ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸುಳ್ಳು ಮಾಹಿತಿ: ಸಲ್ಮಾನ್ ಖಾನ್ ನಿರಾಳ

12-02-21 03:45 pm       Source: FILMIBEAT   ಸಿನಿಮಾ

ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಪರ ಆದೇಶ ಬಂದಿದೆ.

ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರ ಆದೇಶ ಬಂದಿದೆ. ಜೋಧಪುರ ನ್ಯಾಯಾಲಯಕ್ಕೆ 2003 ರಲ್ಲಿ ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ಖಾನ್, ತಮ್ಮ ಬಂದೂಕು ಪರವಾನಗಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಇದನ್ನು ರಾಜಸ್ಥಾನ ಸರ್ಕಾರವು ಪ್ರಶ್ನಿಸಿತ್ತು.

ಈ ಸಂಬಂಧ ವಿಚಾರಣೆ ನಡೆಎಸಿದ ನ್ಯಾಯಾಲಯವು ರಾಜಸ್ಥಾನದ ಸರ್ಕಾರದ ಅರ್ಜಿಯನ್ನು ರದ್ದು ಮಾಡಿದೆ. ಬಂದೂಕಿನ ಪರವಾನಗಿ ಕಳೆದು ಹೋಗಿದೆ ಎಂದು ಸಲ್ಮಾನ್ ಖಾನ್ ತಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದರು. ಆದರೆ ಬಂದೂಕಿನ ಪರವಾನಗಿ ಕಳೆದು ಹೋಗಿರಲಿಲ್ಲ ಬದಲಿಗೆ ಪರವಾನಗಿ ನವೀಕರಿಸಲು ನೀಡಲಾಗುತ್ತಿತ್ತು. ವಿಚಾರಣೆಯ ಹಾದಿ ತಪ್ಪಿಸಲು ಸಲ್ಮಾನ್ ಖಾನ್ ಹೀಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಆದರೆ ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲರು, 'ಸಲ್ಮಾನ್ ಖಾನ್ ಗೆ ಅರಿವಿಲ್ಲದಂತೆ ಅವರ ಪರವಾನಗಿಯನ್ನು ನವೀಕರಿಸಲು ನೀಡಲಾಗಿತ್ತು. ಈ ವಿಷಯ ಸಲ್ಮಾನ್ ಖಾನ್ ಗೆ ಗೊತ್ತಿರಲಿಲ್ಲ' ಎಂದು ವಾದಿಸಿದ್ದರು. ಪ್ರಮಾದವು ಸಂವಹನ ಕೊರತೆಯಿಂದ ಆಗಿರುವುದಷ್ಟೆ, ಉದ್ದೇಶಪೂರ್ವಕ ಅಲ್ಲ ಎಂದು ವಾದಿಸಿದ್ದರು. ಸಲ್ಮಾನ್ ಖಾನ್ ಪರ ವಕೀಲರ ವಾದವನ್ನು ಜೋಧಪುರ ನ್ಯಾಯಾಲಯವು ಒಪ್ಪಿದೆ. ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಬಂದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ ನಟ ಸಲ್ಮಾನ್ ಖಾನ್.

'ನನ್ನ ಎಲ್ಲ ಅಭಿಮಾನಿಗಳಿಗೆ ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು, ಕುಟುಂಬವನ್ನು ಖುಷಿಯಾಗಿರಿಸಿ, ನೀವು ಖುಷಿಯಾಗಿರಿ, ಲವ್ ಯೂ ಆಲ್' ಎಂದಿದ್ದಾರೆ ಸಲ್ಮಾನ್ ಖಾನ್. ಒಂದು ವೇಳೆ ಸಲ್ಮಾನ್ ಖಾನ್ ವಿರುದ್ಧ ತೀರ್ಪು ಬಂದಿದ್ದಾದಲ್ಲಿ, ಸಲ್ಮಾನ್ ಖಾನ್ ಏಳು ವರ್ಷ ಜೈಲು ವಾಸ ಅನುಭವಿಸಬೇಕಿತ್ತು.

1999 ರಲ್ಲಿ ರಾಜಸ್ಥಾನದಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾದ ಚಿತ್ರೀಕರಣದ ವೇಲೆ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಭೇಟೆ ಆಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಕಾಲ ಜೈಲು ವಾಸವನ್ನೂ ಅನುಭವಿಸಿದರು. ಆದರೆ 2016 ರಲ್ಲಿ ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ಖಾನ್ ಅನ್ನು ಪ್ರಕರಣದಿಂದ ಖುಲಾಸೆ ಗೊಳಿಸಿತು.

This News Article is a Copy of FILMIBEAT