ದೇಶಕ್ಕೆ ಔರಂಗಜೇಬನಂಥವರು ಬಂದಾಗ, ಶಿವಾಜಿಯಂಥವರೂ ಈ ಮಣ್ಣಿನಲ್ಲಿ ಹುಟ್ಟಿ ಬರುತ್ತಾರೆ, ಅದು ಭರತ ದೇಶದ ತಾಕತ್ತು !

13-12-21 06:01 pm       HK Desk news   ದೇಶ - ವಿದೇಶ

ಯಾವಾಗ ಔರಂಗಜೇಬನಂಥವರು ಭಾರತದಲ್ಲಿ ಹುಟ್ಟಿ ಬರುತ್ತಾರೋ, ಅದೇ ಸಂದರ್ಭದಲ್ಲಿ ಶಿವಾಜಿಯಂಥವರು ಕೂಡ ಇದೇ ಮಣ್ಣಿನಲ್ಲಿ ಹುಟ್ಟಿ ಬರುತ್ತಾರೆ.

ವಾರಾಣಸಿ, ಡಿ.13 : ಯಾವಾಗ ಔರಂಗಜೇಬನಂಥವರು ಭಾರತದಲ್ಲಿ ಹುಟ್ಟಿ ಬರುತ್ತಾರೋ, ಅದೇ ಸಂದರ್ಭದಲ್ಲಿ ಶಿವಾಜಿಯಂಥವರು ಕೂಡ ಇದೇ ಮಣ್ಣಿನಲ್ಲಿ ಹುಟ್ಟಿ ಬರುತ್ತಾರೆ. ಇದು ಜಗತ್ತಿನ ಬೇರೆಲ್ಲೂ ಕಾಣಸಿಗದ ವೈಶಿಷ್ಟ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮದ ಮೊದಲನೇ ಹಂತದ ಯೋಜನೆಯನ್ನು ಉದ್ಘಾಟಿಸಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.

ಪವಿತ್ರ ಗಂಗಾ ನದಿಯ ತಟದಲ್ಲಿ ಕಾಳ ಭೈರವನ ದೇವಸ್ಥಾನದಲ್ಲಿ ಆರತಿ ಎತ್ತಿ ಶಿವನ ಆಸ್ಥಾನದಲ್ಲಿ ಪೂಜೆ ನೆರವೇರಿಸಿದ ಬಳಿಕ ಮೋದಿ 339 ಕೋಟಿ ಮೊತ್ತದ ಕಾಶಿ ವಿಶ್ವನಾಥ ಧಾಮದ ಮೊದಲ ಹಂತದ ಯೋಜನೆಯನ್ನು ಉದ್ಘಾಟಿಸಿದರು. ಮೋದಿಯವರ ಸಂಸತ್ ಕ್ಷೇತ್ರವೂ ವಾರಾಣಸಿ ಆಗಿದ್ದು, ಆಡಳಿತಕ್ಕೆ ಬಂದ ಮೊದಲ ಅವಧಿಯಲ್ಲೇ ವಾರಾಣಸಿಯ ಅಭಿವೃದ್ಧಿಗಾಗಿ ಯೋಜನೆಯನ್ನು ಪ್ರಕಟಿಸಿದ್ದರು. ಅದರ ಕಾಮಗಾರಿ ಈಗ ಪ್ರಗತಿಯಲ್ಲಿದ್ದು ಮೊದಲ ಹಂತದ ಕೆಲಸ ಮುಕ್ತಾಯ ಕಂಡಿದೆ.

ಹಲವಾರು ದಾಳಿಕೋರರು ಭಾರತಕ್ಕೆ ದಾಳಿ ಮಾಡಿದ್ದಾರೆ. ಇಲ್ಲಿನ ಸುಂದರ ನಗರ, ಇತಿಹಾಸವನ್ನು ಪುಡಿಗಟ್ಟುವ ಕೆಲಸ ಮಾಡಿದ್ದಾರೆ. ಇತಿಹಾಸದಲ್ಲಿ ಔರಂಗಜೇಬನ ಕರಾಳ ಆಡಳಿತ, ಮತಾಂಧ ನಡೆಯ ಬಗ್ಗೆ ಚಿತ್ರಣಗಳಿವೆ. ಆತ ಏನೆಲ್ಲಾ ಹಿಂಸೆ ಮಾಡಿದ್ದಾನೆ ಅನ್ನುವುದನ್ನು ಕೇಳಿದ್ದೇವೆ. ಖಡ್ಗ ಹಿಡಿದು ನಮ್ಮ ಭವ್ಯ ನಾಗರಿಕತೆಯನ್ನು ಬದಲಿಸಲು ಪ್ರಯತ್ನ ಪಟ್ಟಿದ್ದ. ತನ್ನ ಮತಾಂಧ ನಡೆಯಿಂದಾಗಿ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವಲು ಪ್ರಯತ್ನ ಪಟ್ಟಿದ್ದ.

ಆದರೆ ಭರತ ಭೂಮಿಯ ಮಣ್ಣು ಜಗತ್ತಿನ ಇತರ ದೇಶಗಳ ರೀತಿಯದಲ್ಲ. ಯಾವಾಗ ಮತಾಂಧ ಔರಂಗಜೇಬನಂತವರು ಇಲ್ಲಿ ಹುಟ್ಟುತ್ತಾರೋ, ಅದೇ ಸಂದರ್ಭದಲ್ಲಿ ಅವರನ್ನು ಹತ್ತಿಕ್ಕುವ ಶಿವಾಜಿಯಂಥವರು ಕೂಡ ಹುಟ್ಟಿ ಬರುತ್ತಾರೆ. ಸಲಾರ್ ಮಸೂದ್ ನಂಥವರು ಕತ್ತಿ ಹಿಡಿದು ಬಂದರೆ, ಅದಕ್ಕೆದುರಾಗಿ ರಾಜಾ ಸುಹಲ್ ದೇವನಂಥವರು ಜನರನ್ನು ಒಗ್ಗೂಡಿಸಿ ಕ್ರೂರಿಗಳ ನಡೆಯನ್ನು ಎದುರಿಸಿರುವ ಇತಿಹಾಸ ನಮ್ಮಲ್ಲಿದೆ ಎಂದು ಮಾರ್ಮಿಕವಾಗಿ ಮೋದಿ ಹೇಳಿದ್ದಾರೆ.

ದೇಶದ ಆಧ್ಯಾತ್ಮಿಕ ಶಕ್ತಿಯ ಸಂಕೇತ

ಕಾಶಿ ವಿಶ್ವನಾಥನ ಧಾಮ ಕೇವಲ ಪಾರಂಪರಿಕ ಕಟ್ಟಡಗಳ ಸಮುಚ್ಚಯವಾಗಿ ಎದ್ದು ನಿಂತಿಲ್ಲ. ಭಾರತದ ಸನಾತನ ಸಂಸ್ಕೃತಿಯ ಪ್ರತೀಕವಾಗಿ ಎದ್ದು ನಿಂತಿದೆ. ಈ ದೇಶದ ಪ್ರಬಲ ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿ ಎದ್ದು ನಿಂತಿದೆ. ಕೇವಲ 3 ಸಾವಿರ ಚದರ ಮೀಟರ್ ಅಷ್ಟೇ ಇದ್ದ ಇಲ್ಲಿನ ದೇವಸ್ಥಾನ ಪರಿಸರ ಈಗ 5 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಏಕಕಾಲದಲ್ಲಿ 50ರಿಂದ 75 ಸಾವಿರ ಭಕ್ತರು ಬಂದು ಉಳಿದುಕೊಳ್ಳುವುದಕ್ಕೆ ಅವಕಾಶಗಳಿವೆ. ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ನಾವೆಲ್ಲ ಈ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ಭಾಗ್ಯವೇ ಸರಿ ಎಂದು ಮೋದಿ ಹೇಳಿದರು.

ಇಲ್ಲಿ ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿಯೂ ಕೆಲಸ ನಿಂತಿರಲಿಲ್ಲ. ಸಾಂಗವಾಗಿ ನಡೆದಿತ್ತು. ಇದಕ್ಕಾಗಿ ಶ್ರಮಿಸಿದ ನೂರಾರು ಕಾರ್ಮಿಕರು, ಸಿವಿಲ್ ಇಂಜಿನಿಯರುಗಳು, ಶಿಲ್ಪಿಗಳು, ಯೋಜನೆಯ ಹೊಣೆ ಹೊತ್ತವರು, ಇದಕ್ಕೆ ಬೆಂಬಲವಾಗಿ ನಿಂತ ಅವರೆಲ್ಲರ ಮನೆಮಂದಿ, ಹೀಗೆ ಈ ಅಮೋಘ ಸಂರಚನೆಗೆ ಕಾರಣವಾದ ಎಲ್ಲರಿಗೂ ನನ್ನ ನಮನಗಳನ್ನು ಅರ್ಪಿಸುತ್ತೇನೆ. ಇದರ ಜೊತೆಗೆ ಕಾಶಿ ವಿಶ್ವನಾಥ ಧಾಮದ ಪ್ರಾಜೆಕ್ಟ್ ಕೆಲಸಕ್ಕಾಗಿ ಹಗಲಿರುಳು ಶ್ರಮ ಹಾಕಿದ ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜೀ ಅವರಿಗೂ ನಮಿಸುತ್ತೇನೆ ಎಂದು ಮೋದಿ ಹೇಳಿದರು.

ನೀವು ಈಗ ಕಾಶಿಗೆ ಬಂದರೆ ಕೇವಲ ಇಲ್ಲಿ ಭಕ್ತರನ್ನು ಮಾತ್ರ ಕಾಣುವುದಲ್ಲ. ಇಲ್ಲಿನ ಭವ್ಯ ಇತಿಹಾಸ, ಪರಂಪರೆಯ ಅನುಭವವನ್ನೂ ಪಡೆಯುವಿರಿ. ಅಷ್ಟು ಅದ್ಭುತವಾಗಿ ವಿಶ್ವನಾಥನ ಧಾಮ ಮೂಡಿಬಂದಿದೆ. ಹಳೆಯ ಇತಿಹಾಸವನ್ನು ಹೊತ್ತು ಬೀಸುವ ಗಾಳಿಯ ಅಲೆಗಳು ಇಲ್ಲಿ ಬಂದ ಭಕ್ತರಿಗೆ ಭವಿಷ್ಯದ ದಿಕ್ಕನ್ನು ತೋರಿಸಲಿದೆ. ಈ ಸಂದರ್ಭದಲ್ಲಿ ದೇಶದ ಜನರಲ್ಲಿ ಮೂರು ಭರವಸೆಗಳನ್ನು ಕೇಳಲು ಇಚ್ಚಿಸುತ್ತೇನೆ. ಇದು ನಿಮಗಾಗಿ ಅಲ್ಲ, ಬದಲಿಗೆ ಭವ್ಯ ಭಾರತಕ್ಕಾಗಿ ಇದನ್ನು ನೀವು ಮಾಡಬೇಕು. ಸ್ವಚ್ಛತೆ, ಹೊಸತನದ ಆವಿಷ್ಕಾರ, ಸ್ವಾವಲಂಬಿ ಭಾರತಕ್ಕಾಗಿ ಶ್ರಮ ಹಾಕುವ ಕಾರ್ಯವನ್ನು ನೀವು ಜೀವನದಲ್ಲಿ ಅಳವಡಿಸಬೇಕು ಎಂದು ಮೋದಿ ಕರೆ ನೀಡಿದರು.

ಜಗತ್ತಿನ ಅತ್ಯಂತ ಪುರಾತನ ನಗರ

ಕಾಶಿ, ಬನಾರಸ್ ಅಥವಾ ವಾರಾಣಸಿ ಎಂದು ಕರೆಯಲ್ಪಡುವ ಈ ನಗರ ಜಗತ್ತಿನಲ್ಲೇ ಅತ್ಯಂತ ಪುರಾತನ ಎನ್ನಬಹುದಾದ ಹೆಸರು. ಕಾಶಿ ಎಂದರೆ ಭರತ ಭೂಮಿಯ ಪ್ರತಿ ಇತಿಹಾಸದಲ್ಲಿಯೂ ಕಂಡುಬರುವ ಅಚ್ಚಳಿಯದ ಹೆಸರು. ಇಲ್ಲಿನ ಪ್ರತಿ ಬೀದಿಯೂ ಒಂದೊಂದು ಇತಿಹಾಸವನ್ನು ಹೊಂದಿದೆ. ದೇಶದ ಉದ್ದಗಲಗಳಿಂದ ಜನರು ಮೋಕ್ಷ ಪ್ರಾಪ್ತಿ, ಸಂಪತ್ತು ಸಾಧನೆ ಮುಂತಾದ ಇಚ್ಛೆಗಳನ್ನು ಇಟ್ಟುಕೊಂಡು ಬರುತ್ತಾರೆ. ನೂರಾರು ವರ್ಷಗಳಿಂದ ಇಲ್ಲಿ ಬರುತ್ತಿರುವ ಜನರ ಬಾಯಲ್ಲಿಯೇ ಇಲ್ಲಿನ ಥರಹೇವಾರಿ ಇತಿಹಾಸ ಇದೆ. ಇಲ್ಲಿನ ಮೂಲೆ ಮೂಲೆಯಲ್ಲಿರುವ ಒಡೆದ ಕಲ್ಲುಗಳಲ್ಲೂ ಇತಿಹಾಸ ಅಡಗಿದೆ. ಜನರ ಬಾಯಲ್ಲಿ ಅಡಗಿರುವ ಜನಪದ ಇತಿಹಾಸವನ್ನು ಲಿಖಿತವಾಗಿಸುವ ಕೆಲಸ ಆಗಬೇಕಿದೆ. ನಾವು ಇತಿಹಾಸದಿಂದ ಇತಿಹಾಸ ಸೃಷ್ಟಿಸಬೇಕು ಎಂದು ಮೋದಿ ಹೇಳಿದರು.

ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಧಾಮಕ್ಕಾಗಿ ಶ್ರಮ ಹಾಕಿದ ಕಾರ್ಮಿಕರ ಜೊತೆಗೆ ಕುಳಿತು ಭೋಜನ ಸ್ವೀಕರಿಸಿದರು. ನಿರಂತರವಾಗಿ ದುಡಿದು ಕಾಶಿ ದೇಗುಲದ ಸಮುಚ್ಚಯವನ್ನು ಸುಂದರವಾಗಿಸಿದ್ದಕ್ಕೆ ಕಾರ್ಮಿಕರಿಗೆ ಕೃತಜ್ಞತೆ ಹೇಳಿದರು. ಇದಕ್ಕೂ ಮುನ್ನ ಗಂಗಾ ನದಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಲಲಿತಾ ಘಾಟ್ ನಿಂದ ರವಿದಾಸ್ ಘಾಟ್ ವರೆಗೆ ಪ್ರಧಾನಿ ಮೋದಿ ಬೋಟ್ ನಲ್ಲಿ ಸಂಚರಿಸಿದರು.

ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಹಲವಾರು ಮಂದಿ ಮಹಾತ್ಮ ಗಾಂಧಿ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಗಾಂಧೀಜಿಯವರ ಕಾಶಿಯನ್ನು ಪುನರ್ ನಿರ್ಮಿಸುವ ಕನಸನ್ನು ನನಸು ಮಾಡಿದ್ದು ಬಿಜೆಪಿ ಸರಕಾರ ಎಂದು ಹೇಳಿದರು.

Whenever an Aurangzeb has arisen in India, a Shivaji has also emerged as the soil of this country is different from the rest of the world, Prime Minister Narendra Modi said on Monday after he inaugurated the first phase of the Kashi Vishwanath Dham here. Addressing the gathering, Modi lauded the civilisational heritage of Varanasi, and said many sultanates rose and collapsed but Benaras remained.