ಬಿಗ್‌ಬಾಸ್ ಒಟಿಟಿ: ಗೆದ್ದ ದಿವ್ಯಾ, ಶಮಿತಾ ಶೆಟ್ಟಿಗೆ ನಿರಾಸೆ

19-09-21 11:12 am       Filmbeat: Manjunatha C   ಸಿನಿಮಾ

ಬಿಗ್‌ಬಾಸ್ ಒಟಿಟಿ ನಿನ್ನೆಯಷ್ಟೆ ಅಂತ್ಯವಾಗಿದೆ. ದಿವ್ಯಾ ಅಗರ್ವಾಲ್ 25 ಲಕ್ಷ ರು ಹಣ ಮತ್ತು ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾರೆ.

ಬಿಗ್‌ಬಾಸ್ ಒಟಿಟಿ ನಿನ್ನೆಯಷ್ಟೆ ಅಂತ್ಯವಾಗಿದೆ. ಇದು ಮೊದಲ ಬಿಗ್‌ಬಾಸ್ ಒಟಿಟಿ ಆಗಿದ್ದು, ಟಿವಿ ಸೆಲೆಬ್ರಿಟಿ ದಿವ್ಯಾ ಅಗರ್ವಾಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಗೆದ್ದ ದಿವ್ಯಾ ಅಗರ್ವಾಲ್ 25 ಲಕ್ಷ ರು ಹಣ ಮತ್ತು ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾರೆ.

42 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ 14 ಸ್ಪರ್ಧಾಳುಗಳು ವಿಜೇತರಾಗಲು ಸೆಣೆಸಿದರು. ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸಹ ಬಿಗ್‌ಬಾಸ್ ಮನೆಯಲ್ಲಿದ್ದರು, ಶಮಿತಾ ಶೆಟ್ಟಿ ಗೆಲ್ಲುತ್ತಾರೆ ಎಂದೇ ಹೇಳಲಾಗುತ್ತಿತ್ತು, ಆದರೆ ನಿನ್ನೆ ನಡೆದ ಫಿನಾಲೆಯಲ್ಲಿ ದಿವ್ಯಾ ಅಗರ್ವಾಲ್ ಅನ್ನು ವಿಜೇತರಾಗಿ ಘೋಷಿಸಿದರು ಶೋನ ನಿರೂಪಕ ಕರಣ್ ಜೋಹರ್.ದಿವ್ಯಾ ಅಗರ್ವಾಲ್ ವಿಜೇತರಾಗಿ ಹೊರಹೊಮ್ಮಿದರೆ, ಸ್ಪರ್ಧಿ ನಿಶಾಂತ್ ಮೊದಲ ರನರ್‌ ಅಪ್, ಶಮಿತಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಶಮಿತಾರ ಆಪ್ತ ರಾಕೇಶ್ ಮೂರನೇ ರನ್ನರ್ ಆಪ್ ಆಗಿದ್ದಾರೆ. ಪ್ರತೀಕ್ ಫೈನಲ್‌ಗೆ ಬರದೆ ಅದೃಷ್ಟದ ಸೂಟ್‌ಕೇಸ್ ಪಡೆದುಕೊಂಡು ಸ್ಪರ್ಧೆಯಿಂದ ಹೊರಗೆ ನಡೆದು ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ಸ್ಪರ್ಧೆಯಲ್ಲಿರುವುದು ಅಥವಾ ಅದೃಷ್ಟದ ಸೂಟ್‌ಕೇಸ್‌ ತೆಗೆದುಕೊಂಡು ಹೊರನಡೆಯುವುದು ಎಂಬ ಎರಡು ಆಯ್ಕೆಯನ್ನು ಪ್ರತೀಕ್ ಮುಂದೆ ಇಡಲಾಯಿತು. ಆಗ ಪ್ರತೀಕ್ ಅದೃಷ್ಟದ ಸೂಟ್‌ಕೇಸ್ ತೆಗೆದುಕೊಂಡರು. ಸೂಟ್‌ಕೇಸ್‌ನಲ್ಲಿ ಅವರಿಗೆ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ 15ಕ್ಕೆ ನೇರ ಎಂಟ್ರಿ ಟಿಕೆಟ್ ದೊರಕಿತು. ಆ ಮೂಲಕ ಹಿಂದಿ ಬಿಗ್‌ಬಾಸ್ ಸೀಸನ್ 15ರ ಮೊದಲ ಸ್ಪರ್ಧಿ ಆದರು ಪ್ರತೀಕ್. ವಿಜೇತರಾಗಿರುವ ದಿವ್ಯಾ ಅಗರ್ವಾಲ್ ಆರಂಭದಲ್ಲಿ ಅಷ್ಟೇನೂ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿರಲಿಲ್ಲ. ಯಾರೊಂದಿಗೂ ಗೆಳೆತನ ಸಾಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ, ಜೀಶಾನ್‌ ಜೊತೆ ಆಪ್ತರಾದರು ಆದರೆ ಇತರ ಸ್ಪರ್ಧಿಗಳೊಂದಿಗೆ ಕೈ-ಕೈ ಮಿಲಾಯಿಸಿದ್ದಕ್ಕೆ ಜೀಶಾನ್ ಅನ್ನು ಶೋನಿಂದ ಹೊರಗೆ ಹಾಕಲಾಯಿತು. ದಿವ್ಯಾ ಅಗರ್ವಾಳ್ ಆರಂಭದಲ್ಲಿ ಶಮಿತಾ ಶೆಟ್ಟಿ ಜೊತೆ ಗೆಳೆತನ ಪ್ರಾರಂಭಿಸಿದರು ಆದರೆ ಅದು ಮುಂದುವರೆಯಲಿಲ್ಲ. ಮನೆಯ ಯಾರೊಂದಿಗೂ ಒಳ್ಳೆಯ ಬಾಂದವ್ಯ ಹೊಂದಲು ದಿವ್ಯಾಗೆ ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರೊಟ್ಟಿಗೆ ಒಳ್ಳೆಯ ಕನೆಕ್ಷನ್ ಸ್ಥಾಪಿಸಿಕೊಂಡರು ಹಾಗಾಗಿಯೇ ದಿವ್ಯಾ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದರು.ನಿನ್ನೆ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ನಟಿ ಜೆನಿಲಿಯಾ ಡಿಸೋಜಾ, ನಟ ರಿತೇಶ್ ದೇಶ್‌ಮುಖ್, ಋತ್ವಿಕ್ ಧನಂಜಯ್, ಕರನ್ ವಾಹಿ, ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ ಅತಿಥಿಗಳಾಗಿ ಭಾಗವಹಿಸಿದ್ದರು. ಮೊದಲ ಬಾರಿಗೆ ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗುವ ಬಿಗ್‌ಬಾಸ್ ಕಾರ್ಯಕ್ರಮವನ್ನು ವೂಟ್ ಆಯೋಜಿಸಿತ್ತು. ಆಗಸ್ಟ್ 8 ರಂದು ಆರಂಭಗೊಂಡ ಈ ಶೋ 42 ದಿನಗಳ ಕಾಲ ನಡೆಯಿತು. ಕರಣ್ ಜೋಹರ್ ನಡೆಸಿಕೊಟ್ಟ ಈ ಶೋನಲ್ಲಿ ಶಮಿತಾ ಶೆಟ್ಟಿ ಸೇರಿ ಕೆಲವು ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಜೇತ ದಿವ್ಯಾ ಅಗರ್ವಾಲ್ ಟಿವಿ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲವಾದರೂ ಟಿವಿಯ ಹಲವು ಪ್ರಮುಖ ರಿಯಾಲಿಟಿ ಶೋಗಳಲ್ಲಿ ದಿವ್ಯಾ ಭಾಗವಹಿಸಿದ್ದರು. ಎಂಟಿವಿ ಸ್ಪಿಟ್ಸ್ ವಿಲ್ಲಾ, ಎಂಟಿವಿ ರೋಡೀಸ್, ಬಿಗ್‌ಬಾಸ್ ಸೀಸನ್ 11, ಆನ್ ರೋಡ್ ವಿತ್ ರೋಡೀಸ್, ಎಂಟಿವಿ ಏಸ್ ಸ್ಪೇಸ್, ಎಂಟಿವಿ ಏಸ್ ಆಫ್ ಕ್ವಾರಂಟೈನ್ ಇನ್ನೂ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕೆಲವು ಗೆದ್ದಿದ್ದಾರೆ.'ರಾಗಿಣಿ ಎಂಎಂಎಸ್; ದಿಟರ್ನ್ಸ್', 'ಕಾರ್ಟೆಲ್' ಹೆಸರಿನ ಎರಡು ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಹಲವು ಆಲ್ಬಂ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 'ದಿ ಫೈನಲ್ ಎಕ್ಸಿಟ್' ಹೆಸರಿನ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಒಟಿಟಿ ಗೆದ್ದ ಬಳಿಕ ಅವರ ಅದೃಷ್ಟ ಬದಲಾಗುತ್ತದೆಯೇ ನೋಡಬೇಡಿಕೆ.