ಏ ಮೇರೆ ವತನ್ ಕೇ ಲೋಗೋ... ಗಾನ ಲೋಕದ ಮಹಾನ್ ದಂತಕತೆ ಅಸ್ತಂಗತ

06-02-22 11:46 am       HK Desk news   ದೇಶ - ವಿದೇಶ

ಗಾಯನ ಲೋಕದ ದಂತಕತೆ, ಗಾನ ಸಾಮ್ರಾಜ್ಞಿ, ಭಾರತದ ಗಾನ ಕೋಗಿಲೆ ಎಂದೇ ಹೆಸರುವಾಸಿಯಾಗಿದ್ದ ಭಾರತ ರತ್ನ ಲತಾ ಮಂಗೇಶ್ಕರ್ ಇನ್ನಿಲ್ಲ.

ಮುಂಬೈ, ಫೆ.6 : ಗಾಯನ ಲೋಕದ ದಂತಕತೆ, ಗಾನ ಸಾಮ್ರಾಜ್ಞಿ, ಭಾರತದ ಗಾನ ಕೋಗಿಲೆ ಎಂದೇ ಹೆಸರುವಾಸಿಯಾಗಿದ್ದ ಭಾರತ ರತ್ನ ಲತಾ ಮಂಗೇಶ್ಕರ್ ಇನ್ನಿಲ್ಲ. ತಮ್ಮ 92ರ ತುಂಬು ವಯಸ್ಸಿನಲ್ಲಿ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಅವರು ಇಂದು ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಕೆಲವು ದಿನಗಳ ಹಿಂದೆ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಉತ್ತಮಗೊಂಡಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಲತಾ ಗಂಭೀರ ಸ್ಥಿತಿಯಲ್ಲಿದ್ದರೂ, ಮತ್ತೆ ಸಾವಿನ ದವಡೆಯಿಂದ ಬದುಕಿ ಬರುತ್ತಾರೆಂದೇ ಅಭಿಮಾನಿಗಳು ನಂಬಿದ್ದರು. ಆದರೆ ಶನಿವಾರ ಮತ್ತೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಇಂದು ಬೆಳಗ್ಗೆ 8.12 ಗಂಟೆಗೆ ಸಾವನ್ನಪ್ಪಿರುವುದನ್ನು ಅವರ ಸೋದರಿ ಉಷಾ ಮಂಗೇಶ್ಕರ್ ದೃಢಪಡಿಸಿದ್ದಾರೆ. ಲತಾ ಮಂಗೇಶ್ಕರ್ ನಿಧನದಿಂದಾಗಿ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಲಾಗಿದೆ. ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಿ, ಅಗಲಿದ ಗಾಯನ ಲೋಕದ ದಂತಕತೆಗೆ ಗೌರವ ಸೂಚಿಸಲು ಕೇಂದ್ರ ಸರಕಾರ ಆದೇಶ ಮಾಡಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4.30ಕ್ಕೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕೋವಿಡ್ ಸೋಂಕಿನ ಜೊತೆಗೆ ನ್ಯುಮೋನಿಯಾ ಕೂಡ ಇದ್ದುದರಿಂದ ಶನಿವಾರ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದಾಗಿ ಲತಾ ದೀ ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಸ್ಥಿತಿ ತೀವ್ರ ಬಿಗಡಾಯಿಸಿದ್ದರಿಂದ ಶನಿವಾರ ಅವರನ್ನು ಕಾಣಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಗಣ್ಯರು ಬಂದಿದ್ದರು.

ಏಳು ದಶಕಗಳ ಸುದೀರ್ಘ ಗಾಯನ ಲೋಕದಲ್ಲಿ ಲತಾ ಮಂಗೇಶ್ಕರ್ ದೇಶಭಕ್ತಿ ಗೀತೆಗಳಿಂದ ತೊಡಗಿ ಬಾಲಿವುಡ್ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ಧ್ವನಿಯಾಗಿದ್ದರು. ಆಯೆ ಮೇರೆ ವತನ್ ಕೇ ಲೋಗೊ, ಲಾಗ್ ಜಾ ಗಲೇ, ಯೇ ಕಹಾಂ ಆಗೇ ಹೇ ಹಮ್, ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಹೀಗೆ ಹಲವಾರು ಆಲ್ಬಂ ಸಾಂಗ್ ಗಳು ಭಾರೀ ಜನಪ್ರಿಯತೆ ಕಂಡಿದ್ದವು. ದೇಶದ ಅತ್ಯುನ್ನತ ಗೌರವಗಳಾದ ಭಾರತ ರತ್ನ, ಪದ್ಮಭೂಷಣ, ಪದ್ಮಶ್ರೀ, ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಎಲ್ಲ ರೀತಿಯ ಗೌರವಗಳು ಸಂದಿದ್ದವು. ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್, ದಕ್ಷಿಣ ಭಾರತದ ಎಲ್ಲ ಚಿತ್ರರಂಗದ ತಾರೆಯರು ತೀವ್ರ ಕಂಬನಿ ಮಿಡಿದಿದ್ದಾರೆ.

It's a sad day for the Indian film industry as it has lost one of its legends! Legendary singer Lata Mangeshkar breathed her last due to multiple organ failure on Sunday (February 6) leaving the entire nation in sorrow. She was 92. The news of her passing away was confirmed by her sister Usha Mangeshkar.