ಜಮ್ಮು ವೈಷ್ಣೋದೇವಿ ಮಂದಿರದಲ್ಲಿ ಹೊಸ ವರ್ಷದ ಆರಂಭದಲ್ಲೇ ಭೀಕರ ಕಾಲ್ತುಳಿತ ; 12 ಯಾತ್ರಿಗಳು ಸಾವು

01-01-22 01:16 pm       HK Desk news   ದೇಶ - ವಿದೇಶ

ಉತ್ತರ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಜಮ್ಮು ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರದಲ್ಲಿ ಭಕ್ತರ ನಡುವೆ ಕಾಲ್ತುಳಿತ ನಡೆದಿದ್ದು, 12 ಮಂದಿ ಯಾತ್ರಿಗಳು ಸಾವಿಗೀಡಾಗಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಶ್ರೀನಗರ, ಜ.1 : ಉತ್ತರ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಜಮ್ಮು ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರದಲ್ಲಿ ಭಕ್ತರ ನಡುವೆ ಕಾಲ್ತುಳಿತ ನಡೆದಿದ್ದು, 12 ಮಂದಿ ಯಾತ್ರಿಗಳು ಸಾವಿಗೀಡಾಗಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಹೊಸ ವರ್ಷ ಹಿನ್ನೆಲೆಯಲ್ಲಿ ವೈಷ್ಣೋದೇವಿ ಮಂದಿರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಆದರೆ ತಡರಾತ್ರಿ 2 ಗಂಟೆ ಸುಮಾರಿಗೆ ಜನದಟ್ಟಣೆಯ ನಡುವೆ ಭಾರೀ ಕಾಲ್ತುಳಿತ ನಡೆದಿದೆ. ಜನರ ನಡುವೆ ವಾಗ್ಯುದ್ಧ ನಡೆದು ತಳ್ಳಾಟ ಆಗಿದ್ದು ಆನಂತರ ಕಾಲ್ತುಳಿತ ನಡೆದಿದೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್ ಭಾಗ್ ಸಿಂಗ್ ತಿಳಿಸಿದ್ದಾರೆ. ಮೃತ 12 ಮಂದಿಯಲ್ಲಿ ಎಂಟು ಮಂದಿಯ ಗುರುತು ಪತ್ತೆಯಾಗಿದೆ. ಪಂಜಾಬ್, ಹರ್ಯಾಣ, ದೆಹಲಿ ಮತ್ತು  ಜಮ್ಮು ಕಾಶ್ಮೀರದ ಒಬ್ಬ ವ್ಯಕ್ತಿ ಮೃತರು.

ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಮೃತರಿಗೆ ಕೇಂದ್ರ ಸರಕಾರದ ವತಿಯಿಂದ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಜಮ್ಮು ಕಾಶ್ಮೀರ ಸರಕಾರದಿಂದ ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ, ಗಾಯಾಳುಗಳಿಗೆ ತಲಾ ಎರಡು ಲಕ್ಷ ಪರಿಹಾರ ನೀಡುವುದಾಗಿ ಹೇಳಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಗವರ್ನರ್ ಮನೋಜ್ ಸಿನ್ಹಾ ಆದೇಶ ಮಾಡಿದ್ದಾರೆ. ತನಿಖೆಗೆ ಮುಖ್ಯ ಕಾರ್ಯದರ್ಶಿ ಮತ್ತು ಜಮ್ಮು ವಿಭಾಗದ ಎಡಿಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿದ್ದಾರೆ.

At least 12 were killed in a stampede at Mata Vaishno Devi shrine in Jammu & Kashmir on Saturday. Stampede triggered by a massive rush of devotees, officials said.