ಹಾಲು ಮಾರುತ್ತ ಗೌಳಿಯಾದ ಶ್ರೀನಗರ ಕಿಟ್ಟಿ; ಟೀಸರ್ ನೋಡಿ ಥ್ರಿಲ್ ಆದ ಸಿನಿಪ್ರಿಯರು

05-02-22 12:35 pm       Source: Vijayakarnataka   ಸಿನಿಮಾ

ನಾಯಕ ಶ್ರೀನಗರ ಕಿಟ್ಟಿ ಹಾಲು ಕರೆದು, ಮಾರಾಟ ಮಾಡಲು ತೊಡಗಿದ್ದಾರೆ. ಉತ್ತರ ಕನ್ನಡದಲ್ಲಿರುವ ಅವರು ಈ ಕುರಿತು ವಿವರ ನೀಡಿದ್ದಾರೆ.

ಶ್ರೀನಗರ ಕಿಟ್ಟಿ ಸ್ಯಾಂಡಲ್‌ವುಡ್‌ನ ಉತ್ತಮ ನಟರಲ್ಲಿಒಬ್ಬರು. ನಟಿಸಿದ ಹಲವು ಸಿನಿಮಾಗಳಲ್ಲಿತಮ್ಮ ನಟನೆಯಿಂದಲೇ ಗಮನ ಸೆಳೆದು ನಾಯಕರಾದವರು. ಅದ್ಯಾಕೋ ಏನೋ ಕಳೆದ ನಾಲ್ಕೈದು ವರ್ಷಗಳಿಂದ ಕಿಟ್ಟಿ ನಟನೆಯ ಸಿನಿಮಾಗಳು ತೆರೆಗೆ ಬಂದಿಲ್ಲ. ಅವರು ಚಿತ್ರರಂಗದಿಂದ ದೂರವಾದರು ಎಂದುಕೊಳ್ಳುವ ಹೊತ್ತಿಗೆ ‘ಗೌಳಿ’ ಎಂಬ ಸಿನಿಮಾದ ಟೀಸರ್‌ ಮೂಲಕ ಸದ್ದು ಮಾಡುತ್ತಿದ್ದಾರೆ. ‘ಗೌಳಿ’ ಸಿನಿಮಾದ ಟೀಸರ್‌ ನೋಡಿದ ಚಿತ್ರರಂಗದ ಮಂದಿ ಇದು ಕಿಟ್ಟಿಯವರಿಗೆ ಕಮ್‌ಬ್ಯಾಕ್‌ ಸಿನಿಮಾ ಎನ್ನುತ್ತಿದ್ದಾರೆ. ಇದನ್ನು ಕಿಟ್ಟಿಯವರು ಸಹ ಒಪ್ಪಿಕೊಂಡಿದ್ದು, ಬಹಳ ದಿನಗಳ ನಂತರ ನಾಯಕನಾಗಿ ನಟಿಸುತ್ತಿದ್ದರೂ ವಿಭಿನ್ನ ಕಥೆಯ ಮೂಲಕ ತೆರೆಮೇಲೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೊಂದು ರಿವೇಂಜ್‌ ಕಥೆ
'ಗೌಳಿ ನಿಧಾನವಾಗಿ ಶುರುವಾಗಿ ಮನಸ್ಸಿನಾಳಕ್ಕೆ ಇಳಿಯುವ ಕಮರ್ಷಿಯಲ್‌ ಸಿನಿಮಾ. ಬದುಕಿನ ಮೇಲೆ ಆಸೆ ಇಟ್ಟುಕೊಂಡು ತನ್ನಷ್ಟಕ್ಕೆ ತಾನು ಬದುಕುತ್ತಿರುವ ವ್ಯಕ್ತಿಯ ಮುಗ್ಧತೆಗೆ ಮತ್ತು ಆತನ ಕುಟುಂಬಕ್ಕೆ ಕೊಡಲಿ ಇಡುವಂತಹ ಪ್ರಯತ್ನವಾದಾಗ ಆತನಲ್ಲಿರುವ ಮೃಗೀಯ ಭಾವನೆಗಳು ಹೊರಗೆ ಬರುತ್ತವೆ. ನಂತರ ಯಾವ ಮಟ್ಟದ ರಿವೇಂಜ್‌ ತೆಗೆದುಕೊಳ್ಳುತ್ತಾನೆ ಎಂಬುದು ಈ ಸಿನಿಮಾದಲ್ಲಿದೆ. ಕಥೆ ಬಹಳ ಇಂಟೆನ್ಸ್‌ ಆಗಿರುವುದರಿಂದ ಇಷ್ಟವಾಯಿತು. ಈ ಸಿನಿಮಾ ಒಪ್ಪಿಕೊಳ್ಳಲು ಅದುವೇ ಪ್ರಮುಖ ಕಾರಣ' ಎಂದಿದ್ದಾರೆ ಕಿಟ್ಟಿ.

​ಗೌಳಿ ಜನಾಂಗದ ಕಷ್ಟ-ಸುಖ

'ಗೌಳಿ ಜನಾಂಗದ ಬಗ್ಗೆ ಅಷ್ಟಾಗಿ ಎಲ್ಲರಿಗೂ ಗೊತ್ತಿಲ್ಲ. ಹಸು ಸಾಕುತ್ತಾರೆ, ಹಾಲು ಕರೆದು ಮಾರುತ್ತಾರೆ ಎಂಬುದಷ್ಟೇ ಗೊತ್ತು. ಆ ಜನಾಂಗದ ಕಷ್ಟ ಸುಖ, ಅವರ ಜೀವನ, ಈ ಜನಾಂಗಕ್ಕೆ ತೊಂದರೆಯಾಗುವ ಮಾಫಿಯಾ ಎಲ್ಲವನ್ನೂ ನಿರ್ದೇಶಕ ಸೂರ ಈ ಸಿನಿಮಾದಲ್ಲಿ ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಶಿರಸಿ ಸುತ್ತಮುತ್ತಲಿನವರದ್ದಾರಿಂದ ಸಿನಿಮಾವನ್ನು ಅದ್ಭುತವಾಗಿ ಚಿತ್ರಿಸುತ್ತಿದ್ದಾರೆ' ಎಂದಿದ್ದಾರೆ ಕಿಟ್ಟಿ.

ಒಂದೊಂದು ಶಾಟ್‌ಗೂ ಕಷ್ಟ

'ನಮ್ಮ ಇಡೀ ಸಿನಿಮಾವನ್ನು ಮಲೆನಾಡಿನ ಸುತ್ತಮುತ್ತ ಅಂದರೆ ಶಿರಸಿಯ ಇಂಟೀರಿಯರ್‌ ಹಳ್ಳಿಗಳಲ್ಲಿ ಚಿತ್ರೀಕರಿಸುತ್ತಿದ್ದೇವೆ. ಇದುವರೆಗೂ ಶೂಟಿಂಗ್ ಮಾಡಿರದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಬಹಳ ಕಷ್ಟಪಟ್ಟಿದ್ದೇವೆ. ಪ್ರತಿ ದೃಶ್ಯವೂ ಕಣ್ಣಿಗೆ ಹಬ್ಬದ ರೀತಿ ಕಾಣುತ್ತದೆ. ಆ ಜಾಗಗಳಿಗೆ ಹೋಗುವುದೇ ಒಂದು ದೊಡ್ಡ ಸವಾಲು. ಒಂದೊಂದು ಶಾಟ್‌ ತೆಗೆಯಲೂ ಚಿತ್ರತಂಡ ಕಷ್ಟಪಟ್ಟಿದೆ. ಸಿನಿಮಾಟೋಗ್ರಾಫರ್‌ ಅಂತೂ ಅದ್ಭುತವಾಗಿ ಪರಿಸರವನ್ನು ಸೆರೆ ಹಿಡಿದಿದ್ದಾರೆ. ಇನ್ನೂ 20 ದಿನದ ಚಿತ್ರೀಕರಣ ಬಾಕಿ ಇದೆ. ನನ್ನ ಪ್ರಕಾರ ಇದು ನನಗೆ ಪರ್ಫೆಕ್ಟ್ ಕಮ್‌ಬ್ಯಾಕ್‌. ನಾನು ಇದುವರೆಗೂ ನಿರ್ವಹಿಸದೇ ಇರುವ ರೀತಿಯ ಪಾತ್ರವಿದು. ಜನ ನನ್ನನ್ನು ಈ ಸಿನಿಮಾದಲ್ಲಿ ಮತ್ತೆ ನೋಡಿ ಖುಷಿಯಿಂದ ಬಾಚಿ ತಬ್ಬಿಕೊಳ್ಳುತ್ತಾರೆ' ಎಂಬುದು ಕಿಟ್ಟಿಯವರ ಮಾತು.

ತೆರೆ ಮೇಲೆ ಮ್ಯಾಜಿಕ್‌ ಆಗಲಿದೆ

'ಸಿನಿಮಾ ಜನರಿಗೆ ಇಷ್ಟವಾಗುತ್ತದೆ ಎಂದು ನಾನು ಚಿತ್ರೀಕರಣದ ಹಂತದಲ್ಲಿರುವಾಗಲೇ ಹೇಳಲು ಪ್ರಮುಖ ಕಾರಣ ಪಾತ್ರಧಾರಿಗಳು ಕೂಡ. ಪಾವನಾ, ರಂಗಾಯಣ ರಘು, ಗೋಪಾಲ ದೇಶಪಾಂಡೆ, ಯಶ್‌ ಶೆಟ್ಟಿ ಹೀಗೆ ಎಲ್ಲರೂ ಅದ್ಭುತವಾಗಿ ಪರ್ಫಾರ್ಮ್‌ ಮಾಡಿದ್ದಾರೆ. ನನ್ನ ಸಿನಿಮಾ ಎನ್ನುವುದಕ್ಕಿಂತ ಎಲ್ಲರ ಸಿನಿಮಾ ಎಂದು ಹೇಳುತ್ತೇನೆ. ಎಲ್ಲರನ್ನೂ ನನ್ನ ಚಿತ್ರಕ್ಕಾಗಿ ಒಟ್ಟಿಗೆ ಸೇರಿಸಿದ ನಿರ್ದೇಶಕ ಸೂರ ಮತ್ತು ನಿರ್ಮಾಪಕ ರಘು ಸಿಂಗಂ ಅವರಿಗೆ ಧನ್ಯವಾದ ಹೇಳಬೇಕು. 'ಗೌಳಿ' ನನಗೆ ನೂರಕ್ಕೆ ನೂರರಷ್ಟು ಕಮ್‌ ಬ್ಯಾಕ್‌ ಸಿನಿಮಾ. ಪ್ರೇಕ್ಷಕ ಈಗ ಸಿನಿಮಾವನ್ನು ಟೆಕ್ನಿಕಲ್‌ ಆಗಿ ನೋಡಲು ಆರಂಭಿಸಿದ್ದಾನೆ. ನನಗೆ ಕಥೆ ಮತ್ತು ಇದುವರೆಗಿನ ಮೇಕಿಂಗ್‌ ನೋಡಿದಾಗ ಈ ಸಿನಿಮಾ ಮೇಲೆ ಒಂದು ಕಾನ್ಫಿಡೆನ್ಸ್‌ ಬಂದಿದೆ. ಸೂರ ಮತ್ತವರ ತಂಡ ನಿಜಕ್ಕೂ ತೆರೆ ಮೇಲೆ ಮ್ಯಾಜಿಕ್‌ ಮಾಡಲಿದೆ' ಎನ್ನುತ್ತಾರೆ ಕಿಟ್ಟಿ.

ಕಿಟ್ಟಿಗಾಗಿ ಒಂದಾದ ಗೆಳೆಯರ ಬಳಗ

ಸ್ಯಾಂಡಲ್‌ವುಡ್‌ನಲ್ಲಿಇತ್ತೀಚೆಗೆ ಯುವ ನಟರೆಲ್ಲರೂ ತಮ್ಮ ಗೆಳೆಯರ ಜತೆಗೆ ನಿಲ್ಲುತ್ತಿದ್ದಾರೆ. ಮೊನ್ನೆ ನಡೆದ ‘ಗೌಳಿ’ ಟೀಸರ್‌ ಬಿಡುಗಡೆ ಸಮಾರಂಭದಲ್ಲಿಯೂ ಈ ಒಗ್ಗಟ್ಟು ಮತ್ತೊಮ್ಮೆ ಕಂಡುಬಂತು. ಶ್ರೀನಗರ ಕಿಟ್ಟಿ, ದುನಿಯಾ ವಿಜಯ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ಲವ್ಲಿ ಸ್ಟಾರ್‌ ಪ್ರೇಮ್‌ ಮೊದಲಿನಿಂದಲೂ ಆತ್ಮೀಯ ಗೆಳೆಯರು. ತಮ್ಮ ವೃತ್ತಿ ಜೀವನದ ಆರಂಭದಲ್ಲಿಒಟ್ಟಿಗೆ ಇದ್ದ ಈ ಗೆಳೆಯರು ಹಲವು ದಿನಗಳಿಂದ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ‘ಗೌಳಿ’ ಸಿನಿಮಾದ ಟೀಸರ್‌ ಬಿಡುಗಡೆಗಾಗಿ ಒಂದೇ ವೇದಿಕೆಯಲ್ಲಿಇವರೆಲ್ಲರೂ ಕಾಣಿಸಿಕೊಂಡರು. ಇವರ ಜತೆ ನಟ ಪ್ರಜ್ವಲ್‌ ದೇವರಾಜ್‌ ಸಹ ಇದ್ದರು. 'ನಮ್ಮ ಗೆಳೆಯ ಕಿಟ್ಟಿ ಮತ್ತೆ ತೆರೆಮೇಲೆ ಅಬ್ಬರಿಸಬೇಕು. ಒಳ್ಳೊಳ್ಳೆ ಸಿನಿಮಾಗಳಲ್ಲಿನಟಿಸಬೇಕು. 'ಗೌಳಿ' ಕಿಟ್ಟಿಗೆ ಒಳ್ಳೆ ಬ್ರೇಕ್‌ ಕೊಡುತ್ತದೆ. ಈಗ ಮಾತ್ರವಲ್ಲ ಬಿಡುಗಡೆಯಾಗುವವರೆಗೂ ನಾವೆಲ್ಲರೂ ಕಿಟ್ಟಿ ಜತೆ ಇರುತ್ತೇವೆ' ಎಂದು ಈ ನಟರೆಲ್ಲರೂ ಹೇಳಿದರು.

Kannada Actor Srinagar Kitty Talks About Director Sooras Gowli Movie.