ವಿಷ್ಣು ಪುತ್ಥಳಿ ಧ್ವಂಸ ಮಾಡಿದ ವೃತ್ತದಲ್ಲೇ ಮತ್ತೆ ನಿರ್ಮಾಣ: ಗುದ್ದಲಿ ಪೂಜೆ ನೆರವೇರಿಸಿದ ಅನಿರುದ್ಧ್

28-12-20 12:54 pm       Source: FILMIBEAT   ಸಿನಿಮಾ

ನಟ ಡಾ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಇದೀಗ, ಅದೇ ವೃತ್ತದಲ್ಲಿ ವಿಷ್ಣುದಾದಾನ ಪ್ರತಿಮೆ ಮತ್ತೆ ನಿರ್ಮಾಣವಾಗುತ್ತಿದೆ.

ಬೆಂಗಳೂರು, ಡಿ.28: ಮಾಗಡಿ ರಸ್ತೆಯ ಟೋಲ್ ಗೇಟ್‌ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಸ್ಥಾಪನೆ ಮಾಡಿದ್ದ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಇದೀಗ, ಅದೇ ವೃತ್ತದಲ್ಲಿ ವಿಷ್ಣುದಾದಾನ ಪ್ರತಿಮೆ ಮತ್ತೆ ನಿರ್ಮಾಣವಾಗುತ್ತಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಸೋಮವಾರ ಬೆಳಗ್ಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲೇ ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು ಬೇಡಿಕೆಯಿಟ್ಟಿದ್ದ ಅಭಿಮಾನಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಂದ ಸಮ್ಮತಿ ಸಹ ಪಡೆದುಕೊಂಡಿದ್ದಾರೆ.



ಅದೇ ವೃತ್ತ, ಬೇರೆ ಸ್ಥಳದಲ್ಲಿ ವಿಷ್ಣು ಪ್ರತಿಮೆ

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಆಗಿರುವ ಸ್ಥಳದಿಂದ 50 ಮೀಟರ್ ದೂರದಲ್ಲಿ ಮತ್ತೊಂದು ಸ್ಥಳವನ್ನು ಗುರುತಿಸಿ, ಅಲ್ಲಿ ವಿಷ್ಣು ಪುತ್ಥಳಿ ನಿರ್ಮಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಪುತ್ಥಳಿ ನಿರ್ಮಾಣ ಕಾರ್ಯ ಸಹ ಆರಂಭವಾಗಿದೆ. ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಸೋಮವಾರ ಬೆಳಗ್ಗೆ ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ.



ಡಿಸೆಂಬರ್ 30ಕ್ಕೆ ಪ್ರತಿಮೆ ಅನಾವರಣ

ಡಿಸೆಂಬರ್ 28 ರಂದು ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಿರ್ಮಾಣವಾಗಿದ್ದು, ಡಿಸೆಂಬರ್ 30 ರಂದು ಈ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇನ್ನೊಂದೇ ದಿನದಲ್ಲಿ ಮಾಗಡಿ ರಸ್ತೆಯ ಟೋಲ್ ಗೇಟ್‌ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಮತ್ತೆ ವಿಷ್ಣು ಪ್ರತಿಮೆ ತಲೆ ಎತ್ತಲಿದೆ.


ಸಚಿವರ ಒಪ್ಪಿಗೆ ಸಿಕ್ಕಿದೆ

ಸುಮಾರು ಆರು ಅಡಿ ಎತ್ತರದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪಿಸಲಾಗುತ್ತದೆ ಎಂದು ವಿಷ್ಣು ಅಭಿಮಾನಿಗಳು ಮಾಹಿತಿ ನೀಡಿದ್ದಾರೆ. ಅದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಸಚಿವ ವಿ ಸೋಮಣ್ಣ ಅವರು ಸಹ ಒಪ್ಪಿಗೆ ನೀಡಿದ್ದು, ಪುತ್ಥಳಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.



ಆರೋಪಿಗಳನ್ನು ಬಂಧಿಸಿ

ಈ ಹಿಂದೆ ವಿಷ್ಣು ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿ ವಿಷ್ಣು ಸೇನೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ನಟ ಸುದೀಪ್, ಜಗ್ಗೇಶ್, ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರು ಸಹ ಈ ಘಟನೆಯನ್ನು ಖಂಡಿಸಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿ ಎಂದು ಆಗ್ರಹಿಸಿದ್ದಾರೆ.

This News Article is a Copy of FILMIBEAT