ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ವಿಜಯಲಕ್ಷ್ಮಿ ತಾಯಿ ನಿಧನ

28-09-21 11:02 am       Filmbeat: Bharath Kumar K   ಸಿನಿಮಾ

ವಿಜಯಲಕ್ಷ್ಮಿ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

ನಮ್ಮ ತಾಯಿ ಆರೋಗ್ಯ ಸರಿಯಿಲ್ಲ, ನಮ್ಮ ಅಕ್ಕನ ಆರೋಗ್ಯ ಸರಿಯಲ್ಲ, ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿ ಬೇಡುತ್ತಿದ್ದ ನಟಿ ವಿಜಯಲಕ್ಷ್ಮಿ ತಾಯಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

75 ವರ್ಷದ ವಿಜಯಾ ಸುಂದರಂ ಅವರು ಇಂದು ಕೊನೆಯುಸಿರೆಳೆದರು. ವಿಜಯಲಕ್ಷ್ಮಿ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸ್ವತಃ ವಿಜಯಲಕ್ಷ್ಮಿ ಅವರೇ ಹೇಳಿಕೊಂಡಿದ್ದ ಪ್ರಕಾರ ಚಿಕಿತ್ಸೆಯಲ್ಲಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವಿಜಯಾ ಸುಂದರ ಸಾವನ್ನಪ್ಪಿದ್ದಾರೆ.

ವಿಜಯಲಕ್ಷ್ಮಿ ಅವರು ಸದ್ಯ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಸಹೋದರಿ ಉಷಾ ಮತ್ತು ತಾಯಿಯ ಅನಾರೋಗ್ಯ ವಿಚಾರಕ್ಕೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಚಿತ್ರರಂಗ ಹಾಗೂ ಹಿರಿಯ ನಟಿ ಜಯಪ್ರದಾ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ, ಯಾರೂ ಸಹಾಯ ಮಾಡ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.



ಕಳೆದ ವಾರವೂ ಫೇಸ್‌ಬುಕ್ ಲೈವ್ ಬಂದು 'ನನಗೆ ಕೊರೊನಾ ಬಂದಿದೆ, ಕ್ವಾರಂಟೈನ್ ಆಗಲು ಮನೆಯಲ್ಲಿ, ಯಾರಾದರೂ ಅಭಿಮಾನಿಗಳು ಸಹಾಯ ಮಾಡಿ' ಎಂದು ಕೇಳಿಕೊಂಡಿದ್ದರು. 'ನನಗೆ ಬಹಳ ದಿನಗಳಿಂದಲೂ ಕಷ್ಟ ಇದೆ, ಸಹಾಯ ಮಾಡಿ ಎಂದು ಎಷ್ಟೇ ಕೇಳಿಕೊಂಡರೂ ಯಾರೂ ಸಹಾಯ ಮಾಡ್ತಿಲ್ಲ. ನನಗೆ ಬೆಂಗಳೂರಿನಲ್ಲಿ ಮನೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಈಗ ನನಗೆ ಕೊರೊನಾ ಬಂದಿದೆ. ಐಸೋಲೇಟ್ ಆಗಿದ್ದೇನೆ. ಇಂತಹ ಸಮಯದಲ್ಲಿ ನನ್ನ ಸಹೋದರಿ ಮತ್ತು ತಾಯಿಯನ್ನು ಎಲ್ಲಿಗೆ ಕಳುಹಿಸಲಿ ಎಂದು ಗೊತ್ತಾಗುತ್ತಿಲ್ಲ' ಎಂದಿದ್ದರು.

'ಕಲಾವಿದರ ಸಂಘದವರ ಬಳಿ ಎಷ್ಟೇ ಸಹಾಯ ಮಾಡಿದ್ರು ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಒಬ್ಬರಿಂದ ಒಬ್ಬರಿಗೆ ಕರೆ ಮಾಡಿ ಎಂದು ಹೇಳುತ್ತಿದ್ದಾರೆ ಹೊರತು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 'ಈಗಿನ ಪರಿಸ್ಥಿತಿಯಲ್ಲಿ ಯಾರಾದರೂ ಅಭಿಮಾನಿಗಳು ನನ್ನ ಬಗ್ಗೆ ಕಾಳಜಿ ತೋರಿ ಸಹಾಯ ಮಾಡಿ, ನಿಮ್ಮ ಮನೆ ಯಾವುದಾದರೂ ಖಾಲಿ ಇದ್ದಲ್ಲಿ ನಮ್ಮ ತಾಯಿ ಮತ್ತು ಅಕ್ಕ ಉಳಿದುಕೊಳ್ಳಲು ನೆರವು ನೀಡಿ' ಎಂದು ಮನವಿ ಮಾಡಿದ್ದಾರೆ. 'ಕಳೆದ ಐದು ದಿನಗಳಿಂದಲೂ ನಾನು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೆಚ್ಚು ಜ್ವರ ಇತ್ತು. ಊಟ ಸಹ ತಿನ್ನಲು ಆಗಿಲ್ಲ. ಈಗ ಕೋವಿಡ್ ಸೆಂಟರ್‌ಗೆ ಸ್ಥಳಾಂತರವಾಗಿ ಎಂದು ಹೇಳ್ತಿದ್ದಾರೆ. ನಿಜವಾಗಲೂ ಕಲಾವಿದರ ಸಂಘದಲ್ಲಿ ಯಾರೊ ಸಹಾಯ ಮಾಡ್ತಿಲ್ಲ. ಒಂದು ವೇಳೆ ನನಗೆ ಏನಾದರೂ ಹೆಚ್ಚು ಕಡಿಮೆ ಆದರು, ಎಲ್ಲರೂ ಸೇರಿ ನನ್ನ ಕೊಂದರು ಎಂದು ತಿಳಿದುಕೊಳ್ಳಿ' ಎಂದು ಅಸಮಾಧಾನ ಹೊರಹಾಕಿದರು.

ಒಬ್ಬ ನಟಿಗೆ ಇದು ತುಂಬಾ ದೊಡ್ಡ ಅನ್ಯಾಯವಾಗಿದೆ. ದರ್ಶನ್, ಯಶ್ ಅವರನ್ನು ಮಾತನಾಡಿಸಿ ಎಂದು ಎಷ್ಟೇ ಕೇಳಿದರೂ, ಯಾರೂ ಸ್ಪಂದಿಸುತ್ತಿಲ್ಲ. ನನ್ನನ್ನು ಬಲವಂತವಾಗಿ ಸಾಯಿಸುತ್ತಿದ್ದಾರೆ, ಎಲ್ಲರೂ ಸೇರಿ ನನ್ನ ಕೊಲೆ ಮಾಡ್ತಿದ್ದಾರೆ' ಎಂದು ವಿಜಯಲಕ್ಷ್ಮಿ ದೂರಿದ್ದರು.