ಕಾಂತಾರ ನಾನು ಮಾಡಿದ್ದಲ್ಲ, ಅದು ದೈವ ಶಕ್ತಿಯಿಂದ ಆಗಿದ್ದು, ಸಿನಿಮಾದ ಯಶಸ್ಸಿಗೆ ಪಂಜುರ್ಲಿಯೇ ಕಾರಣ ; ರಿಷಬ್ ಶೆಟ್ಟಿ

04-10-22 10:26 pm       HK News Desk   ಸಿನಿಮಾ

ಕಾಂತಾರ ಅಂದರೆ ನಿಗೂಢವಾದ ಕಾಡು ಎಂದರ್ಥ. ನಾವು ದೈವಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಕಾಡಿನ ಮಧ್ಯದ ಮನುಷ್ಯ ಮತ್ತು ಈ ಮಣ್ಣಿಗಾಗಿ ನಡೆಯುವ ಸಂಘರ್ಷವೇ ಕಥಾವಸ್ತು.

ಮಂಗಳೂರು, ಅ.4: ಕಾಂತಾರ ಅಂದರೆ ನಿಗೂಢವಾದ ಕಾಡು ಎಂದರ್ಥ. ನಾವು ದೈವಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಕಾಡಿನ ಮಧ್ಯದ ಮನುಷ್ಯ ಮತ್ತು ಈ ಮಣ್ಣಿಗಾಗಿ ನಡೆಯುವ ಸಂಘರ್ಷವೇ ಕಥಾವಸ್ತು. ಆದರೆ ಕಾಂತಾರ ಚಿತ್ರ ಮೂಡಿಬಂದಿರುವ ಪರಿ, ಅದರ ಯಶಸ್ಸು ನನ್ನಿಂದಾಗಿದ್ದಲ್ಲ. ಅದು ಈ ಮಣ್ಣಿನ ದೈವದ ಶಕ್ತಿ. ಪಂಜುರ್ಲಿ ಮತ್ತು ಗುಳಿಗ ದೈವದ ಕಾರಣಿಕದಿಂದಲೇ ಕಾಂತಾರ ಚಿತ್ರ ವಿಶಿಷ್ಟವಾಗಿ ಮೂಡಿಬಂದಿದೆ. ಜನರನ್ನು ತಟ್ಟುವಂತಾಗಿದೆ. ಇದು ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿರುವ ‘ಕಾಂತಾರ’ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮಾತು.

ನಗರದಲ್ಲಿ ಕಾಂತಾರ ಚಿತ್ರ ತಂಡದ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ರಿಷಬ್ ಶೆಟ್ಟಿ, ಕಾಂತಾರ ಚಿತ್ರ ಮಾಡಿದ್ದಲ್ಲ, ಅದು ಆಗಿದ್ದು. ನನ್ನದೇನೂ ಇಲ್ಲ. ಇಡೀ ಚಿತ್ರತಂಡದ ಶ್ರಮ. ಮೇಲಾಗಿ ದೈವ ನರ್ತಕರಾಗಿ ಇಡೀ ಚಿತ್ರದ ಸೀಕ್ವೆನ್ಸ್, ದೈವದ ಚಿತ್ರಣ ಹೀಗೇ ಬರಬೇಕೆಂದು ಹೇಳಿಕೊಟ್ಟ ಮುಕೇಶ್ ಅವರ ಶ್ರಮ ಕಾರಣ ಎಂದು ಹೇಳಿದರು. ಚಿತ್ರದ ಶೂಟಿಂಗ್ ಬಗ್ಗೆ ಹೇಳಿದ ಅವರು, ನಮ್ಮ ದೈವಾರಾಧನೆ ಬಗ್ಗೆ ಇಂದಿನ ಹುಡುಗರಿಗೆ, ಯುವಕರಿಗೆ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಆದರೆ ದೈವಾರಾಧನೆ ಎನ್ನುವುದು ಸಮಾಜದ ಎಲ್ಲರನ್ನೂ ಒಳಗೊಳ್ಳಿಸುವ ಅದ್ಭುತ. ನಮ್ಮ ಮಣ್ಣಿನ ಗುಣವಾಗಿ ಅನಾದಿ ಕಾಲದಿಂದ ಹರಿದು ಬಂದಿದೆ. ಅಂಥ ವೈಶಿಷ್ಟ್ಯವನ್ನು ಇಡೀ ಜಗತ್ತಿಗೆ ತೋರಿಸಬೇಕೆಂದು ಪ್ರಯತ್ನ ಮಾಡಿದ್ದೇನೆ. ದೈವಗಳ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು. 

ದೈವ ನರ್ತಕರಿಗೆ ಚಿತ್ರದ ಅರ್ಪಣೆ 

ನಾವು ಕೇವಲ ಚಿತ್ರಕ್ಕಾಗಿ ಈ ಚಿತ್ರ ಮಾಡಿಲ್ಲ. ಭಯ, ಭಕ್ತಿಯಿಂದ ಪ್ರತೀ ದಿನದ ಶೂಟಿಂಗನ್ನೂ ಮಾಡಿದ್ದೇವೆ. ಪಂಜುರ್ಲಿ ದೈವದ ಶೂಟಿಂಗ್ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಹಾಕುತ್ತಿರಲಿಲ್ಲ. ಯಾರು ಕೂಡ ಮಾಂಸ ತಿನ್ನದೆ ಶುದ್ಧಾಚಾರ ಪಾಲಿಸಿದ್ದೇವೆ, ಸ್ವತಃ ನಾನು 36 ದಿನಗಳ ಕಾಲ ಶುದ್ಧಾಚಾರ ಪಾಲಿಸಿದ್ದೇನೆ. ನಮ್ಮ ದೈವದ ಶಕ್ತಿಯನ್ನು ಹೊರಗಿನವರಿಗೆ ತೋರಿಸಬೇಕಂದ್ರೆ ನಾವು ಅದರ ಬಗ್ಗೆ ತಿಳಿದುಕೊಂಡಿರಬೇಕು. ಅದಕ್ಕಾಗಿ ದೈವ ನರ್ತಕ ಮುಕೇಶ್ ಅವರನ್ನು ಜೊತೆಗಿಟ್ಟುಕೊಂಡಿದ್ದೇನೆ. ಈ ಚಿತ್ರವನ್ನು ಮುಕೇಶ್ ಮತ್ತು ಇಡೀ ದೈವ ನರ್ತನ ಸೇವೆ ನಡೆಸುವ ಕುಟುಂಬಸ್ಥರಿಗೆ ಅರ್ಪಿಸುತ್ತೇನೆ ಎಂದರು. ಡಬ್ ಮಾಡುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ಹಿಂದಿ, ಮಲಯಾಳಂ, ತೆಲುಗು ಭಾಷೆಗೆ ಡಬ್ ಮಾಡಲು ಅಲ್ಲಿನವರು ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಡಬ್ ಆಗಿ ಬರಲಿದೆ ಎಂದರು. 

ಚಿತ್ರದಲ್ಲಿ ಲೀಲಾ ಪಾತ್ರ ಮಾಡಿರುವ ಹೀರೋಯಿನ್ ಸಪ್ತಮಿ ಗೌಡ, ನಾನು ಕಾಂತಾರ ಎಂಟ್ರಿಯಾಗಿದ್ದೇ ಮಿಸ್ಟರಿ. ಎಲ್ಲೋ ನನ್ನ ಫೋಟೋ ನೋಡಿ ನಿರ್ದೇಶಕರು ಸೆಲೆಕ್ಟ್ ಮಾಡಿದ್ದರು. ನನಗೆ ಇಲ್ಲಿನ ಸಂಸ್ಕೃತಿ, ಕೋಲದ ಬಗ್ಗೆ ತಿಳಿದಿಲ್ಲ. ಇಲ್ಲಿನ ಭಾಷೆಯನ್ನೂ ಈಗಷ್ಟೇ ಕಲಿತುಕೊಂಡಿದ್ದೇನೆ. ಈಗ ಎಲ್ಲಾದ್ರೂ ಕೋಲ ಆಗುತ್ತಿದ್ದರೆ ನೋಡಬೇಕು ಎನಿಸತ್ತೆ ಎಂದರು. 

ಪಂಜುರ್ಲಿ ದೈವದ ಕಾರಣಿಕ ಅಷ್ಟೇ 

ದೈವ ನರ್ತಕ ಮುಕೇಶ್ ಮಾತನಾಡಿ, ದೈವಾರಾಧನೆ ಕುರಿತ ಚಿತ್ರದ ಬಗ್ಗೆ ಹೇಳಿದಾಗ ಯೋಚನೆ ಮಾಡಿದ್ದೆ. ಏನಾಗುತ್ತೋ ಅಂತ ಭಯವಿತ್ತು. ಆದರೆ ಕತೆ ಕೇಳಿದಾಗ ಆತ್ಮಕ್ಕೆ ಮುಟ್ಟುವಂತಾಗಿತ್ತು. ಚಿತ್ರ ದೊಡ್ಡ ಮಟ್ಟಕ್ಕೆ ಬರಬೇಕೆಂದು ಮಾಡಿದ್ದಲ್ಲ. ಈ ಚಿತ್ರದ ಕತೆಯನ್ನೂ ರಿಷಬ್ ಶೆಟ್ಟಿ ಬರೆದಿದ್ದು ಅಂತ ಹೇಳೋದಿಲ್ಲ. ಈ ಕಾರ್ಯವನ್ನು ದೈವ ಪಂಜುರ್ಲಿಯೇ ರಿಷಬ್ ಅವರಲ್ಲಿ ಮಾಡಿಸಿದೆ. ಎಷ್ಟು ಶ್ರದ್ಧೆಯಿಂದ ಶೂಟಿಂಗ್ ಮಾಡಿದ್ದಾರಂದ್ರೆ, ಯಾರು ಕೂಡ ಸೆಟ್ ನಲ್ಲಿ ಚಪ್ಪಲಿಯೂ ಹಾಕಿಲ್ಲ. ಮಧು ಮಾಂಸ ಬಿಟ್ಟಿದ್ದಾರೆ. ಸ್ಥಳದಲ್ಲಿ ನಾಗನ, ಗುಳಿಗನ ಶಕ್ತಿ ಇತ್ತು. ಪವಾಡ ಆಗಿಲ್ಲ ಅನ್ನುವುದಿಲ್ಲ. ಕೆಲವೊಮ್ಮೆ ನಮಗೆ ಅನುಭವಕ್ಕೆ ಬಂದಿದೆ. ಬೆಂಕಿ ಬಿದ್ದಿದ್ದು, ನಾಗ ಕಂಡಿದ್ದು ಇದೆ. ಅದನ್ನು ಹೇಳೋಕೆ ಹೋಗುವುದಿಲ್ಲ. ಅದು ದೈವದ ಶಕ್ತಿಯಾಗಿತ್ತು ಎಂದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಮಂಡ್ಯ, ಬೀದರ್, ಗುಲ್ಬರ್ಗ ಎಲ್ಲ ಕಡೆ ಪ್ರಮೋಶನ್ ಬರ್ತಾ ಇದೆ,. ಮಂಡ್ಯದವರು ಕರಗ ಕುಣಿತದ ಬಗ್ಗೆ ಹೇಳುತ್ತಾರೆ, ಏನೋ ನಮ್ಮದೇ ಸಂಸ್ಕೃತಿ ಅಂತಾರೆ. ಕಾಸರಗೋಡು ಸರಕಾರಿ ಶಾಲೆ ಚಿತ್ರ ಮಂಗಳೂರಿನಲ್ಲಿ ರೆಕಾರ್ಡ್ ಮಾಡಿತ್ತು. ಕಾಂತಾರ ಅದನ್ನು ಮೀರಿಸಿದೆ ಎಂದರು. ಕಾಮಿಡಿ ನಟ ಪ್ರಕಾಶ್ ತುಮ್ಮಿನಾಡು ಮಾತನಾಡಿ, ಈ ಚಿತ್ರ ನನ್ನ ಪಾಲಿಗೆ ಜೀವನದ ದೊಡ್ಡ ಸಾಧನೆ. ಇಂಥ ಸಿನಿಮಾದಲ್ಲಿ ಪಾತ್ರ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ಮುಂದೆಯೂ ಇಂಥ ಚಿತ್ರ ಮಾಡುತ್ತೇವೋ ಅಂತ ಗೊತ್ತಿಲ್ಲ. ಈ ಸಿನಿಮಾಕ್ಕಾಗಿ ರಿಷಬ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದರ ಶ್ರೇಯ ಎಲ್ಲವೂ ಅವರಿಗೇ ಸಲ್ಲಬೇಕು ಎಂದರು.

ಕಂಬಳದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ, ಕಂಬಳವನ್ನು ನಮ್ಮ ಮನೆಯ ಗದ್ದೆಯಲ್ಲಿಯೇ ಮಾಡುತ್ತಿದ್ದರು. ಹಾಗಾಗಿ ಕಂಬಳ ಹೊಸತಲ್ಲ. ಆದರೆ ಹಳೆಯ ಕಾಲದ ಕಂಬಳವನ್ನು ತೋರಿಸಬೇಕಿತ್ತು. ಹಾಗಾಗಿ ಹಲಗೆ ಕಟ್ಟಿ ತೋರಿಸಿದ್ದೇವೆ. ಆದರೆ ಕಂಬಳದಲ್ಲಿ ಓಡುವುದು ಕಷ್ಟವಾಗಿತ್ತು. ಹಲವು ಬಾರಿ ಬಿದ್ದು ಗಾಯಗೊಂಡಿದ್ದೆ. ನಮ್ಮದೇ ಕೆರಾಡಿಯ ಗದ್ದೆಯಲ್ಲಿ ಕಂಬಳ ಸೀನ್ ಮಾಡಿದ್ದೇವೆ. ಒಂದು ನಿಮಿಷದ ಸೀನ್ ಆದ್ರೂ ಅದಕ್ಕೆ ಭಾರೀ ಕಷ್ಟ ಪಟ್ಟಿದ್ದೇವೆ ಎಂದರು. ಶಿವದೂತೆ ಗುಳಿಗೆ ಖ್ಯಾತಿಯ ಸ್ವರಾಜ್ ಶೆಟ್ಟಿ ಕೂಡ ಪಾತ್ರ ಮಾಡಿದ್ದು ತನಗೊಂದು ಅದ್ಭುತ ಅನುಭವ ಎಂದು ಹೇಳಿದರು.

Kantara movie was not mine it was made by Daiva through me says Rishab Shetty in Mangaluru. The entire victory of the movie is through Daiva he added.