ಹಣಕ್ಕಾಗಿ ಸಂಬಂಧಿಕರನ್ನೇ ಹೊಡೆದು ಕೊಂದಿದ್ದ ವಾಮಂಜೂರು ಪ್ರವೀಣ ; ಸುದೀರ್ಘ 28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಭಾಗ್ಯ !

04-08-22 10:54 pm       Mangalore Correspondent   ಕರಾವಳಿ

ಹಣಕ್ಕಾಗಿ ತನ್ನ ಸಂಬಂಧಿಕರs ಆಗಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ಜೈಲು ಸೇರಿದ್ದ ವಾಮಂಜೂರು ಪ್ರವೀಣ(62) 28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ.

ಮಂಗಳೂರು, ಆಗಸ್ಟ್ 4: ಹಣಕ್ಕಾಗಿ ತನ್ನ ಸಂಬಂಧಿಕರs ಆಗಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ಜೈಲು ಸೇರಿದ್ದ ವಾಮಂಜೂರು ಪ್ರವೀಣ(62) 28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ. ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಕೆಲವು ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಈ ಸರದಿಯಲ್ಲಿ ಮಂಗಳೂರಿನ ವಾಮಂಜೂರು ಪ್ರವೀಣನೂ ಹೆಸರೂ ಇದೆ.

ವಾಮಂಜೂರು ಪ್ರವೀಣ 90ರ ದಶಕದಲ್ಲಿ ತನ್ನ ಕ್ರೂರ ನಡೆಯಿಂದಲೇ ಮಂಗಳೂರಿನಲ್ಲಿ ಸಂಚಲನ ಎಬ್ಬಿಸಿದ್ದ ವ್ಯಕ್ತಿ. 1994, ಫೆಬ್ರವರಿ 23ರಂದು ರಾತ್ರಿ ತನ್ನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75), ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಎಂಬವರನ್ನು ಹಣಕ್ಕಾಗಿ ಬರ್ಬರವಾಗಿ ಕೊಲೆಗೈದಿದ್ದ ಪ್ರವೀಣ ಆಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಶಿಕ್ಷೆಗೆ ಒಳಗಾಗಿದ್ದ.

Andhra Pradesh: Software Engineer murdered in Allavaripalem in Krishna  district

ಪ್ರವೀಣ್‌ ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದ. ಆಗ ಚಾಲ್ತಿಯಲ್ಲಿದ್ದ ಸಿಂಗಲ್‌ ನಂಬರ್‌ ಲಾಟರಿ ಚಟಕ್ಕೆ ಬಿದ್ದು ಹಣಕಾಸಿನಲ್ಲಿ ತೊಂದರೆಗೀಡಾಗಿದ್ದ. ಸಿಂಗಲ್ ನಂಬರ್ ಹುಚ್ಚಿನಿಂದಾಗಿಯೇ ತನ್ನ ಪತ್ನಿ ಮತ್ತು ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನೆಲ್ಲ ಅಡವಿಟ್ಟಿದ್ದ. ಇದಲ್ಲದೆ, ಹಲವರ ಬಳಿ ಕೈ ಸಾಲವನ್ನೂ ಮಾಡಿಕೊಂಡಿದ್ದ. ಹಣಕ್ಕಾಗಿ ತಿಣುಕಾಡುತ್ತಿದ್ದಾಗಲೇ ವಾಮಂಜೂರಿನ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ. ಅಲ್ಲಿದ್ದಾಗಲೇ ಕುಡಿದ ಮತ್ತಿನಲ್ಲಿ ಮಾಡಬಾರದ್ದನ್ನು ಮಾಡಿದ್ದ. ಅದು 1994ರ ಫೆಬ್ರವರಿ 23ರ ದಿನ. ಸಂಬಂಧಿಕರ ಮನೆಗೆ ಹೋಗಿದ್ದ ಪ್ರವೀಣ ಅಲ್ಲಿಯೇ ರಾತ್ರಿ ತಂಗಿದ್ದ. ಮಧ್ಯರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಎದ್ದು ಹಾರೆಯ ಹಿಡಿಯಿಂದಲೇ ಮನೆಯಲ್ಲಿದ್ದ ನಾಲ್ವರನ್ನೂ ಹೊಡೆದು ಕೊಂದು ಹಾಕಿದ್ದ. ಆಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಮನೆಮಂದಿಯ ಕುತ್ತಿಗೆಯಲ್ಲಿದ್ದ ಚಿನ್ನದ ಆಭರಣಗಳನ್ನೂ ಕಿತ್ತುಕೊಂಡು ಪರಾರಿಯಾಗಿದ್ದ.

ಕ್ಲೂ ಕೊಟ್ಟಿತ್ತು ಖೋಡೇಸ್ ರಮ್ !

ಆವತ್ತು ಪ್ರವೀಣ ಕೃತ್ಯ ಎಸಗಿ ಹೋಗಿದ್ದು ಯಾರಿಗೂ ಗೊತ್ತಿರಲಿಲ್ಲ. ಪೊಲೀಸರು ಮನೆಯ ಮಹಜರು ನಡೆಸಿದ್ದಾಗ ಖೋಡೇಸ್ ರಮ್ ಬಾಟಲಿ ಸಿಕ್ಕಿತ್ತು. ಯಾರೋ ಆಗಂತುಕರು ಕೃತ್ಯ ಎಸಗಿರಬೇಕೆಂದು ಪೊಲೀಸರು ಕಳ್ಳರ ಬಗ್ಗೆ ಸ್ಕೆಚ್ ಹಾಕಿದ್ದರು. ಚಿನ್ನಾಭರಣ ದರೋಡೆ ಮಾಡಿದ್ದರಿಂದ ಯಾರೋ ಕಳ್ಳರು ನುಗ್ಗಿ ದರೋಡೆ ಮಾಡಿದ್ದಾರೆಂದೇ ಶಂಕೆ ಇತ್ತು. ಆದರೆ, ಖೋಡೇಸ್ ರಮ್ ಬಾಟಲಿ ಸಿಕ್ಕಿದ್ದರಿಂದ ಆವತ್ತು ಕ್ರೈಮ್ ನಲ್ಲಿ ಪಳಗಿದ್ದ ಪೊಲೀಸರಿಗೆ ವಾಮಂಜೂರು ಪ್ರವೀಣನ ಬಗ್ಗೆ ಶಂಕೆ ಬಂದಿತ್ತು. ಪ್ರವೀಣ ಎಲ್ಲಿ ಹೋದರೂ, ಖೋಡೇಸ್ ರಮ್ ಮಾತ್ರ ಕುಡಿಯುತ್ತಿದ್ದ. ಹಾಗಾಗಿ, ಅದೇ ಶಂಕೆಯಲ್ಲಿ ಪ್ರವೀಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದ.

Hindalga prison readies for Umesh Reddy's execution

ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇಡಲಾಗಿತ್ತು. ಅದರ ನಡುವೆ, ಒಮ್ಮೆ ಅಲ್ಲಿಂದ ಮಂಗಳೂರು ಜೈಲಿಗೆ ಕರೆ ತರುತ್ತಿದ್ದಾಗ ಹುಬ್ಬಳ್ಳಿಯಲ್ಲಿ ಪೊಲೀಸರು ಊಟಕ್ಕೆಂದು ನಿಲ್ಲಿಸಿದ್ದಾಗಲೇ ಅವರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದ. ಆತನ ಬಗ್ಗೆ ಮನೆಯವರಿಗೂ ಭಯ ಎಷ್ಟಿತ್ತೆಂದರೆ, ಪ್ರವೀಣ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡೋದಾಗಿ ಕುಟುಂಬಸ್ಥರು ಘೋಷಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಂಡಿದ್ದ ಪ್ರವೀಣ ಬಳಿಕ ಗೋವಾಕ್ಕೆ ತೆರಳಿ, ಅಲ್ಲಿ ಅಡಗಿಕೊಂಡಿದ್ದ. ಅಲ್ಲಿ ಒಬ್ಬಳು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ ಆಕೆಗೆ ಮಗುವನ್ನೂ ಕರುಣಿಸಿದ್ದ.

ಗೋವಾದಲ್ಲಿ ಅಡಗಿದ್ದ ಪ್ರವೀಣನನ್ನು 1999 ರಲ್ಲಿ ಮಂಗಳೂರಿನ ಇನ್ಸ್ ಪೆಕ್ಟರ್‌ ಜಯಂತ್‌ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಪತ್ತೆಹಚ್ಚಿ ಬಂಧಿಸಿತ್ತು. ವಿಟಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯ ಪ್ರವೀಣನ ಕೃತ್ಯಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಮಂಗಳೂರಿನ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟು ಎತ್ತಿಹಿಡಿದಿತ್ತು. 2003 ರಲ್ಲಿ ಸುಪ್ರೀಂ ಕೋರ್ಟು ಎತ್ತಿ ಹಿಡಿದಿತ್ತು. ಗಲ್ಲು ಶಿಕ್ಷೆಯನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಸಲ್ಲಿಸಿದ್ದ ಅರ್ಜಿಯನ್ನು 2013ರಲ್ಲಿ ರಾಷ್ಟ್ರಪತಿ ತಿರಸ್ಕರಿಸಿದ್ದರು. ಆದರೆ 2014, ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

Vamanjoor Praveen Kumar to be released after 28 years of Jail Punishment this August on Independence day. Praveen was arrested in 90s for killing four of his own family members.