ಸ್ವಾತಂತ್ರ್ಯ ವೀರರಿಗೆ ಅವಮಾನ: ಸಿನಿಮಾ ಬ್ಯಾನ್ ಮಾಡುವಂತೆ ಶಿವಸೇನಾ ಒತ್ತಾಯ

26-03-21 11:05 am       Source: FILMIBEAT   ಸಿನಿಮಾ

ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾದಲ್ಲಿ ಸ್ವಾತಂತ್ರ್ಯ ವೀರರಿಗೆ ಅವಮಾನ ಮಾಡಲಾಗಿದೆ.

ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾದಲ್ಲಿ ಸ್ವಾತಂತ್ರ್ಯ ವೀರರಿಗೆ ಅವಮಾನ ಮಾಡಲಾಗಿದೆ. ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ತೆಲಂಗಾಣ ಶಿವಸೇನಾ ರಾಜ್ಯ ಘಟಕ ಒತ್ತಾಯಿಸಿದೆ.

ನವೀನ್ ಪೋಲಿಶೆಟ್ಟಿ ನಟಿಸಿರುವ 'ಜಾತಿರತ್ನಾಲು' ಸಿನಿಮಾದ ವಿರುದ್ಧ ತೆಲಂಗಾಣ ಶಿವಸೇನಾ ಆಕ್ರೋಶಗೊಂಡಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕು, ನಿರ್ದೇಶಕ, ನಟ, ನಿರ್ಮಾಪಕ, ಸಂಭಾಷಣೆ ಬರೆದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಸಹ ಸಲ್ಲಿಸಲಾಗಿದೆ.

'ಜಾತಿರತ್ನಾಲು' ಸಿನಿಮಾದ ದೃಶ್ಯವೊಂದರಲ್ಲಿ ಮೂವರು ಮುಖ್ಯ ನಟರು ಜೈಲು ಸೇರುತ್ತಾರೆ. ಜೈಲಿನಲ್ಲಿ ನಡೆವ ಹಾಸ್ಯ ಸನ್ನಿವೇಶವೊಂದರಲ್ಲಿ ನಾಯಕ ನವೀನ್ ಪೋಲಿಶೆಟ್ಟಿ ಪಾತ್ರವು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹಾಡಲಾಗಿದ್ದ ರಾಮ್‌ಪ್ರಸಾದ್ ಬಿಸ್ಮಿಲ್ ಬರೆದಿರುವ 'ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್‌ ಮೆ ಹೇ' ಹಾಡನ್ನು ತಿರುಚಿ ಹಾಡುತ್ತಾನೆ.

'ಸರ್ಫರೋಶಿ ಕೀ ತಮನ್ಹಾ, ಸಮಂತಾ, ರಶ್ಮಿಕಾ ತೀನೋ ಸಾಥ್‌ ಮೆ ಹೇ' ಎಂದು ಹಾಡನ್ನು ತಿರುಚಿ ಹಾಡಲಾಗಿದೆ. ಇದು ಶಿವಸೇನಾ ಸದಸ್ಯರನ್ನು ಕೆರಳಿಸಿದೆ. ಸಿನಿಮಾದ ವಿರುದ್ಧ ತೆಲಂಗಾಣ ಶಿವಸೇನಾ ರಾಜ್ಯ ಘಟಕದ ಕಾರ್ಯದರ್ಶಿ ಭೂಮ ಗಂಗಾಧರ್, ಸದಸ್ಯರಾದ ಶ್ರೀನಿವಾಸ ಆಚಾರಿ, ಕಂಜರಾಲ ಶ್ರೀಧರ್ ಆಚಾರಿ, ರಿತೇಶ್, ಸುರೇಶ್ ಮತ್ತು ವೇಣು ಅವರುಗಳು ಕಾಂಚಿಗುಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 'ಸಿನಿಮಾದ ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಈಗಿನ ಯುವಸಮುದಾಯಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದಾರೆ ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದೇವೆ' ಎಂದಿದ್ದಾರೆ ದೂರು ನೀಡಿದ ತೆಲಂಗಾಣ ಶಿವಸೇನಾ ಸದಸ್ಯರು.

ನವೀನ್ ಪೋಲಿಶೆಟ್ಟಿ, ರಾಹುಲ್ ರಾಮಕೃಷ್ಣ, ಪ್ರಿಯದರ್ಶನ್, ಫಾರಿಯಾ ಅಬ್ದುಲ್ಲಾ, ಬ್ರಹ್ಮಾನಂದಂ ಇನ್ನೂ ಹಲವರು ನಟಿಸಿರುವ 'ಜಾತಿರತ್ನಾಲು' ಹಾಸ್ಯ ಸಿನಿಮಾವನ್ನು ಮಾರ್ಚ್ 11 ರಂದು ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ. ಸಿನಿಮಾವನ್ನು ಅನುದೀಪ್ ಕೆವಿ ನಿರ್ದೇಶನ ಮಾಡಿದ್ದಾರೆ

This News Article Is A Copy Of FILMIBEAT