ಬಾಲಿವುಡ್‌ಗೆ ಬಂದ 'ಮನಿಕೆ ಮಗೆ ಹಿತೆ' ಗಾಯಕಿ: ಈ ಚೆಲುವೆಯ ಹಿನ್ನೆಲೆ ಏನು?

01-10-21 03:50 pm       Filmbeat: Manjunatha C   ಸಿನಿಮಾ

ಯುವತಿಯೊಬ್ಬಾಕೆ ಸ್ಟುಡಿಯೋದಲ್ಲಿ ನಗುತ್ತಾ 'ಮನಿಕೆ ಮಗೆ ಹಿತೆ' ಎಂದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ವೈರಲ್ ಆಗಿದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಸುತ್ತಿರುವವರು 'ಮನಿಕೆ ಮಗೆ ಹಿತೆ' ಹಾಡು ಕೇಳಿಯೇ ಇರುತ್ತಾರೆ. ಹಲವು ವಿಡಿಯೋಗಳಿಗೆ ಈ ಹಾಡು ಹಿನ್ನೆಲೆಯಲ್ಲಿ ಬಳಕೆಯಾಗಿದೆ. ಹಾಡು ಅದೆಷ್ಟು ವೈರಲ್ ಆಗಿದೆಯೆಂದರೆ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಸಹ ಹಾಡಿಗೆ ಮಾರು ಹೋಗಿದ್ದಾರೆ.

ಯುವತಿಯೊಬ್ಬಾಕೆ ಸ್ಟುಡಿಯೋದಲ್ಲಿ ನಗುತ್ತಾ 'ಮನಿಕೆ ಮಗೆ ಹಿತೆ' ಎಂದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ವೈರಲ್ ಆಗಿದೆ. ಬಾಲಿವುಡ್ ಸೆಲೆಬ್ರಿಟಿಗಳಾದ ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್, ಪರಿಣಿತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡೀಸ್ ಇನ್ನೂ ಹಲವರು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

'ಮನಿಕೆ ಮಗೆ ಹಿತೆ' ಸಿಂಹಳ ಭಾಷೆಯ ಹಾಡು, ಹಾಡನ್ನು ಹಾಡಿರುವುದು ಯುವತಿ ಯೊಹಾನಿ ಡಿ'ಲೋಕಾ ಡಿ'ಸಿಲ್ವಾ. ಈ ಯುವತಿಗೆ ಈಗಿನ್ನೂ 28 ವರ್ಷ. 'ಮನಿಕೆ ಮಗೆ ಹಿತೆ' ಒಂದೇ ಹಾಡಿನಿಂದ ದೊಡ್ಡ ಜನಪ್ರಿಯತೆ ಸಂಪಾದಿಸಿದ್ದಾರೆ. ಎಷ್ಟೆಂದರೆ ಭಾರತದಲ್ಲಿ ಹಲವು ಲೈವ್ ಕಾನ್ಸರ್ಟ್‌ಗಳಲ್ಲಿ ಯೊಹಾನಿ ಹಾಡಲಿದ್ದಾರೆ. ಈಗಾಗಲೇ ಬಾಲಿವುಡ್ ಸಿನಿಮಾದ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ.

ಯೊಹಾನಿಯ ತಂದೆ ಶ್ರೀಲಂಕಾದ ಸೈನ್ಯದಲ್ಲಿ ಸೈನ್ಯಾಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ್ದಾರೆ. ತಾಯಿ ಶ್ರೀಲಂಕನ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದವು. ಯೋಹಾನಿಯ ಸಹೋದರಿ ಮೆಡಿಕಲ್ ವಿದ್ಯಾರ್ಥಿನಿ. ಆದರೆ ಯೊಹಾನಿಗೆ ಎಳವೆಯಿಂದಲೂ ಸಂಗೀತದ ಮೇಲೆ ಅಪರಿಮಿತ ಪ್ರೇಮ. ಪ್ರತಿದಿನ ಸಂಗೀತ ಅಭ್ಯಾಸ ಮಾಡುತ್ತಿದ್ದ ಯೊಹಾನಿ ಈಗಾಗಲೇ ಹಲವು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಅವರ ಅದೃಷ್ಟ ಖುಲಾಯಿಸಿದ್ದು 'ಮನಿಕೆ ಮಗೆ ಹಿತೆ' ಹಾಡಿನ ಮೂಲಕ.

ವಿದೇಶದಲ್ಲಿ ವಿಧ್ಯಾಭ್ಯಾಸ

ಶೈಕ್ಷಣಿಕವಾಗಿಯೂ ಸಾಧನೆ ಮಾಡಿರುವ ಯೊಹಾನಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಕಾಲೇಜಿನಲ್ಲಿ ಅಕೌಂಟಿಗ್ಸ್‌ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಅದಕ್ಕೂ ಮುನ್ನಾ ಬ್ರಿಟನ್‌ನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಸಂಗೀತ ಮಾತ್ರವಲ್ಲದೆ ಯೊಹಾನಿ ಈಜು ಪ್ರವೀಣೆ ಸಹ. ಶಾಲೆ-ಕಾಲೇಜು ಸಮಯದಲ್ಲಿ ಹಲವು ಪ್ರತಿಷ್ಠಿತ ಟೂರ್ನಮೆಂಟ್‌ಗಳಲ್ಲಿ ಈಜು ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವ ಯೊಹಾನಿ ಒಳ್ಳೆಯ ವಾಟರ್‌ ಪೋಲೊ ಆಟಗಾರ್ತಿಯೂ ಹೌದು.



ಒಂದು ಹಾಡು ಭವಿಷ್ಯವನ್ನೇ ಬದಲಾಯಿಸಿದೆ

'ಮನಿಕೆ ಮಗೆ ಹಿತೆ' ಹಾಡು ಯೊಹಾನಿ ರಚಿಸಿದ್ದಾಗಲಿ, ಸಂಗೀತ ನಿರ್ದೇಶಿಸಿದ ಹಾಡಾಗಲಿ ಅಲ್ಲ. ಬದಲಿಗೆ ಈ ಹಾಡನ್ನು ಸತೀಶನ್ ಎಂಬುವರು ಮೊದಲು ಹಾಡಿದ್ದರು. ಅದರ ವಿಡಿಯೋ ಸಹ ಬಿಡುಗಡೆ ಆಗಿತ್ತು. ನಂತರ ಅದೇ ಹಾಡನ್ನು ಯೊಹಾನಿ ಹಾಡಿ ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಯೊಹಾನಿ ಹಾಡನ್ನು ಹಾಡಿದ್ದ ಧಾಟಿ ಸತೀಶನ್‌ಗೆ ಹಿಡಿಸಿ ಅದನ್ನು ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿಸಿ ವಿಡಿಯೋ ಸಹ ಮಾಡಿದರು. ನಂತರ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.



ಹಾಡಿನ ಸಾಹಿತ್ಯ ಬರೆದವರು ಡುಲಾನ್ ಎಆರ್‌ಎಕ್ಸ್

ಹಳ್ಳಿ ಯುವಕನೊಬ್ಬ ಸುಂದರವಾದ ಯುವತಿಯ ಅಂದವನ್ನು ಹೊಗಳುವ, ಆಕೆಗೆ ಪ್ರೇಮ ನಿವೇದನೆ ಮಾಡುತ್ತಿರುವ ಹಾಡಿದು. ಹಾಡು ಮೊದಲು ಬಿಡುಗಡೆ ಆದಾಗ ಹೆಚ್ಚಿನ ಜನವರಿಗೆ ಇಷ್ಟವಾಗಲಿಲ್ಲ. ಆದರೆ ಅದೇ ಹಾಡು ಯೊಹಾನಿ ಧ್ವನಿಯಲ್ಲಿ ಹೊರ ಬಂದಾಗ ಸೂಪರ್-ಡೂಪರ್ ಹಿಟ್ ಆಯಿತು. ಹಾಡಿಗೆ ಸಾಹಿತ್ಯ ಬರೆದಿರುವುದು ಡುಲಾನ್ ಎಆರ್‌ಎಕ್ಸ್ ಎಂಬುವರು. ಈ ಹಾಡು ಸಿಂಹಳಿಯ ಜನಪದ ಶೈಲಿಯನ್ನು ಹೊಂದಿದೆ.