ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು

18-01-21 01:23 pm       Source: FILMIBEAT Shruthi Gk   ಸಿನಿಮಾ

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸಿರುವ ಬಹುನಿರೀಕ್ಷೆಯ ವೆಬ್ ಸೀರಿಸ್ 'ತಾಂಡವ್' ವಿವಾದಕ್ಕೆ ಸಿಲುಕಿದೆ.

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯ, ಸುನಿಲ್ ಗ್ರೋವರ್, ಗೌಹರ್ ಖಾನ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ನಟಿಸಿರುವ ಬಹುನಿರೀಕ್ಷೆಯ ವೆಬ್ ಸೀರಿಸ್ 'ತಾಂಡವ್' ವಿವಾದಕ್ಕೆ ಸಿಲುಕಿದೆ. ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿರುವ ತಾಂಡವ್ ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರು ಸಿಡಿದೆದಿದ್ದಾರೆ. ರಾಜಕೀಯ ಕಥಾಹಿನ್ನಲೆ ಇರುವ ಈ ಸರಣಿಯಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ, ತಾಂಡವ್ ವೆಬ್ ಸರಣಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಟ ಸೈಫ್ ಅಲಿ ಖಾನ್ ಅವರನ್ನು ಕಟುವಾಗಿ ಟೀಕಿಸಿದ ಬಿಜೆಪಿ ನಾಯಕ ರಾಮ್ ಕದಮ್, ಹಿಂದೂ ಧಾರ್ಮಿಕ ಭಾವನೆಗಳನ್ನು ನೋಯಿಸುವ ಸರಣಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದಿದ್ದಾರೆ.

ತಾಂಡವ್ ನಲ್ಲಿ ಶಿವನ ಕುರಿತು ಒಂದು ದೃಶ್ಯವಿದೆ. ಆ ದೃಶ್ಯದಲ್ಲಿ ನಟ ಮೊಹಮ್ಮದ್ ಜೆಶಾನ್ ಆಯೂಬ್, ಕೈಯಲ್ಲಿ ಶಿವನ ತ್ರಿಶೂಲ ಮತ್ತು ಡಮರುಗವನ್ನು ಹಿಡಿದು ಕೊಂಡಿದ್ದಾರೆ. ಆದರೆ ಅದನ್ನು ಆಕ್ಷೇಪಾರ್ಹವಾಗಿ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ದೂರು ನೀಡಿರುವ ಬಿಜೆಪಿ ನಾಯಕ ರಾಮ್ ಕದಮ್ 'ಬಾಲಿವುಡ್ ನ ಕೆಲವು ಸಿನಿಮಾಗಳು ಮತ್ತು ವೆಬ್ ಸೀರಿಸ್ ಗಳಲ್ಲಿ ಹಿಂದೂ ದೇವರನ್ನು ಅಗೌರವ ಗೊಳಿಸಲಾಗುತ್ತಿದೆ ಯಾಕೆ? ತಾಂಡವ್ ನಲ್ಲಿ ಒಬ್ಬ ನಟ ಶಿವನನ್ನು ಗೇಲಿ ಮಾಡಿದ್ದಾರೆ. ಹಿಂದೂ ದಾರ್ಮಿಕ ಭಾವನೆಗೆ ಅಗೌರವ ತಂದಿದ್ದಾರೆ. ಈ ಭಾಗವನ್ನು ತೆಗೆದು ಹಾಕಬೇಕು ಅಲ್ಲದೆ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು.

ಬದಲಾವಣೆ ಮಾಡುವವರೆಗೂ ಬಿಜೆಪಿ ತಾಂಡವ್ ಅನ್ನು ಬಹಿಷ್ಕರಿಸುತ್ತದೆ' ಎಂದು ಹೇಳಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರನ್ನು ಭೇಟಿಯಾಗಿರುವ ರಾಮ್ ಕದಮ್ ಮುಂಬೈನ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಬಿಜೆಪಿ ಶಾಸಕ ರಾಮ್ ಕದಮ್ ದೂರು ದಾಖಲಿಸಿದ್ದಾರೆ. ತಾಂಡವ್ ವೆಬ್ ಸರಣಿಗೆ ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿದ್ದಾರೆ. ಈ ಸರಣಿ ಅಮೆಜಾನ್ ಪ್ರೈಮ್ ನಲ್ಲಿ ಜನವರಿ 15ರಂದು ರಿಲೀಸ್ ಆಗಿದ್ದು, ಒಟ್ಟು 9 ಎಪಿಸೋಡ್ ಗಳಿವೆ. ನಟ ಸೈಫ್ ಅಲಿ ಖಾನ್ ಸಮರ ಪ್ರತಾಪ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

This News Article is a Copy of FILMIBEAT