ನಟ ಸತೀಶ್ ನೀನಾಸಂ ತಾಯಿ ನಿಧನ

01-10-21 04:57 pm       Filmbeat   ಸಿನಿಮಾ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ತಾಯಿ ಚಿಕ್ಕತಾಯಮ್ಮ ಇಂದು ಬೆಳಗ್ಗೆ ಆರ್ ಆರ್ ನಗರ ನಿವಾಸದಲ್ಲಿ ಕೊನೆಯುಸಿರೆದರು ಎನ್ನುವ ಸುದ್ದಿ ತಿಳಿದುಬಂದಿದೆ.

ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ತಾಯಿ ಚಿಕ್ಕತಾಯಮ್ಮ ಇಂದು (ಅಕ್ಟೋಬರ್ 1) ಬೆಳಗ್ಗೆ ಆರ್ ಆರ್ ನಗರ ನಿವಾಸದಲ್ಲಿ ಕೊನೆಯುಸಿರೆದರು ಎನ್ನುವ ಸುದ್ದಿ ತಿಳಿದುಬಂದಿದೆ. ಚಿಕ್ಕತಾಯಮ್ಮ ಅವರಿಗೆ 85 ವರ್ಷ ವಯಸ್ಸಾಗಿತ್ತು.

ಚಿಕ್ಕತಾಯಮ್ಮ ಪುತ್ರ ಸತೀಶ್ ನೀನಾಸಂ ಅವರ ಜೊತೆಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಅವರ ಸ್ವಂತ ಊರಾದ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇವತ್ತೇ ಅವರ ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಪಾರ್ಥಿವ ಶರೀರ ಬೆಂಗಳೂರಿನಿಂದ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ಅವರು ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸತೀಶ್ ಸಿನಿಮಾ ಕೆಲಸಗಳ ಜೊತೆಗೆ ತಾಯಿಯನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಆದರೀಗ ಬಾರದಲೋಕದ ಕಡೆ ಪಯಣ ಬೆಳೆಸಿದ್ದಾರೆ. 85 ವರ್ಷದ ಚಿಕ್ಕತಾಯಮ್ಮ ಅವರಿಗೆ ಒಟ್ಟು 8 ಜನ ಮಕ್ಕಳಿದ್ದರು. ಅವರಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು.

ಇತ್ತೀಚಿಗಷ್ಟೆ ಸತೀಶ್ ಗೆಳೆಯ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದರು. ಗೆಳೆಯನ ಅಗಲಿಕೆಯ ನೋವು ಮಾಸುವ ಮುನ್ನವೇ ತಾಯಿಯನ್ನು ಕಳೆದುಕೊಂಡು ಮತ್ತಷ್ಟು ದುಃಖದಲ್ಲಿದ್ದಾರೆ. ಸತೀಶ್ ತಾಯಿಯ ನಿಧನಕ್ಕೆ ಅಭಿಮಾನಿಗಳು ಮತ್ತು ಸಿನಿ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇನ್ನು ಸತೀಶ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೋದ್ರ, ದಸರ, ಮೈ ನೇಮ್ ಈಸ್ ಸಿದ್ದೇಗೌಡ, ಪರಿಮಳ ಲಾಡ್ಜ್, ಪೆಟ್ರೋಮ್ಯಾಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸತೀಶ್ ನಟಿಸುತ್ತಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.