‘’ರಾಜ್ ಸೌಂಡ್ಸ್ ಅಂಡ್ ಲೈಟ್ಸ್’’ ಮೇ 20ಕ್ಕೆ ರಿಲೀಸ್ ; ಹನ್ನೊಂದು ದೇಶಗಳಲ್ಲಿ ಪ್ರೀಮಿಯರ್ ಶೋ ! ತುಳು ಚಿತ್ರರಂಗದಲ್ಲಿ ವಿಭಿನ್ನ ದಾಖಲೆಗೆ ಸಿದ್ಧತೆ        

18-04-22 06:26 pm       Mangalore Correspondent   ಸಿನಿಮಾ

ರಾಜ್ ಶೆಟ್ಟಿಯವರ ‘’ಒಂದು ಮೊಟ್ಟೆಯ ಕಥೆ’’ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಎನ್ನುವ ಹೆಸರು ಮಾಡಿತ್ತು. ಈಗ ಅದೇ ಚಿತ್ರತಂಡ ತುಳು ಭಾಷೆಯಲ್ಲಿ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಮಂಗಳೂರು, ಎ.18: ರಾಜ್ ಶೆಟ್ಟಿಯವರ ‘’ಒಂದು ಮೊಟ್ಟೆಯ ಕಥೆ’’ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಎನ್ನುವ ಹೆಸರು ಮಾಡಿತ್ತು. ಈಗ ಅದೇ ಚಿತ್ರತಂಡ ತುಳು ಭಾಷೆಯಲ್ಲಿ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣದಲ್ಲಿ ತೊಡಗಿದ್ದ ‘’ರಾಜ್ ಸೌಂಡ್ಸ್ ಎಂಡ್ ಲೈಟ್ಸ್’’ ಚಿತ್ರ ಬಿಡುಗಡೆಗೆ ತಯಾರಾಗಿದ್ದು, ತುಳು ಚಿತ್ರವೊಂದನ್ನು ಇದೇ ಮೊದಲ ಬಾರಿಗೆ ಹನ್ನೊಂದು ದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸಲು ಸಿದ್ಧತೆ ನಡೆದಿದೆ.

ಇದೇ ಎಪ್ರಿಲ್ 24ರಂದು ದುಬೈನ ಮಾರ್ಕೋ ಪೋಲೊ ಹೊಟೇಲ್ ನಲ್ಲಿ ಪ್ರೀಮಿಯರ್ ಶೋ ನಡೆಯಲಿದ್ದು, ತುಳುನಾಡಿನಿಂದ ವಿದೇಶಗಳಿಗೆ ಹೋಗಿ ಸಾಧನೆ ಮಾಡಿರುವ ಸಾಧಕರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಆಮೂಲಕ ತುಳು ಭಾಷೆಯ ಚಿತ್ರವನ್ನು ಇಡೀ ಜಗತ್ತಿನ ತುಳುವರಿಗೆ ತಿಳಿಯುವಂತೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಜೊತೆಗೆ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸಲು ಕರ್ನಾಟಕ ಸರಕಾರಕ್ಕೆ ಒತ್ತಡ ಹೇರಬೇಕು ಎನ್ನುವ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ.

ಮೇ 13, 14, 15ರಂದು ಅಮೆರಿಕ, ಇಂಗ್ಲೆಂಡ್, ಬೆಹ್ರೈನ್, ಕುವೈತ್, ನೈಜೀರಿಯಾ, ಝಾಂಬಿಯಾ, ಸೌದಿ ಅರೇಬಿಯಾ, ಇಸ್ರೇಲ್, ಕತಾರ್, ಯುಎಇ ಮತ್ತು ಒಮಾನ್ ದೇಶದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಆಯಾ ಭಾಗದಲ್ಲಿ ನೆಲೆಸಿರುವ ತುಳುವರು ತಮ್ಮ ಭಾಷೆಯ ಚಿತ್ರದ ಪ್ರದರ್ಶನಕ್ಕಾಗಿ ಮುಂದೆ ಬಂದಿದ್ದಾರೆ. ಇದಲ್ಲದೆ, ಮುಂಬೈ, ಪುಣೆ, ಬರೋಡಾ, ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಸಲು ಚಿತ್ರತಂಡ ಸಿದ್ಧತೆ ನಡೆದಿದೆ.

ಮೇ 20ರಂದು ಅಧಿಕೃತವಾಗಿ ಚಿತ್ರದ ರಿಲೀಸ್

ಎಪ್ರಿಲ್ 24ರಿಂದ ತೊಡಗಿ ತುಳುವರು ಹೆಚ್ಚಿರುವ ಹಲವು ದೇಶ ಮತ್ತು ವಿವಿಧ ನಗರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿದ್ದು, ಮೇ 20ಕ್ಕೆ ಅಧಿಕೃತವಾಗಿ ಎಲ್ಲ ಕಡೆಯೂ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಿತ್ರ ಬಿಡುಗಡೆಯಾಗಲಿದೆ. ಮ್ಯಾಂಗೋ ಪಿಕಲ್ಸ್ ಬ್ಯಾನರಿನಡಿಯಲ್ಲಿ ಚಿತ್ರ ತಯಾರಾಗಿದ್ದು ತುಳುವರ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಗಮ್ಮತ್ತೇ ಚಿತ್ರದ ಕಥಾವಸ್ತು. ಮದುವೆಯ ಮುನ್ನಾ ದಿನ ನಡೆಯುವ ಮದರಂಗಿ ಕಾರ್ಯಕ್ರಮದಲ್ಲಿ ಸೌಂಡ್ಸ್, ಲೈಟ್ಸ್, ಡಿಜೆ, ಕುಣಿತ ತುಳುವರಲ್ಲಿ ಕಾಮನ್ ಆಗಿದ್ದು ಅದನ್ನೇ ಎಳೆಯಾಗಿಟ್ಟುಕೊಂಡು ವಿಭಿನ್ನ ಕಾಮಿಡಿ ಚಿತ್ರವನ್ನು ಹೆಣೆಯಲಾಗಿದೆ.

ಉದ್ಯಮಿ ಆನಂದ್ ಎನ್. ಕುಂಪಲ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರೆ, ಯುವನಟ ರಾಹುಲ್ ಅಮೀನ್ ನಿರ್ದೇಶನ ಮಾಡಿದ್ದಾರೆ. ಯುವನಟ ವಿನೀತ್ ಕುಮಾರ್ ನಾಯಕನಾಗಿ ನಟಿಸಿದ್ದಲ್ಲದೆ, ಗಿರ್ಗಿಟ್ ಚಿತ್ರದ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಜೊತೆ ಸೇರಿ ಸಂಭಾಷಣೆಯನ್ನೂ ಬರೆದಿದ್ದಾರೆ. ಉಳಿದಂತೆ ತಾರಾಗಣದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಉಮೇಶ್ ಮಿಜಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೂವರೆ ಕೋಟಿ ರೂ. ವ್ಯಯಿಸಿ ಚಿತ್ರವನ್ನು ತಯಾರಿಸಲಾಗಿದೆ.

ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಿತ್ರದ ಪ್ರಚಾರದ ಜೊತೆಗೆ ತುಳು ಚಿತ್ರರಂಗಕ್ಕೆ ವ್ಯಾಪಕ ಪ್ರಚಾರ ಸಿಗಬೇಕು ಮತ್ತು ತುಳು ಭಾಷೆಗೆ ಅಧಿಕೃತ ಮನ್ನಣೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಹಕಾರವನ್ನೂ ಪಡೆಯಲಾಗಿದೆ. ತುಳು ಅಕಾಡೆಮಿಯ ಮಂಗಳೂರಿನ ಉರ್ವಾ ಸ್ಟೋರಿನಲ್ಲಿರುವ ತುಳು ಭವನದಲ್ಲಿ ಚಿತ್ರತಂಡವು ಸುದ್ದಿಗೋಷ್ಟಿ ಕರೆದು ಚಿತ್ರದ ಪ್ರೀಮಿಯರ್ ಶೋ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದೇ ವೇಳೆ ಮಾತನಾಡಿದ ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ತುಳು ಚಿತ್ರಗಳಿಗೆ ಮಲ್ಟಿ ಫ್ಲೆಕ್ಸ್ ಗಳಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಥಿಯೇಟರ್ ಗಳೂ ಸಿಗುತ್ತಿಲ್ಲ. ಇದರಿಂದಾಗಿ ತುಳು ಚಿತ್ರಗಳಿಗೆ ಥಿಯೇಟರ್ ಪಡೆಯುವುದಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ. ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಿತ್ರಕ್ಕೆ ಅಂತಹ ತೊಂದರೆ ಎದುರಾಗದೆ ಅದ್ದೂರಿಯಾಗಿ ಮೂಡಿಬರಲಿ ಎಂದು ಹಾರೈಸಿದರು.

ಸುದ್ದಿಗೋಷ್ಠಿಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ನಿವೃತ್ತ ಪ್ರಾಂಶುಪಾಲ ಡಾ.ದೇವರಾಜ್ ಕೆ., ನಿರ್ಮಾಪಕ ಆನಂದ ಎನ್, ನಟ ಭೋಜರಾಜ ವಾಮಂಜೂರು, ಸಹ ನಿರ್ಮಾಪಕ ಅಶೋಕ್ ಕುಮಾರ್, ನವನೀತ ಶೆಟ್ಟಿ ಕದ್ರಿ, ಚಿತ್ರದ ನಿರ್ದೇಶಕ ರಾಹುಲ್ ಅಮೀನ್ ಮತ್ತಿತರರಿದ್ದರು.

Tulu movie Raj Sounds and Lights to release on May 20th.