ಸತತ ಮೂರನೇ ದಿನವೂ ಮುಳುಗಿದ ಚೆನ್ನೈ ; ಪ್ರವಾಹಕ್ಕೆ ನಾಲ್ವರು ಸಾವು, ಇನ್ನೂ ಮೂರು ದಿನ ಮಳೆಯ ಎಚ್ಚರಿಕೆ ! 120 ವರ್ಷಗಳಲ್ಲಿ ಕಂಡುಕೇಳರಿಯದ ಮಳೆಗೆ ಜನ ಹೈರಾಣ !

09-11-21 02:48 pm       Headline Karnataka News Desk   ದೇಶ - ವಿದೇಶ

ತಮಿಳುನಾಡಿನ ಚೆನ್ನೈ ಆಸುಪಾಸಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಚೆನ್ನೈ ನಗರ ಪೂರ್ತಿಯಾಗಿ ಮಳೆ ನೀರಿನಲ್ಲಿ ತೋಯ್ದು ಹೋಗಿದ್ದು, ತಗ್ಗಿನ ಪ್ರದೇಶಗಳು ಸತತ ಮೂರನೇ ದಿನವೂ ಮುಳುಗಡೆಯಾಗಿದೆ.

ಚೆನ್ನೈ, ನ.9: ತಮಿಳುನಾಡಿನ ಚೆನ್ನೈ ಆಸುಪಾಸಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಚೆನ್ನೈ ನಗರ ಪೂರ್ತಿಯಾಗಿ ಮಳೆ ನೀರಿನಲ್ಲಿ ತೋಯ್ದು ಹೋಗಿದ್ದು, ತಗ್ಗಿನ ಪ್ರದೇಶಗಳು ಸತತ ಮೂರನೇ ದಿನವೂ ಮುಳುಗಡೆಯಾಗಿದೆ. ನೀರಿನಲ್ಲಿ ಮುಳುಗಿರುವ ಕಾರಣ ಚೆನ್ನೈ ನಗರದ ಅಡುಂಬಾಕ್ಕಂ ಪೊಲೀಸ್ ಠಾಣೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಇದೇ ವೇಳೆ, ಇನ್ನೂ ಮೂರು ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚೆನ್ನೈ ಸೇರಿದಂತೆ ಪಾಂಡಿಚೇರಿಯಲ್ಲೂ ಇದೇ ರೀತಿ ಮಳೆಯಾಗುತ್ತಿದ್ದು ಎರಡನೇ ದಿನವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ತೀವ್ರ ಹಾನಿಯಾಗಿದೆ. ದಕ್ಷಿಣ ಭಾಗದ ವಿಲ್ಲೂರು, ನಾಗಪಟ್ಟಿಣಂ, ಚೆಂಗಲ್ ಪಟ್ಟು, ತಿರುವಲ್ಲೂರು, ಕಾಂಜೀಪುರಂ, ಕುದ್ದಲೂರು, ತಿರುವಾರೂರು, ತಂಜಾವೂರು, ಪುದುಕೋಟೈ, ರಾಮನಾಥಪುರಂ ಜಿಲ್ಲೆಗಳಲ್ಲಿ ತಗ್ಗು ಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಚೆನ್ನೈ, ತಿರುವಲ್ಲೂರು, ಚೆಂಗಲ್ ಪೇಟೆ, ಕಾಂಚೀಪುರಂ ಜಿಲ್ಲೆಗಳಲ್ಲಿ 8 ಮತ್ತು 9ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚೆನ್ನೈನಲ್ಲಿ ಸಾವಿರಾರು ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಇದ್ದಾರೆ. ಈವರೆಗೆ ನಗರ ಒಂದರಲ್ಲೇ 48 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಚೆನ್ನೈನಲ್ಲಿ ಬಹುತೇಕ ಭಾಗ ರೈಲು ಹಳಿಗಳಲ್ಲಿ ನೀರು ನಿಂತಿದ್ದರಿಂದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಚಂಡಮಾರುತ ಎದ್ದಿದ್ದು, ಮುಂದಿನ 24 ಗಂಟೆಗಳ ನಂತರ ಉತ್ತರ ಭಾಗಕ್ಕೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಮತ್ತು ಆಂಧ್ರ ಕರಾವಳಿಯಲ್ಲಿ 20ಕ್ಕೂ ಹೆಚ್ಚು ಎನ್ ಡಿಆರ್ ಎಫ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 120 ವರ್ಷಗಳಲ್ಲಿ ಗರಿಷ್ಠ ಮಳೆ ಎಂದು ಅಂದಾಜಿಸಲಾಗಿದೆ. 1901ರಲ್ಲಿ ಭಾರೀ ಮಳೆಯಾಗಿದ್ದ ಬಗ್ಗೆ ದಾಖಲೆ ಇದೆ. ಆಬಳಿಕ ಅತೀ ಹೆಚ್ಚು ಮಳೆ ಇದೇ ಮೊದಲ ಬಾರಿಗೆ ಆಗಿದೆ. ಕೇರಳದಲ್ಲಿ ಅಕ್ಟೋಬರ್ ತಿಂಗಳಲ್ಲಿ 589 ಮಿಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದುಪ್ಪಟ್ಟು ಆಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

The death toll in Tamil Nadu due to rain-related incident on Tuesday jumped to five, said Tamil Nadu Revenue and Disaster Management Minister KKSSR Ramachandran, adding that 538 huts were damaged and four houses fully damaged. “More damage expected if rain intensifies,” the minister further said.