ಸುಳ್ಳು ಸುದ್ದಿ ಪ್ರಕಟಿಸಿದ ಚಾನೆಲ್‌ ವಿರುದ್ಧ ರಘು ದೀಕ್ಷಿತ್ ಗರಂ

11-01-21 01:08 pm       Source: FILMIBEAT Manjunatha C   ಸಿನಿಮಾ

'ರಘು ದೀಕ್ಷಿತ್ ಆತ್ಮಹತ್ಯೆ, ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ, ಏನಾಯ್ತು?' ಎಂಬ ಹೆಡ್‌ಲೈನ್ ನೀಡಿ ಯೂಟ್ಯೂಬ್ ಚಾನೆಲ್ ಒಂದು ಸುದ್ದಿಯೊಂದನ್ನು ಪ್ರಕಟಿಸಿದೆ.

ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕುರಿತು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿದ್ದು. ಸುಳ್ಳು ಸುದ್ದಿ ಪ್ರಕಟಿಸಿರುವ ಯೂಟ್ಯೂಬ್ ಚಾನೆಲ್‌ ಮೇಲೆ ಗರಂ ಆಗಿದ್ದಾರೆ ರಘು ದೀಕ್ಷಿತ್. 'ರಘು ದೀಕ್ಷಿತ್ ಆತ್ಮಹತ್ಯೆ, ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ, ಏನಾಯ್ತು?' ಎಂಬ ಹೆಡ್‌ಲೈನ್ ನೀಡಿ ಯೂಟ್ಯೂಬ್ ಚಾನೆಲ್ ಒಂದು ಸುದ್ದಿಯೊಂದನ್ನು ಪ್ರಕಟಿಸಿದೆ.

ಆದರೆ ವಿಡಿಯೋನಲ್ಲಿ 'ರಘು ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಹೇಳಿಲ್ಲ. ಬದಲಿಗೆ ರಘು ದೀಕ್ಷಿತ್ ಖಿನ್ನತೆಗೆ ಒಳಗಾಗಿದ್ದರು. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಆದರೆ ಹೆಡ್‌ಲೈನ್ ನಲ್ಲಿ ಮಾತ್ರ 'ರಘು ದೀಕ್ಷಿತ್ ಆತ್ಮಹತ್ಯೆ' ಎಂದು ದೊಡ್ಡದಾಗಿ ಹಾಕಿ ಓದುಗರು ದಾರಿ ತಪ್ಪುವಂತೆ ಮಾಡಿದ್ದಾರೆ.

ಯೂಟ್ಯೂಬ್ ಚಾನೆಲ್‌ನ ವಿಡಿಯೋದ ಸ್ಕ್ರೀನ್‌ ಶಾಟ್ ಹಂಚಿಕೊಂಡಿರುವ ರಘು ದೀಕ್ಷಿತ್, 'ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ, ಆದರೆ ಇದು ಎಲ್ಲವನ್ನೂ ಮೀರಿಸಿದ್ದು' ಎಂದು ವ್ಯಂಗ್ಯ ಮಾಡಿದ್ದಾರೆ. ಜೊತೆಗೆ ಈ ಚಾನೆಲ್‌ ವಿರುದ್ಧ ದೂರು ನೀಡುವುದು ಹೇಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

'ಫಿಲ್ಮ್ ತಂತ್ರ24' ಹೆಸರಿನ ಯೂಟ್ಯೂಬ್ ಚಾನೆಲ್‌ನವರು ಈ ಸುದ್ದಿ ಪ್ರಕಟಿಸಿದ್ದಾರೆ. ರಘು ದೀಕ್ಷಿತ್ ಮಾತ್ರವೇ ಅಲ್ಲದೆ. ಇನ್ನೂ ಕೆಲವರ ಬಗ್ಗೆ ಸುಳ್ಳು ಸುದ್ದಿಗಳನ್ನು ಈ ಚಾನೆಲ್ ಪ್ರಕಟಿಸಿದೆ. ನಟಿ ಅಮೂಲ್ಯಗೆ ಅಪಘಾತವಾಗಿದೆ ಎಂಬ ಸುದ್ದಿಯನ್ನು ಸಹ ಈ ಯೂಟ್ಯೂಬ್ ಚಾನೆಲ್ ಪ್ರಕಟಿಸಿದೆ.

ನಟ ರಘು ದೀಕ್ಷಿತ್ ಇತ್ತೀಚೆಗೆ ನಿರೂಪಕಿ ಅನುಶ್ರೀಗೆ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದಲ್ಲಿ ತಾವು ಖಿನ್ನತೆಗೆ ಒಳಗಾಗಿದ್ದುದಾಗಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾಗಿ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಈ ಯೂಟ್ಯೂಬ್ ಚಾನೆಲ್ ಹೀಗೆ ತಿರುಚಿದ, ದಾರಿ ತಪ್ಪಿಸುವ ಸುದ್ದಿಯನ್ನು ಪ್ರಕಟಿಸಿದೆ.

This News Article is a Copy of FILMIBEAT