ತೆಲುಗಿನಲ್ಲಿ ಕನ್ನಡ ಸಿನಿಮಾಗಳ ಜಾತ್ರೆ: 'ಯುವರತ್ನ' ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟ ಮತ್ತೊಂದು ಸಿನಿಮಾ

27-03-21 11:25 am       Source: FILMIBEAT   ಸಿನಿಮಾ

ಕನ್ನಡ ಸಿನಿಮಾಗಳೀಗ ಕರ್ನಾಟಕ ಮಾತ್ರವಲ್ಲದೆ ಗಡಿಗೂ ಮೀರಿ ಪ್ರೇಕ್ಷಕರನ್ನು ತಲುಪುತ್ತಿದೆ.

ಕನ್ನಡ ಸಿನಿಮಾಗಳೀಗ ಕರ್ನಾಟಕ ಮಾತ್ರವಲ್ಲದೆ ಗಡಿಗೂ ಮೀರಿ ಪ್ರೇಕ್ಷಕರನ್ನು ತಲುಪುತ್ತಿದೆ. ಅದರಲ್ಲೂ ಇತ್ತೀಚಿಗೆ ಕನ್ನಡ ಚಿತ್ರಗಳು ಹೆಚ್ಚಾಗಿ ತೆಲುಗುನಾಡಲ್ಲಿ ಅಬ್ಬರಿಸುತ್ತಿವೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲು ಹರಸಾಹಸ ಪಡಬೇಕಿತ್ತು. ಒಂದೆರಡು ಚಿತ್ರಮಂದಿರಗಳು ಸಿಕ್ಕರೆ ಸಾಕೆನಿಸುವಷ್ಟು ಕಷ್ಟವಿತ್ತು.

ಕನ್ನಡ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇ ಇರಲಿಲ್ಲ. ಆದರೀಗ ಹಾಗಿಲ್ಲ, ಕನ್ನಡದ ಸಿನಿಮಾಗಳು ಹೊರರಾಜ್ಯಗಳಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕರ್ನಾಟಕದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

ಕೊರೊನಾ ನಂತರ ತೆರೆಗೆ ಬಂದ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳು ಆಂಧ್ರನಾಡಲ್ಲೂ ಅಬ್ಬರಿಸುತ್ತಿರುವುದು ವಿಶೇಷ.

ಪೊಗರು, ರಾಬರ್ಟ್ ಬಳಿಕ ಇದೀಗ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ 'ಕೋಟಿಗೊಬ್ಬ-3'

ಯುವರತ್ನ ಬೆನ್ನಲ್ಲೇ ಇದೀಗ ಮತ್ತೊಂದು ಕನ್ನಡದ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ತೆಲುಗಿಗೆ ಎಂಟ್ರಿ ಕೊಟ್ಟಿದೆ. ಸುದೀಪ್ ನಟನೆಯ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ತೆಲುಗು ವರ್ಷನ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಕಿಚ್ಚನ ಸಿನಿಮಾ K3 ಕೋಟಿಕೊಕ್ಕಡು ಎನ್ನುವ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರತಂಡ ಡಬ್ಬಿಂಗ್ ಹಕ್ಕನ್ನು ಗುಡ್ ಸಿನಿಮಾ ಗ್ರೂಪ್ ಗೆ ಮಾರಾಟ ಮಾಡಿದ್ದು, ದೊಡ್ಡ ಮೊತ್ತಕ್ಕೆ ಖರೀದೆ ಮಾಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಸುದೀಪ್ ಸಿನಿಮಾವನ್ನು ತೆಲುಗಿನಲ್ಲೂ ಅದ್ದೂರಿಯಾಗಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆಯಂತೆ. ಈ ಮೂಲಕ ಮತ್ತೊಂದು ದೊಡ್ಡ ಕನ್ನಡದ ಸಿನಿಮಾ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಅಂದಹಾಗೆ ತೆಲುಗು ಪ್ರೇಕ್ಷಕರಿಗೆ ಸುದೀಪ್ ಹೊಸಬರೇನಲ್ಲ. ತೆಲುಗಿನಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಕೋಟಿಗೊಬ್ಬ-3 ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಇನ್ನು ಶಿವಕಾರ್ತಿಕ್ ಸಾರಥ್ಯದಲ್ಲಿ ಮೂಡಿಬಂದಿರುವ ಕೋಟಿಗೊಬ್ಬ-3 ಈಗಾಗಲೇ ಹಾಡುಗಳು ಮತ್ತು ಟೀಸರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದೆ. ಹಾಗಾಗಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

This News Article Is A Copy Of FILMIBEAT