ವಲಸೆ ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್ ಗೆ ವಿಶ್ವಸಂಸ್ಥೆಯ ಪ್ರಶಸ್ತಿ !

30-09-20 11:13 am       Headline Karnataka News Network   ಸಿನಿಮಾ

ನಟ ಸೋನು ಸೂದ್​ ಮಾನವೀಯ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆ ಯುಎನ್​ಡಿಪಿಯ ವಿಶೇಷ ಎಸ್​​ಡಿಜಿ (ವಿಶೇಷ ಮಾನವೀಯ ಕೆಲಸ) ಪ್ರಶಸ್ತಿ ನೀಡಿ ಗೌರವಿಸಿದೆ.

ಮುಂಬೈ, ಸೆಪ್ಟಂಬರ್ 30: ಲಾಕ್​ಡೌನ್​ ಕಾಲದಲ್ಲಿ ಬೀದಿಗೆ ಬಿದ್ದ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಾಲಿವುಡ್​ ನಟ ಸೋನು ಸೂದ್​​ ಅವರಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ. 

ಕೊರೊನಾದಿಂದಾಗಿ ದೇಶದಲ್ಲಿ ಏಕಾಏಕಿ ಲಾಕ್​ಡೌನ್ ಘೋಷಣೆಯಾಗಿದ್ದು ಬೀದಿಗೆ ಬಿದ್ದ ಲಕ್ಷಾಂತರ ಕಾರ್ಮಿಕರ ಪಾಲಿಗೆ ಸೋನು ಸೂದ್​​ ಆಪತ್ಬಾಂಧವನ ರೀತಿ ನೆರವಿಗೆ ಧಾವಿಸಿದರು. ತಮ್ಮದೇ ಗುಂಪು ಕಟ್ಟಿಕೊಂಡು ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಅದೆಷ್ಟೋ ಮಂದಿಗೆ ರಸ್ತೆ ಬದಿಯಲ್ಲೇ ಊಟದ ವ್ಯವಸ್ಥೆ ಮಾಡಿದ್ದರು. ಸೋನು ಸೂದ್ ಸೇವಾ ಕಾರ್ಯ ದೇಶದ ವಲಸೆ ಕಾರ್ಮಿಕರಿಗೆ ಸೀಮಿತವಾಗಿರಲಿಲ್ಲ. ವಿದೇಶಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರ ಸಂಕಷ್ಟಕ್ಕೂ ಸೋನು ಸೂದ್ ಮನಸ್ಸು ಮಿಡಿದಿತ್ತು. 

ಲಾಕ್​ಡೌನ್​ ಬಳಿಕ ನಿರಂತರವಾಗಿ ಸಹಾಯಗಳನ್ನು ಮಾಡುತ್ತಲೇ ಬರುತ್ತಿರುವ ನಟ ಸೋನು ಸೂದ್​ ಮಾನವೀಯ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆ ಯುಎನ್​ಡಿಪಿಯ ವಿಶೇಷ ಎಸ್​​ಡಿಜಿ (ವಿಶೇಷ ಮಾನವೀಯ ಕೆಲಸ) ಪ್ರಶಸ್ತಿ ನೀಡಿ ಗೌರವಿಸಿದೆ.

ಸೋಮವಾರ ಸಂಜೆ ನಡೆದ ವಿಶ್ವಸಂಸ್ಥೆಯ ಆನ್​ಲೈನ್​ ಸಮಾರಂಭದಲ್ಲಿ ಸೂದ್​​ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಪ್ರತಿಕ್ರಿಯಿಸಿದ ಸೋನು ಸೂದ್,​​ ಫಲಾಪೇಕ್ಷೆಗಳಿಲ್ಲದೆ ನಾನು ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ.