ತಾತನ ಪ್ರತಿಮೆ ಅನಾವರಣ ಮಾಡಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

01-10-21 03:29 pm       Filmbeat: Bharath Kumar K   ಸಿನಿಮಾ

ತೆಲುಗು ಚಿತ್ರರಂಗದ ಲೆಜೆಂಡ್ ಕಲಾವಿದ ಅಲ್ಲು ರಾಮಲಿಂಗಯ್ಯ ಅವರ 100ನೇ ವರ್ಷದ ಜನುಮದಿನದ ವಿಶೇಷವಾಗಿ ಅಲ್ಲು ಸ್ಟುಡಿಯೋದಲ್ಲಿ ಪ್ರತಿಮೆ ಅನಾವರಣ ಮಾಡಲಾಯಿತು.

ತೆಲುಗು ಚಿತ್ರರಂಗದ ಲೆಜೆಂಡ್ ಕಲಾವಿದ ಅಲ್ಲು ರಾಮಲಿಂಗಯ್ಯ ಅವರ 100ನೇ ವರ್ಷದ ಜನುಮದಿನದ ವಿಶೇಷವಾಗಿ ಅಲ್ಲು ಸ್ಟುಡಿಯೋದಲ್ಲಿ ಪ್ರತಿಮೆ ಅನಾವರಣ ಮಾಡಲಾಯಿತು. ತಾತನ ಪ್ರತಿಮೆಯನ್ನು ಮೊಮ್ಮಕ್ಕಳಾದ ಅಲ್ಲು ಅರ್ಜುನ್, ಅಲ್ಲು ಸಿರೀಶ್, ಅಲ್ಲು ಬಾಬಿ ಲೋಕಾರ್ಪಣೆ ಮಾಡಿದರು

ತಾತನ ಪ್ರತಿಮೆ ಉದ್ಘಾಟಿಸಿದ ಬಳಿಕ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಐಕಾನ್ ಸ್ಟಾರ್, ''ನೀವು ನಮ್ಮ ಕುಟುಂಬದ ಹೆಮ್ಮೆ, ನಮ್ಮ ಪ್ರತಿ ಜರ್ನಿಯಲ್ಲೂ ಹಾಗೂ ಅಲ್ಲು ಸ್ಟುಡಿಯೋದ ಪ್ರತಿ ಕೆಲಸದಲ್ಲೂ ಜೊತೆ ಇರ್ತೀರಾ'' ಎಂದು ಪೋಸ್ಟ್ ಹಾಕಿದ್ದಾರೆ.

ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಕುಟುಂಬ ಹೊಸ ಸ್ಟುಡಿಯೋ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲು ರಾಮಲಿಂಗಯ್ಯ ಅವರ 99ನೇ ಹುಟ್ಟುಹಬ್ಬದಂದು ಈ ಸ್ಟುಡಿಯೋ ನಿರ್ಮಾಣಕ್ಕೆ ಪೂಜೆ ನೆರವೇರಿಸಲಾಗಿತ್ತು. ಇದೀಗ, ಒಂದು ವರ್ಷದ ನಂತರ ಅದೇ ಸ್ಟುಡಿಯೋದಲ್ಲಿ ಹಾಸ್ಯ ದಿಗ್ಗಜನ ಪ್ರತಿಮೆ ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ.



ಟಾಲಿವುಡ್‌ನಲ್ಲಿ ಪ್ರಸ್ತುತ ರಾಮೋಜಿ ಫಿಲ್ಮ್ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್, ಮತ್ತು ರಾಮನಾಯ್ಡು ಸ್ಟುಡಿಯೋಸ್ ಮುಂಚೂಣಿಯಲ್ಲಿದೆ. ಇದೀಗ, ಈ ಪಟ್ಟಿಗೆ ಆಲು ಸ್ಟುಡಿಯೋಸ್ ಸೇರಿಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಅಲ್ಲು ಸ್ಟುಡಿಯೋ ಅತಿ ದೊಡ್ಡ ಫಿಲಂ ಸ್ಟುಡಿಯೋ ಎಂಬ ಹೆಗ್ಗಳಿಕೆ ಹಾಗೂ ಖ್ಯಾತಿಗೆ ಪಾತ್ರವಾಗಿದೆಯಂತೆ. ಅಲ್ಲು ರಾಮಲಿಂಗಯ್ಯ ತೆಲುಗು ಚಿತ್ರರಂಗದಲ್ಲಿ ಒಬ್ಬ ಪ್ರಸಿದ್ಧ ಹಾಸ್ಯನಟ. 1953ರಲ್ಲಿ ಬಿಡುಗಡೆಯಾದ 'ಪುಟ್ಟಿಲ್ಲು' ಚಿತ್ರದೊಂದಿಗೆ ತೆಲುಗು ಚಿತ್ರರಂಗ ಪ್ರವೇಶಿಸಿದ ಅಲ್ಲು ರಾಮಲಿಂಗಯ್ಯ 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟ ಮತ್ತು ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. 1990ರಲ್ಲಿ ಭಾರತದ ಸರ್ಕಾರದಿಂದ ಪದ್ಮಶ್ರೀ ಮತ್ತು 2001ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಲ್ಲು ರಾಮಲಿಂಗಯ್ಯ ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಹಲವು ಪಾತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಯಾಬಜಾರ್, ಮಿಸ್ಸಮ್ಮ, ಶಂಕರಾಭರಣಂ ಮತ್ತು ಯಮಗೋಳ ಚಿತ್ರದಲ್ಲಿನ ಪಾತ್ರಗಳು ಸದಾ ನೆನಪಲ್ಲಿ ಉಳಿಯುತ್ತದೆ.

ಅಲ್ಲು ಅರವಿಂದ್ ಅವರು ಈಗಾಗಲೇ ಗೀತಾ ಆರ್ಟ್ಸ್ ಎಂಬ ಪ್ರಸಿದ್ಧ ಪ್ರೊಡಕ್ಷನ್ ಹೌಸ್‌, 'ಆಹಾ' ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಜೊತೆಗೆ ಅಲ್ಲು ಸ್ಟುಡಿಯೋವನ್ನು ನೋಡಿಕೊಳ್ಳಲಿದ್ದಾರೆ. ಅಲ್ಲು ಸಿರಿಶ್ ತಮ್ಮ ಮುಂದಿನ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲು ಬಾಬಿ, ವರುಣ್ ತೇಜ್ ಅವರ ಮುಂಬರುವ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಇನ್ನು ಸುಕುಮಾರ್ ನಿರ್ದೇಶನದಲ್ಲಿ ತಯಾರಾಗಲಿರುವ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಿದ್ದು, ಎರಡು ಭಾಗಗಳಾಗಿ ತೆರೆಗೆ ಬರಲಿದೆ. ಮೊದಲ ಭಾಗ ಕ್ರಿಸ್‌ಮಸ್ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಎರಡನೇ ಭಾಗದ ಅಪ್‌ಡೇಟ್ ಸದ್ಯಕ್ಕಿಲ್ಲ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಸ್ಟಾರ್ ನಟ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದು, ಪ್ಯಾನ್ ಇಂಡಿಯಾ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.



ಪುಷ್ಪ ಸಿನಿಮಾ ಅಲ್ಲು ಅರ್ಜುನ್ ನಟನೆಯ 20ನೇ ಚಿತ್ರ. ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ನಿರ್ದೇಶಕ ಕೊರಟಲಾ ಶಿವ ಜೊತೆ 21ನೇ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಅಲ್ಲು ಅರ್ಜುನ್ ಮತ್ತು ಕೊರಟಲಾ ಶಿವ ಕಾಂಬಿನೇಷನ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಪುಷ್ಪ ಪೂರ್ಣಗೊಳಿಸಿ ಈ ಚಿತ್ರ ಶುರು ಮಾಡಲಿದ್ದಾರೆ. ಈ ಮೂಲಕ ಇದೇ ಮೊದಲ ಸಲ ಕೊರಟಲಾ ಶಿವ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ.