂ ಮೋದಿ ಸೂಚಿಸಿದ್ದಾರೆ ಎನ್ನುವ ಮಾಹಿತಿಗಳು ದೆಹಲಿ ಮಟ್ಟದಲ್ಲಿದ್ದು, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆಯಿದೆ.

ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಜೊತೆಗೆ ಶಾಮೀಲಾತಿ ಆಗಿರುವ ಬಗ್ಗೆ ಸಾಕ್ಷ್ಯಾಧಾರ ಸಹಿತ ಪತ್ರವನ್ನು ಪ್ರಧಾನಿ ಕಚೇರಿಗೆ ತಲುಪಿಸಲಾಗಿದೆ. ಅದರಲ್ಲಿ ಸ್ಫೋಟಕ ಮಾಹಿತಿಗಳಿದ್ದು, ಅದೇ ವಿಚಾರ ಈಗ ರಾಜ್ಯ ಬಿಜೆಪಿ ನಾಯಕರ ಕೊರಳು ಸುತ್ತಿಕೊಂಡಿದೆ. ಅಂತಾರಾಷ್ಟ್ರೀಯ ಬ್ಯಾಂಕು, ಜನಧನ್ ಖಾತೆಯ ದುಡ್ಡು ಮತ್ತು ಸರಕಾರಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ನೂರಾರು ಕೋಟಿ ರೂಪಾಯಿ ಪೀಕಿಸಿರುವ ಶ್ರೀಕಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆಯಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪ್ರಧಾನಿ ಆದೇಶ ಮಾಡಿದ್ದಾರೆ.

ಜನಧನ್ ಖಾತೆಯ 80 ಲಕ್ಷಕ್ಕೂ ಹೆಚ್ಚು ಖಾತೆಗಳ ದುಡ್ಡನ್ನು ಹ್ಯಾಕ್ ಮಾಡಲಾಗಿದೆ ಎನ್ನುವ ಮಾಹಿತಿಯೂ ಇದೆ. ಇದಲ್ಲದೆ, ವಿವಿಧ ರಾಜ್ಯ ಸರಕಾರಗಳ ವ್ಯಾಪ್ತಿಯ ಇ-ಟೆಂಡರ್ ಪೋರ್ಟಲ್, ನೀರಾವರಿ ಇಲಾಖೆಯ ಯೋಜನೆಗಳು, ದೊಡ್ಡ ಮೊತ್ತದ ಗುತ್ತಿಗೆ ಯೋಜನೆಗಳಲ್ಲಿಯೂ ವೆಬ್ ಸೈಟ್ ಹ್ಯಾಕ್ ಮಾಡಿ, ಅಪರಾತಪರಾ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಬಿಜೆಪಿ ನಾಯಕರಿಗೆ ಶ್ರೀಕಿ ಕಿಕ್ ಬ್ಯಾಕ್ ನೀಡಿದ್ದಾನೆ ಎನ್ನುವ ಸ್ಫೋಟಕ ಮಾಹಿತಿಗಳು ಹರಿದಾಡುತ್ತಿವೆ.

ಅಲ್ಲದೆ, ಪ್ರಭಾವಿ ರಾಜಕಾರಣಿಯೊಬ್ಬರ ಮಗ ತನ್ನ ದುಡ್ಡನ್ನು ಮಾರಿಷಸ್ ಗೆ ಸಾಗಿಸಲು ಶ್ರೀಕಿ ನೆರವು ಪಡೆದಿದ್ದಾನೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ಒಳಗಿನವರೇ ಕೇಂದ್ರ ನಾಯಕತ್ವಕ್ಕೆ ದೂರುಗಳನ್ನು ನೀಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಘಟಕವನ್ನೇ ಬದಲಾಯಿಸಲು ಕೇಂದ್ರ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಇತ್ತೀಚೆಗೆ, ಹಗರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಲಾಗಿದೆ ಎಂದಿದ್ದರು. ಆದರೆ, ಇದೇ ವಿಚಾರದಲ್ಲಿ ಪ್ರಶ್ನೆ ಎತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿಯವರು ಇಡಿ ತನಿಖೆಗೆ ವಹಿಸಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಇವರ ಮಾತನ್ನು ನಂಬಲು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೆ, ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯ ಬಿಜೆಪಿ ನಾಯಕರು ಶಾಮೀಲಾಗಿದ್ದು, ಅವರ ರಕ್ಷಣೆಯನ್ನು ರಾಜ್ಯ ಸರಕಾರವೇ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಬಿಟ್ ಕಾಯಿನ್ ಎಕ್ಸ್ ಚೇಂಜನ್ನೇ ದೋಚಿದ್ದ ಖದೀಮ

2020ರ ನವೆಂಬರ್ ತಿಂಗಳಲ್ಲಿ ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಿದ್ದರು. ಡಾರ್ಕ್ ವೆಬ್ ನಲ್ಲಿ ಡ್ರಗ್ಸ್ ವಹಿವಾಟು, ಅಮೆರಿಕ ಮೂಲದ ಎರಡು ಬಿಟ್ ಕಾಯಿನ್ ಎಕ್ಸ್ ಚೇಂಜ್ ಗಳನ್ನು ಹ್ಯಾಕ್ ಮಾಡಿ 5 ಸಾವಿರ ಬಿಟ್ ಕಾಯಿನ್ ಗಳನ್ನು ಕದ್ದಿರುವುದು ಸೇರಿದಂತೆ ಹಲವಾರು ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ನೂರಾರು ಕೋಟಿ ರೂಪಾಯಿ ಮೋಸ ಎಸಗಿದ ಬಗ್ಗೆ ಮೂರು ಪ್ರತ್ಯೇಕ ಚಾರ್ಜ್ ಶೀಟ್ ಹಾಕಲಾಗಿತ್ತು. ಆತನಿಂದ ಕೇವಲ 9 ಕೋಟಿ ರೂಪಾಯಿ ಸೀಜ್ ಮಾಡಿದ್ದು ಬಿಟ್ಟರೆ ಬಿಟ್ ಕಾಯಿನ್ ವಶಕ್ಕೆ ಪಡೆಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. 2021ರ ಫೆಬ್ರವರಿಯಲ್ಲಿ ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಶ್ರೀಕಿ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯೇ ಈಗ ರಾಜ್ಯ ನಾಯಕರ ಕೊರಳು ಸುತ್ತಿಕೊಳ್ಳಲು ಕಾರಣವಾಗಿದೆ.  

Karnataka's ruling BJP seems to be rattled as the allegations against top state party leaders in the Bitcoin scandal have reached the Prime Minister's Office. Sources say that the allegations are being taken seriously and the PMO has recommended further investigation in the matter. This has created furore among a section of the leadership, especially the top-rung leaders, and party insiders say that the development could lead to major changes in the ruling establishment.