ನಟ ನವಾಜುದ್ದೀನ್ ಸಿದ್ದಿಕಿಗೆ ಸಿಕ್ತು ರಿಲೀಫ್ ; ಬಂಧನಕ್ಕೆ ಹೈಕೋರ್ಟ್ ತಡೆ !

26-10-20 02:06 pm       Headline Karnataka News Network   ಸಿನಿಮಾ

ಪತ್ನಿಯಿಂದಲೇ ಲೈಂಗಿಕ ಹಿಂಸೆ, ಕೌಟುಂಬಿಕ ದೌರ್ಜನ್ಯ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಕಿಗೆ ಅಲಹಾಬಾದ್ ಹೈಕೋರ್ಟ್‌ ತಾತ್ಕಾಲಿಕ ರಿಲೀಫ್ ನೀಡಿದೆ.

ಅಲಹಾಬಾದ್, ಅಕ್ಟೋಬರ್.26 : ಲೈಂಗಿಕ ಹಿಂಸೆ, ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿ ಬಂಧನದ  ಭೀತಿ ಎದುರಿಸುತ್ತಿದ್ದ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಕಿಗೆ ಸದ್ಯ ಅಲಹಾಬಾದ್ ಹೈಕೋರ್ಟ್ ಆತನ  ಬಂಧನಕ್ಕೆ ತಡೆ ನೀಡಿದೆ.

ನವಾಜುದ್ಧಿನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ಕೆಲವು ದಿನಗಳ ಹಿಂದೆ ನವಾಜುದ್ಧೀನ್ ಸಿದ್ಧಿಕಿ ಹಾಗೂ ಅವರ ಕುಟುಂಬದ ಮೂವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಲೈಂಗಿಕ ಹಿಂಸೆಯ ದೂರು ನೀಡಿದ್ದರು. ದೂರಿನ ಮೇರೆಗೆ ಎಫ್ ಐ ಆರ್ ಕೂಡ ದಾಖಲಾಗಿದ್ದು ನವಾಜುದ್ಧೀನ್ ನನ್ನು ಬಂಧಿಸಲು ಸಹ ಪೊಲೀಸರು ತಯಾರಾಗಿದ್ದರು.

ಆದರೆ ತಮ್ಮ ವಿರುದ್ಧದ ಪ್ರಕರಣದ ಕುರಿತು ನವಾಜುದ್ಧೀನ್ ಸಿದ್ಧಿಕಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಹೈಕೋರ್ಟ್ ನವಾಜುದ್ಧೀನ್ ಸಿದ್ಧಿಕಿ ಸೇರಿ ಮೂವರನ್ನು ಬಂಧಿಸದಂತೆ ತಡೆ ನೀಡಿದೆ.

ನವಾಜುದ್ಧೀನ್ ಸಿದ್ಧಿಕಿ, ಮಿನಾಜುದ್ಧೀನ್ ಸಿದ್ಧಿಕಿ, ಫೈಜುದ್ಧೀನ್ ಸಿದ್ಧಿಕಿ, ಮೆಹರುನ್ನೀಸಾ ಸಿದ್ಧಿಕಿ, ಅಯಾಜುದ್ಧೀನ್ ಸಿದ್ಧಿಕಿ ವಿರುದ್ಧ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ಧಿಕಿ ದೂರು ನೀಡಿದ್ದರು. ಎಲ್ಲರ ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್, ಮಿನಾಜುದ್ಧೀನ್ ಸಿದ್ಧಿಕಿ ಬಂಧನಕ್ಕೆ ಮಾತ್ರ ತಡೆ ನೀಡಿಲ್ಲ. ಮಿನಾಜುದ್ಧೀನ್ ಸಿದ್ಧಿಕಿ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ಹಿಂಸೆ ಪ್ರಕರಣ ದಾಖಲಾಗಿರುವುದರಿಂದ ತ್ರಿಸದಸ್ಯ ಪೀಠವು ಮಿನಾಜುದ್ಧೀನ್‌ ಬಂಧನಕ್ಕೆ ತಡೆ ನೀಡಿಲ್ಲ. ಇದು ನವಾಜುದ್ಧೀನ್‌ಗೆ ತಾತ್ಕಾಲಿಕ ನಿರಾಳ ಮಾತ್ರವೇ ಆಗಿದೆ.