ರಾಜಕೀಯ ಪ್ರವೇಶಕ್ಕೆ ಒತ್ತಾಯಿಸಿ ರಜನೀಕಾಂತ್ ಅಭಿಮಾನಿಗಳಿಂದ ಜಾಥಾ

11-01-21 11:57 am       Source: FILMIBEAT Manjunatha C   ಸಿನಿಮಾ

ರಜನೀಕಾಂತ್ ರಾಜಕೀಯ ಪ್ರವೇಶ ಮಾಡಲೇಬೇಕು, ಎಂದು ಒತ್ತಾಯಿಸಿ ರಜನೀಕಾಂತ್ ಅಭಿಮಾನಿಗಳು, ಬೆಂಬಲಿಗರು ಬೃಹತ್ ಒತ್ತಾಯ ಜಾಥಾವನ್ನು ಚೆನ್ನೈನಲ್ಲಿ ನಡೆಸಿದರು.

ಚೆನ್ನೈ, ಜ.11: ರಾಜಕೀಯ ಪ್ರವೇಶಿಸುತ್ತೇನೆ ಎಂದು ಘೋಷಿಸಿದ್ದ ನಟ ರಜನೀಕಾಂತ್ ಆ ನಂತರ ಅನಾರೋಗ್ಯ ಕಾರಣ ನೀಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಆದರೆ ರಜನೀಕಾಂತ್ ರಾಜಕೀಯ ಪ್ರವೇಶ ಮಾಡಲೇಬೇಕು, ಪಕ್ಷವೊಂದನ್ನು ಕಟ್ಟಲೇ ಬೇಕು ಎಂದು ಒತ್ತಾಯಿಸಿ ಇಂದು (ಜನವರಿ 10) ರಜನೀಕಾಂತ್ ಅಭಿಮಾನಿಗಳು, ಬೆಂಬಲಿಗರು ಬೃಹತ್ ಒತ್ತಾಯ ಜಾಥಾವನ್ನು ಚೆನ್ನೈನಲ್ಲಿ ನಡೆಸಿದರು.

ಪೊಲೀಸರು 200 ಮಂದಿಗೆ ಮಾತ್ರವೇ ಸ್ಥಳದಲ್ಲಿ ಸೇರಲು ಅವಕಾಶಕೊಟ್ಟಿದ್ದರು, ಆದರೆ 2000 ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸ್ಥಳದಲ್ಲಿ ಹಾಜರಿದ್ದು, ರಜನೀಕಾಂತ್ ಪರವಾಗಿ ಘೋಷಣೆಗಳನ್ನು ಕೂಗಿದರು. 'ಈಗ ಅಲ್ಲದಿದ್ದರೆ ಇನ್ನೆಂದಲೂ ಇಲ್ಲ', 'ಬಾ ತಲೈವಾ ಬಾ' ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ರಜನೀಕಾಂತ್ ಅಭಿಮಾನಿಗಳು ರಜನೀಕಾಂತ್ ಪೋಸ್ಟರ್‌ಗಳನ್ನು ಪ್ರದರ್ಶಿಸಿ, ರಜನೀಕಾಂತ್ ಮತ್ತೆ ರಾಜಕೀಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

'ರಜನೀ ಮಕ್ಕಳ್ ಮಂಡ್ರಮ್‌' ನೀಡಿದ್ದ ಎಚ್ಚರಿಕೆಯ ಹೊರತಾಗಿಯೂ ಸಾಕಷ್ಟು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು. 'ಈ ರೀತಿಯ ಒತ್ತಾಯಗಳನ್ನು, ಪ್ರತಿಭಟನೆಗಳನ್ನು ಮಾಡುವುದರಿಂದ ರಜನೀಕಾಂತ್ ಮನಸ್ಸಿಗೆ ಬೇಸರವಾಗುತ್ತದೆ. ಜನರು ಯಾರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ' ಎಂದು ರಜನಿಕಾಂತ್ ಮಕ್ಕಳ್ ಮಂಡ್ರನ್ ಎಚ್ಚರಿಕೆ ನೀಡಿತ್ತು.



ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಒತ್ತಾಯ ಜಾಥಾದಲ್ಲಿ ರಜನೀಕಾಂತ್ ಹಾಡುಗಳು, ಡೈಲಾಗ್‌ಗಳನ್ನು ಪ್ರಸಾರ ಮಾಡಲಾಯಿತು. ನಟ ರಜನೀಕಾಂತ್ ಅವರು ರಾಜಕೀಯ ಪ್ರವೇಶ ಮಾಡುವುದಾಗಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಹೇಳಿದ್ದರು.

ಡಿಸೆಂಬರ್ 31 ರಂದು ಪಕ್ಷದ ಹೆಸರು, ಲಾಂಛನ ಬಿಡುಗಡೆ ಮಾಡಿ, ಜನವರಿ ತಿಂಗಳಲ್ಲಿ ದೊಡ್ಡದಾಗಿ ಪಕ್ಷದ ಉದ್ಘಾಟನಾ ಸಮಾರಂಭ ಮಾಡಲಾಗುವುದು ಎಂದಿದ್ದರು. ಆದರೆ ಡಿಸೆಂಬರ್ 25 ರಂದು ಬೆಳಿಗ್ಗೆ ರಜನೀಕಾಂತ್ ಅವರ ಆರೋಗ್ಯದಲ್ಲಿ ಏರು-ಪೇರಾದ ಕಾರಣ ಅವರನ್ನು ಹೈದರಾಬಾದ್‌ನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆ ನಂತರ ಡಿಸೆಂಬರ್ 29 ರಂದು ತಮ್ಮ ರಾಜಕೀಯ ಪ್ರವೇಶದ ನಿರ್ಧಾರವನ್ನು ರಜನೀಕಾಂತ್ ಹಿಂಪಡೆದರು.

This News Article is a Copy of FILMIBEAT