ಜಗ್ಗೇಶ್ ಲೈವ್: ಮಾಧ್ಯಮ, ಸ್ಟಾರ್‌ಡಂ, ರೌಡಿಸಂ ಸಂಸ್ಕೃತಿ ಮೇಲೆ ಸಿಟ್ಟು

23-02-21 11:34 am       Source: FILMIBEAT Manjunatha C   ಸಿನಿಮಾ

ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದು ಮಾಧ್ಯಮ, ನಟರುಗಳ ಸ್ಟಾರ್‌ಡಂ, ಸಿನಿಮಾ ರಂಗದಲ್ಲಿ ರೌಡಿಸಂ ಸಂಸ್ಕೃತಿ ವಿರುದ್ಧ ತೀವ್ರ ಅಸಮಾಧಾನ ಪ್ರದರ್ಶಿಸಿದ್ದಾರೆ.

ನಟ ಜಗ್ಗೇಶ್ ಅವರು ಬೆಳ್ಳಂಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದು ಮಾಧ್ಯಮ, ನಟರುಗಳ ಸ್ಟಾರ್‌ಡಂ, ಸಿನಿಮಾ ರಂಗದಲ್ಲಿ ರೌಡಿಸಂ ಸಂಸ್ಕೃತಿ ವಿರುದ್ಧ ತೀವ್ರ ಅಸಮಾಧಾನ ಪ್ರದರ್ಶಿಸಿದ್ದಾರೆ. ನಿರ್ದಿಷ್ಟ ಪತ್ರಿಕೆ ಮತ್ತು ಟಿವಿ ಚಾನೆಲ್ ಒಂದರ ಬಗ್ಗೆ ಅತೀವ ಸಿಟ್ಟು ಪ್ರದರ್ಶಿಸಿದ ನಟ ಜಗ್ಗೇಶ್, 'ನನ್ನ ವಿರುದ್ಧ ಸುಳ್ಳು ಹೇಳುವ, ಮಾನ ಹಾನಿ ಮಾಡುವ ಕಾರ್ಯವನ್ನು ಮಾಡಬೇಡಿ, ನಾನು ಅಡ್ಡದಾರಿ ಹಿಡಿದು ಮೇಲೆ ಬಂದವನಲ್ಲ, ಕನ್ನಡಿಗರ ಆಶೀರ್ವಾದದಿಂದ ಬಂದವನು, ನನ್ನ ವಿರುದ್ಧ ಷಡ್ಯಂತ್ರ ಮಾಡಬೇಡಿ' ಎಂದಿದ್ದಾರೆ ಜಗ್ಗೇಶ್.

'ಸ್ಟಾರ್‌ ಡಂ' ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಜಗ್ಗೇಶ್, 'ಇಂದು ಒಬ್ಬ ನಟನ ಸಿನಿಮಾ ಹಿಟ್ ಆಯಿತೆಂದರೆ ಆ ನಟನ ಮೇಲೆ ಇನ್ನೊಬ್ಬ ನಟ ಹುನ್ನಾರ ಮಾಡುತ್ತಾನೆ. ನಾನೊಬ್ಬನೇ ಬೆಳೆಯಬೇಕು ಎಂಬ ಮನಸ್ಥಿತಿ ಬಂದು ಬಿಟ್ಟಿದೆ. ಸಿನಿಮಾ ಬಿಡುಗಡೆ ಆದ ಮೂರು ದಿನ ಜನ ಬರುವುದಲ್ಲ ಸಕ್ಸಸ್, ನಿರ್ಮಾಪಕರು ಬೀದಿಗೆ ಬೀಳುತ್ತಿದ್ದಾರೆ ಅವರನ್ನು ಮೊದಲು ಉಳಿಸಿಕೊಳ್ಳಬೇಕು' ಎಂದು ಬೇಸರ ವ್ಯಕ್ತಪಡಿಸಿದರು ಜಗ್ಗೇಶ್.ರೌಡಿಸಂ ಸಂಸ್ಕೃತಿಯನ್ನು ತಡೆಯಬೇಕು: ಜಗ್ಗೇಶ್

'ರೌಡಿಸಂ ಸಂಸ್ಕೃತಿ ಬಂದುಬಿಟ್ಟಿದೆ. ಇದನ್ನು ಹೀಗೆಯೇ ಬಿಟ್ಟರೆ ''ನಾವು ಶಕ್ತಿವಂತರು, ನಮ್ಮನ್ನು ತಡೆಯುವವರು ಯಾರೂ ಇಲ್ಲ'' ಎಂದು ನಾಳೆ ಇನ್ನೊಬ್ಬ ನಟನ ಮೇಲೆ ಹೋಗ್ತಾರೆ. ರೌಡಿಸಂ ಸಂಸ್ಕೃತಿಯನ್ನು ಮೊದಲು ತಡೆಯಬೇಕು.ನಿನ್ನೆ ಆ ಹುಡುಗರಲ್ಲಿ ಕೆಲವರು ''ನೀನು ಒಕ್ಕಲಿಗನಾ, ಒಕ್ಕಲಿಗರ ಆಟ ನಡೆಯಲ್ಲ'' ಎಂದೆಲ್ಲಾ ಮಾತನಾಡಿದರು. ನನಗೂ ಅಭಿಮಾನಿ ಸಂಘಗಳಿವೆ, ಅವರು ನಿನ್ನೆಯಿಂದಲೂ ಕರೆ ಮಾಡುತ್ತಿದ್ದಾರೆ. ಸುಮ್ಮನಿರುವಂತೆ ಅವರಿಗೆ ನಾನು ಹೇಳಿದ್ದೇನೆ. ನಾನೂ ಸಹ ಎಲ್ಲ ಬಿಟ್ಟು ರಸ್ತೆಯಲ್ಲಿ ನಿಂತುಬಿಡಬಲ್ಲೆ ಆದರೆ ಅದರಿಂದ ವೈಮನಸ್ಯ ಇನ್ನಷ್ಟು ಹೆಚ್ಚಾಗುತ್ತದೆ' ಎಂದಿದ್ದಾರೆ ಜಗ್ಗೇಶ್.ನನ್ನ ಮೈಮುಟ್ಟಲು ಯಾರಿಗಾದರೂ ಸಾಧ್ಯವಿದೆಯೇ: ಜಗ್ಗೇಶ್

'ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಅವರು ಹೋದಾಗಲೇ ಕನ್ನಡ ಚಿತ್ರರಂಗದ ಅಳಿವು ಆರಂಭವಾದಂತೆ ಕಾಣುತ್ತಿದೆ. ಇನ್ನು ನಾನು, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್ ಉಳಿದಿದ್ದೇವೆ ಅಷ್ಟೆ ಎಂದು ಬೇಸರ ವ್ಯಕ್ತಪಡಿಸಿದ ಜಗ್ಗೇಶ್, 'ನನಗೆ ಘೇರಾವ್ ಮಾಡಿದರು ಎಂದೆಲ್ಲಾ ಬರೆದಿದ್ದಾರೆ, ನನ್ನ ಮೈ ಮುಟ್ಟಲು ಕರ್ನಾಟದಲ್ಲಿ ಯರಿಗಾದರೂ ಸಾಧ್ಯವಿದೆಯಾ?' ಎಂದು ಆವೇಶದಿಂದ ಪ್ರಶ್ನಿಸಿದರು ನಟ ಜಗ್ಗೇಶ್.ಇನ್ನೂ ಕೆಲ ವರ್ಷ ಕನ್ನಡ ಸೇವೆ ಮಾಡಬೇಕೆಂದಿದ್ದೇನೆ

'ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಈಗಿನವರು ಬಹುತೇಕ ಯಾರೂ ಹುಟ್ಟೇ ಇರಲಿಲ್ಲವೇನೋ, ಅಂದಿನಿಂದಲೂ ಕಷ್ಟಪಟ್ಟು ಬೆಳೆದು ಬಂದವನು ನಾನು. ಬೇರೆ ಭಾಷೆಗಳಿಗೆ ನನ್ನ ಎಡಗಾಲನ್ನು ಸಹ ಇಟ್ಟಿಲ್ಲ ನಾನು. ಕನ್ನಡವೇ ನಮ್ಮಮ್ಮ ಎಂದು ಸೇವೆ ಮಾಡಿಕೊಂಡು ಇದ್ದೇನೆ. ಇನ್ನೂ ಕೆಲ ವರ್ಷ ಹೀಗೆಯೇ ಇರಬೇಕೆಂದು ಎಂದುಕೊಂಡಿದ್ದೇನೆ, ನನಗೆ ತೊಂದರೆ ಕೊಡಬೇಡಿ' ಎಂದು ಮನವಿ ಮಾಡಿದರು ಜಗ್ಗೇಶ್.ನಿನ್ನೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು

ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುವ ಆಡಿಯೋ ಕ್ಲಿಪ್ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ನಿನ್ನೆ ಮೈಸೂರಿನ ಬನ್ನೂರಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಜಗ್ಗೇಶ್ ಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು ಕ್ಷಮೆಗೆ ಒತ್ತಾಯಿಸಿದರು. ಏರಿದ ಧ್ವನಿಯಲ್ಲಿ ಜಗ್ಗೇಶ್ ಅವರೊಟ್ಟಿಗೆ ವಾಗ್ವಾದ ಸಹ ನಡೆಸಿದರು.