ತಮಿಳುನಾಡು ಕರಾವಳಿಗೆ ಮತ್ತೊಮ್ಮೆ ಚಂಡಮಾರುತ ಎಚ್ಚರಿಕೆ ; 20 ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಣೆ

26-11-21 01:20 pm       HK news Desk   ದೇಶ - ವಿದೇಶ

ತಮಿಳುನಾಡು ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, 20 ಜಿಲ್ಲೆಗಳಲ್ಲಿ ಶುಕ್ರವಾರವೂ ಶಾಲೆಗಳಿಗೆ ರಜೆ ನೀಡಲಾಗಿದೆ.

ಚೆನ್ನೈ, ನ.26: ತಮಿಳುನಾಡು ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, 20 ಜಿಲ್ಲೆಗಳಲ್ಲಿ ಶುಕ್ರವಾರವೂ ಶಾಲೆಗಳಿಗೆ ರಜೆ ನೀಡಲಾಗಿದೆ. ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ, ತೆಂಕಾಸಿ, ತಿರುನಲ್ವೇಲಿ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆಯ ಬಳಿಕ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಲ್ಲಿ ಮಳೆಯ ಹೊಡೆತ ಕಡಿಮೆಯಾಗಿತ್ತು. ಆದರೆ, ಹವಾಮಾನ ಇಲಾಖೆ ಮತ್ತೊಂದು ಚಂಡಮಾರುತ ಎದ್ದಿರುವ ಬಗ್ಗೆ ಮಾಹಿತಿ ನೀಡಿದ್ದು, ನ.26ರ ನಂತರ ನಾಲ್ಕು ದಿನಗಳ ಮಳೆಯಾಗುವ ಎಚ್ಚರಿಕೆ ನೀಡಿದೆ. ತೂತುಕುಡಿ, ಕುದ್ದಲೂರು, ವಿಲ್ಲುಪುರಂ, ಚೆಂಗಲ್ ಪಟ್ಟು, ಚೆನ್ನೈ, ಕಾಂಚೀಪುರಂ, ತಿರುವಲ್ಲೂರು, ತೇನಿ, ಮದುರೈ, ಪುದುಕೋಟೈ, ಪುದುಚೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಈ ವಾರದ ಮೂರು ದಿನಗಳಲ್ಲಿ ಶಾಲೆ ಮತ್ತೆ ಪುನರ್ ಆರಂಭಗೊಂಡಿತ್ತು. ಚೆನ್ನೈನಲ್ಲಿ ಒಂದು ವಾರ ಪೂರ್ತಿ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆದರೆ, ಗುರುವಾರ ರಾತ್ರಿ ಮತ್ತೆ ಮಳೆಯಾಗಿದ್ದು, ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿ ಚಂಡಮಾರುತ ಎದ್ದಿದ್ದು, ತಮಿಳುನಾಡು ಮತ್ತು ಆಂಧ್ರ ಕರಾವಳಿಯಲ್ಲಿ ಮತ್ತೆ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. 40ರಿಂದ 50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗಿಳಿಯದಂತೆ ಸೂಚನೆ ನೀಡಲಾಗಿದೆ.

Schools will remain shut in over 20 districts of Tamil Nadu even as the Indian Meteorological Department (IMD) predicted heavy to very heavy rain in parts of the state on Friday.