ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ನಿಧನ

10-01-21 02:13 pm       Source: FILMIBEAT Manjunatha C   ಸಿನಿಮಾ

ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ನಿನ್ನೆ ಚೆನ್ನೈನಲ್ಲಿ ನಿಧನಹೊಂದಿದ್ದಾರೆ.

ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ನಿನ್ನೆ (ಜನವರಿ 09) ರಂದು ಚೆನ್ನೈನಲ್ಲಿ ನಿಧನಹೊಂದಿದ್ದಾರೆ. ಆರ್.ರತ್ನ ಅವರಿಗೆ 97 ವರ್ಷ ವಯಸ್ಸಾಗಿತ್ತು. ಆರ್.ರತ್ನ ನಿಜವಾದ ಹೆಸರು ಜೀವನರತ್ನ.

ಮೊದಲಿಗೆ ನಟನಾಗಿ ವೃತ್ತಿ ಆರಂಭಿಸಿದ ರತ್ನ, ತಮಿಳಿನ 'ದಾನಶೂರ ಕರ್ಣ' ಸಿನಿಮಾದಲ್ಲಿ ಋಷಿ ಕೇತು ಪಾತ್ರದಲ್ಲಿ ನಟಿಸಿದ್ದರು. ನಂತರ 1961ರಲ್ಲಿ ಬಿಡುಗಡೆ ಆದ 'ಚಕ್ರವರ್ತಿ ತಿರುಮಗಲ' ಮೂಲಕ ಸ್ವತಂತ್ರ್ಯ ಸಂಗೀತ ನಿರ್ದೇಶಕರಾದ ಜೀವರತ್ನ. 1963 'ಮನೆ ಕಟ್ಟಿ ನೋಡು' ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದರು. 

ಕನ್ನಡದಲ್ಲಿ ನಮ್ಮ ಊರು, ಬಾಂಧವ್ಯ, ಕಪ್ಪು-ಬಿಳುಪು, ಭಲೇ ಜೋಡಿ, ಪೂರ್ಣಿಮಾ ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು ಜೀವರತ್ನ ಅಲಿಯಾಸ್ ಆರ್.ರತ್ನ.

ವಯಸ್ಸಾದ ಅವರನ್ನು ಅವರ ಅಭಿಮಾನಿಯೇ ಬಹುವರ್ಷಗಳಿಂದ ಸಾಕುತ್ತಿದ್ದರು ಎಂಬುದು ವಿಶೇಷ. ಜೀವರತ್ನ ಅವರ ಅಭಿಮಾನಿಯಾದ ವೆಂಕಟರಾಮಯ್ಯ, ಜೀವರತ್ನರನ್ನು ಮಗುವಿನಂತೆ ನೋಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಜೀವರತ್ನ ಹೆಸರಲ್ಲಿ ಸಂಗೀತ ಶಾಲೆಯೊಂದನ್ನು ಸಹ ಸ್ಥಾಪಿಸಿದ್ದರು.

ಇಳಿಯ ವಯಸ್ಸಿನಲ್ಲೂ ಹಾರ್ಮೊನಿಯಂ ನುಡಿಸುವುದು ಬಿಟ್ಟಿರಲಿಲ್ಲ ಎಂದು ಅವರ ಪರಿಚಯದವರು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಂಡಿದ್ದು, ಹಾರ್ಮೊನಿಯಂ ನುಡಿಸುತ್ತಾ ತಮ್ಮದೇ ಸಂಯೋಜನೆಯ ಹಾಡುಗಳನ್ನು ಹಾಡುತ್ತಿರುತ್ತಿದ್ದರಂತೆ ಜೀವರತ್ನ.

97 ವಯಸ್ಸಿನ ಜೀವರತ್ನ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಚೆನ್ನೈನಲ್ಲಿ ಅವರು ವಿಧಿವಶರಾಗಿದ್ದಾರೆ.

This News Article is a Copy of FILMIBEAT