ಅಭಿಮಾನಿಗೆ ಮೋಸ: ನಟಿ, ಬಿಜೆಪಿ ನಾಯಕಿ ವಿರುದ್ಧ ದೂರು ದಾಖಲು

17-09-21 11:03 am       Filmbeat: Manjunatha C   ಸಿನಿಮಾ

ನಟಿಯರಿಗೆ ಅಭಿಮಾನಿಗಳಿಂದ ಕಿರುಕುಳ ಆಗುವುದು, ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ನಿಂದನೆಗಳಾಗುವುದು ಕೇಳಿರುತ್ತೀರಿ, ಆದರೆ ಇಲ್ಲಿ ನಟಿಯೇ ಅಭಿಮಾನಿಗೆ ಕಿರುಕುಳ ನೀಡಿದ್ದಾರೆ.

ಸಾಮಾನ್ಯವಾಗಿ ನಟಿಯರಿಗೆ ಅಭಿಮಾನಿಗಳಿಂದ ಕಿರುಕುಳ ಆಗುವುದು, ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ನಿಂದನೆಗಳಾಗುವುದು ಕೇಳಿರುತ್ತೀರಿ, ಆದರೆ ಇಲ್ಲಿ ನಟಿಯೇ ಅಭಿಮಾನಿಗೆ ಕಿರುಕುಳ ನೀಡಿದ್ದಾರೆ. ನಟಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ತಮಿಳು ಟಿವಿ ಹಾಗೂ ಸಿನಿಮಾ ರಂಗದಲ್ಲಿ ಜಯಲಕ್ಷ್ಮಿ ಅವರದ್ದು ಜನಪ್ರಿಯ ಹೆಸರು. 'ಪಿರಿವೋಂ ಸಂಧಿಪೋಂ', 'ಕೆಳದಿ ಕಣ್ಮಣಿ', 'ತಮಿಳ್ ಕಡುವುಲ್ ಮುರುಗನ್', 'ಕಲ್ಯಾಣ ಪರಿಸು', 'ಮುಲ್ಲುಂ ಮಲರುಂ', 'ಪೂವೆ ಉನಕ್ಕಾಗ' ಇನ್ನು ಕೆಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಈ ನಟಿಸಿದ್ದಾರೆ. ಜೊತೆಗೆ 'ಮಯಂದಿ ಕುಟುಂಬಧರ್', 'ಅಲೈ ಪೇಸಿ', 'ವೇಟ್ಟಿಕಾರನ್', 'ಗೋರಿಪಾಳ್ಯಂ', 'ಮುತ್ತುಕುಂ ಮುತ್ತಾಗ', 'ಅಪ್ಪ', ಆಸ್ಕರ್‌ಗೆ ಭಾರತದಿಂದ ಕಳಿಸಲ್ಪಟ್ಟಿದ್ದ 'ವಿಸಾರಣೈ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಹಲವಾರು ಮಂದಿ ಅಭಿಮಾನಿಗಳು ತಮಿಳುನಾಡಿನಲ್ಲಿದ್ದಾರೆ. ನಟಿ ಜಯಲಕ್ಷ್ಮಿ ಕೆಲ ತಿಂಗಳ ಹಿಂದಷ್ಟೆ ಬಿಜೆಪಿ ಸೇರಿರುವ ನಟಿ ಜಯಲಕ್ಷ್ಮಿ ಕಳೆದ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನೂ ಮಾಡಿದ್ದರು.

ಗೀತಾ ಎಂಬುವರು ಸಹ ಜಯಲಕ್ಷ್ಮಿ ಅವರ ಅಭಿಮಾನಿಯಾಗಿದ್ದವರು. ಸ್ವಸಹಾಯ ಮಹಿಳಾ ಗುಂಪು ನಡೆಸುತ್ತಿದ್ದ ಗೀತಾ ಅಭಿಮಾನಿಯಾಗಿ ಜಯಲಕ್ಷ್ಮಿ ಅವರಿಗೆ ಪರಿಚಯವಾಗಿ ಸ್ನೇಹವನ್ನೂ ಬೆಳೆಸಿಕೊಂಡಿದ್ದರು. ನಂತರ ಜಯಲಕ್ಷ್ಮಿ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. ಸಾಲ ಪಡೆವ ವೇಳೆ ಕೆಲವು ದಾಖಲೆಗಳಿಗೆ ಜಯಲಕ್ಷ್ಮಿ ಸಹಿ ಮಾಡಿಸಿಕೊಂಡರು. 'ಆ ವೇಳೆ ಖಾಲಿ ಹಾಳೆಯ ಮೇಲೆಯೂ ನನ್ನಿಂದ ಜಯಲಕ್ಷ್ಮಿ ಸಹಿ ಪಡೆದುಕೊಂಡಿದ್ದರು' ಎಂದು ಗೀತಾ ಹೇಳಿದ್ದಾರೆ.

''ನಟಿ ಜಯಲಕ್ಷ್ಮಿಯಿಂದ ಪಡೆದ ಎಲ್ಲ ಸಾಲವನ್ನು ಬಡ್ಡಿ ಸಮೇತ ತೀರಿಸಿದ್ದರೂ ಸಹ ಜಯಲಕ್ಷ್ಮಿ ಅಲೆಕ್ಸಾಂಡರ್ ಹಾಗೂ ಚಾರ್ಲ್ಸ್ ಎಂಬ ಇಬ್ಬರು ರೌಡಿಗಳನ್ನು ಗೀತಾ ಮನೆಯ ಬಳಿ ಕಳುಹಿಸಿ ಬೆದರಿಕೆ ಹಾಕಿಸಿದ್ದಾಳೆ'' ಎಂದು ಗೀತಾ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ಗೀತಾ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



ಇದೇ ವೇಳೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಜಯಲಕ್ಷ್ಮಿ, ''2019ರಲ್ಲಿ ಗೀತಾ ತನ್ನ ಸ್ವಸಹಾಯ ಮಹಿಳಾ ಗುಂಪಿನ ಮಹಿಳೆಯರು ಕಷ್ಟದಲ್ಲಿದ್ದು ಅವರ ಸಹಾಯ ಮಾಡುವಂತೆ ಕೇಳಿಕೊಂಡರು. ನಾನು ಆಗ 17.50 ಲಕ್ಷ ಸಾಲ ನೀಡಿ ಒಪ್ಪಂದ ಮಾಡಿಕೊಂಡೆ. ಒಂದೊಮ್ಮೆ ಇವರು ಆರು ತಿಂಗಳ ಒಳಗಾಗಿ ಸಾಲ ತೀರಿಸಿದರೆ ಯಾವುದೇ ಬಡ್ಡಿ ನೀಡುವ ಅಗತ್ಯ ಇಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದೆ'' ಎಂದಿದ್ದಾರೆ.

'ನಾನು ನೀಡಿದ ಹಣವನ್ನು ಗೀತಾ, ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ವಿತರಿಸದೆ ತಾನೇ ಖರ್ಚು ಮಾಡಿಕೊಂಡಿದ್ದಾಳೆ. ಈವರೆಗೆ ನನಗೆ ಹಣವನ್ನು ಮರಳಿ ನೀಡಿಲ್ಲ. ಹಣ ಮರಳಿ ಕೇಳಿದರೆ ನಾನು ದೌರ್ಜನ್ಯ ಮಾಡುತ್ತಿದ್ದೇನೆ ಎಂದು ಆರೋಪಿಸಿ ದೂರು ನೀಡಿದ್ದಾಳೆ'' ಎಂದಿದ್ದಾರೆ. ಇದೀಗ ನಟಿ ಜಯಲಕ್ಷ್ಮಿ ಸಹ ಚೆನ್ನೈನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಗೀತಾ ವಿರುದ್ಧ ದೂರು ದಾಖಲಿಸಿದ್ದಾರೆ. ಎರಡೂ ಬದಿಯಿಂದ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.