ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ನೀಡಿದ ಕೋರ್ಟ್

21-09-21 10:47 am       Filmbeat: Bharath Kumar K   ಸಿನಿಮಾ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿದ್ದ ಉದ್ಯಮಿ ರಾಜ್ ಕುಂದ್ರಾಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುಂಬೈ, ಸೆ.21: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿದ್ದ ಉದ್ಯಮಿ ರಾಜ್ ಕುಂದ್ರಾಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಪಡೆದು ಸೋಮವಾರ ಶಿಲ್ಪಾ ಶೆಟ್ಟಿ ಪತಿಗೆ ಜಾಮೀನು ನೀಡಿದ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ.

ಉದ್ಯಮಿ ರಾಜ್ ಕುಂದ್ರಾ ಜೊತೆ ಸ್ನೇಹಿತ ರಾಯನ್ ತೋರ್ಪೆಗೂ ಜಾಮೀನು ಸಿಕ್ಕಿದೆ ಎಂದು ವರದಿಯಾಗಿದೆ. ಜುಲೈ 16 ರಂದು ರಾಜ್ ಕುಂದ್ರಾ ಮತ್ತು ಇತರರನ್ನು ಮುಂಬೈ ಕ್ರೈಂ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಕೇಸ್ ಸಂಬಂಧ ಕಳೆದ ವಾರವಷ್ಟೇ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ ಮಾಡಿದ್ದರು.



ಸೆಪ್ಟೆಂಬರ್ 16 ರಂದು ಮುಂಬೈ ಪೊಲೀಸರು 1467 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ 43 ಮಂದಿ ಸಾಕ್ಷಿಧಾರರ ಹೇಳಿಕೆಗಳು ದಾಖಲಾಗಿವೆ. ಐದು ವ್ಯಕ್ತಿಗಳು 164 ಸಿಆರ್‌ಪಿಸಿ ಪ್ರಕಾರ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಎರಡನೇ ದೋಷಾರೋಪ ಪಟ್ಟಿ. ಇದಕ್ಕೂ ಮುಂಚೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ 3000ಕ್ಕೂ ಅಧಿಕ ಪುಟಗಳನ್ನು ಹೊಂದಿತ್ತು.

ಆ ಸಂದರ್ಭದಲ್ಲಿ ನಟಿ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಆಗ ಬಂಧಿಸಲಾಗಿತ್ತು. ಆ ಬಂಧನಗಳ ಬಳಿಕವೇ ರಾಜ್ ಕುಂದ್ರಾ ಹೆಸರು ಹೊರಗೆ ಬಂದು ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದರು. ರಾಜ್ ಕುಂದ್ರಾ ಅವರಿಂದ ಕೆಲವು ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್‌ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.



ಏನಿದು ರಾಜ್ ಕುಂದ್ರಾ ವಿರುದ್ಧದ ಆರೋಪ?

ಭಾರತದಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಅಪರಾಧವಾಗಿದ್ದು, ರಾಜ್ ಕುಂದ್ರಾರ ವಿಯಾನ್ ಸಂಸ್ಥೆ ಹಾಗೂ ಕೆಂಡ್ರಿನ್ ಕಂಪೆನಿಗಳು ಭಾರತದಲ್ಲಿಯೇ ನಟಿಯರಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶದಲ್ಲಿರುವ ರಾಜ್ ಕುಂದ್ರಾದ ಸೋದರ ಸಂಬಂಧಿ ಪ್ರದೀಪ್ ಭಕ್ಷಿಯ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು. ಹಾಟ್‌ಶಾಟ್ಸ್ ಆಪ್‌ ಮೂಲಕ ಪ್ರತಿದಿನ ಲಕ್ಷಾಂತರ ರುಪಾಯಿ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸಹ ಪೊಲೀಸರು ಸೀಜ್ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.