ಸುರತ್ಕಲ್ ಮತ್ತೆ ಕೊತ ಕೊತ ; ಪೇಟೆ ಸಂಪೂರ್ಣ ಸ್ಥಗಿತ, ಮುಖ್ಯಮಂತ್ರಿ ತಾರತಮ್ಯ ಬಗ್ಗೆ ಜನಾಕ್ರೋಶ, 24 ಗಂಟೆಯಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯ 

25-12-22 06:51 pm       Mangalore Correspondent   ಕರಾವಳಿ

​​​​​ನಾಲ್ಕು ತಿಂಗಳ ಹಿಂದಷ್ಟೇ ಕೋಮು ದಳ್ಳುರಿಗೆ ಸಾಕ್ಷಿಯಾಗಿದ್ದ ಸುರತ್ಕಲ್ ನಲ್ಲಿ ಮತ್ತೊಬ್ಬ ಯುವಕನನ್ನು ಇರಿದು ಹತ್ಯೆ ಮಾಡಿರುವುದು ಮತ್ತೊಮ್ಮೆ ಜನಾಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.

ಮಂಗಳೂರು, ಡಿ.25 : ನಾಲ್ಕು ತಿಂಗಳ ಹಿಂದಷ್ಟೇ ಕೋಮು ದಳ್ಳುರಿಗೆ ಸಾಕ್ಷಿಯಾಗಿದ್ದ ಸುರತ್ಕಲ್ ನಲ್ಲಿ ಮತ್ತೊಬ್ಬ ಯುವಕನನ್ನು ಇರಿದು ಹತ್ಯೆ ಮಾಡಿರುವುದು ಮತ್ತೊಮ್ಮೆ ಜನಾಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಒಂದೆಡೆ ನಿಷೇಧಾಜ್ಞೆ ಜಾರಿ ಮಾಡಿದ್ದರೆ, ಮತ್ತೊಂದೆಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ವೇಳೆ, ಸುರತ್ಕಲ್ ಆಸುಪಾಸಿನಲ್ಲಿ ಮತ್ತೆ ಜನರಲ್ಲಿ ಭಯ, ಆತಂಕ ಮನೆಮಾಡಿದ್ದು ಪೇಟೆ ಪೂರ್ತಿ ಬಿಕೋ ಎನ್ನುವಂತೆ ಸ್ತಬ್ಧ ಆಗಿದೆ. ಜನರ ಸಂಚಾರವೂ ಕಡಿಮೆಯಾಗಿದೆ. 

ಸುರತ್ಕಲ್ ಬಳಿಯ ಕಾಟಿಪಳ್ಳದ ನಾಲ್ಕನೇ ಬ್ಲಾಕ್ ನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಎಂಬವರನ್ನು ನಿನ್ನೆ ರಾತ್ರಿ ಹತ್ಯೆ ಮಾಡಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಂಗಡಿಯಲ್ಲಿ ಜಲೀಲ್ ಜೊತೆ ಮಾತುಕತೆ ನಡೆಸಿದ್ದು ಬಳಿಕ ತಮ್ಮಲ್ಲಿದ್ದ ಚೂರಿಯಿಂದ ಇರಿದು ಪರಾರಿಯಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.  

ಹತ್ಯೆ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆಯಿಂದಲೇ ಸುರತ್ಕಲ್ ಸೇರಿದಂತೆ ಜಿಲ್ಲೆಯಾದ್ಯಂತ ಕೋಮು‌ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋ‌ಬಸ್ತ್ ಮಾಡಲಾಗಿದೆ. ಇತ್ತ ಸುರತ್ಕಲ್ ಸೇರಿ ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್ ಹಾಕಿದ್ದು ಪೊಲೀಸರು ಪಹರೆ ಏರ್ಪಡಿಸಿದ್ದಾರೆ. ನಿನ್ನೆ ರಾತ್ರಿ ಎಜೆ ಆಸ್ಪತ್ರೆಗೆ ತರಲಾಗಿದ್ದ ಶವವನ್ನು ಪೋಸ್ಟ್ ಮಾರ್ಟಂ ಬಳಿಕ ಇಂದು ಬೆಳಗ್ಗೆ ಕಾಟಿಪಳ್ಳದ ಮನೆಗೆ ಒಯ್ಯಲಾಯಿತು. ಶವವನ್ನು ಕಾಟಿಪಳ್ಳದ ಮನೆಗೆ ತರುವಾಗಲೇ ಜನರ ಆಕ್ರೋಶದ ಕಟ್ಟೆಯೊಡೆದಿದೆ. ಸ್ಥಳೀಯರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದು ಇಲ್ಲದಿದ್ದರೆ ಶವ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 

ಮಾಜಿ ಶಾಸಕ ಮೊಯ್ದೀನ್ ಬಾವ ಸೇರಿದಂತೆ ಸಮುದಾಯದ ಮುಖಂಡರು, ಕಳೆದ ಬಾರಿ ಸಿಎಂ ಬೊಮ್ಮಾಯಿ ಹತ್ಯೆಯಾದ ಪ್ರವೀಣ್ ಮನೆಗೆ ತೆರಳಿದ್ದರು. ಪರಿಹಾರವನ್ನೂ ಕೊಟ್ಟಿದ್ದರು. ಆದರೆ ಮಸೂದ್, ಫಾಜಿಲ್ ಮನೆಗೆ ಭೇಟಿ ಯಾಕೆ ಭೇಟಿ ಕೊಡಲಿಲ್ಲ. ಪರಿಹಾರವನ್ನೂ ಕೊಡಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಯಾಕೆ ತಾರತಮ್ಯ ಎಸಗಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಮೂಲಕ ಅದೇ ಸಂದರ್ಭದಲ್ಲಿ ನೈತಿಕ ಪೊಲೀಸರ ಕೆಲಸವನ್ನು ಸಮರ್ಥಿಸಿದ್ದರು. ಅದೇ ಕಾರಣದಿಂದ ಮತ್ತೆ ಮತ್ತೆ ಹತ್ಯೆಗಳಾಗುತ್ತಿವೆ. ಜಿಲ್ಲೆಯ ಶಾಸಕರು ಕೂಡ ಅಷ್ಟೇ, ಯಾಕೆ ತಾರತಮ್ಯ ತೋರುತ್ತಿದ್ದಾರೆ. ಫಾಜಿಲ್ ಹತ್ಯೆ ಸಂದರ್ಭ ಒಬ್ಬ ಶಾಸಕನೂ ಯಾಕೆ ಬಂದಿಲ್ಲ. ಉಸ್ತುವಾರಿ ಸಚಿವ ಯಾಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೊನೆಗೆ, ಪೊಲೀಸ್ ಕಮಿಷನರ್ ಪ್ರತಿಭಟನೆ ನಿರತರ ಮನವೊಲಿಸಿದ್ದು 24 ಗಂಟೆಯಲ್ಲಿ ಆರೋಪಿಗಳ ಬಂಧನ ಆಗಬೇಕೆಂವ ಒತ್ತಾಯಕ್ಕೆ ಸಹಮತ ನೀಡಿದ್ದಾರೆ. ಈಗಾಗಲೇ, ಹತ್ಯೆ ಪ್ರಕರಣದ ತನಿಖೆಗೆ ಎಂಟು ಅಧಿಕಾರಿಗಳಿರುವ ವಿಶೇಷ ತಂಡವನ್ನು ರಚಿಸಿದ್ದು ಕೆಲವು ಸುಳಿವು ಬೆನ್ನತ್ತಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ನಡುವೆ, ಸುರತ್ಕಲ್ ಪೊಲೀಸರು ಮಹಿಳೆಯರು ಸೇರಿದಂತೆ ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆನಂತರ, ಕಾಟಿಪಳ್ಳದಲ್ಲಿ ಸಾರ್ವಜನಿಕ ದರ್ಶನ ನಡೆದು ಕುಳೂರಿನ ಪಂಜಿಮೊಗರಿನ ಮಸೀದಿಗೆ ತಂದು ಜಲೀಲ್ ಶವವನ್ನು ದಫನ ಮಾಡಲಾಯಿತು. 

ಸರಣಿ ಹತ್ಯೆಗಳಿಗೆ ಪೊಲೀಸರ ಲೋಪ ಕಾರಣ! 

ಇದೇ ವೇಳೆ, ರಾಜಕೀಯ ಕಾರಣಕ್ಕಾಗಿ ಬಡಪಾಯಿಗಳ ಜೀವ‌ ಬಲಿ ತೆಗೆದುಕೊಳ್ಳುಬೇಡಿ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು ಸಮುದಾಯದ ಯಾರು ಕೂಡ ಗಲಭೆ ನಡೆಸದಂತೆ ವಿನಂತಿಸಿಕೊಂಡಿದ್ದಾರೆ. ಇದೇ ವೇಳೆ, ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಾದಿ ಕರಾವಳಿಯಲ್ಲಿ ಪದೇ ಹತ್ಯೆ ಘಟನೆಗಳಾಗುತ್ತಿರುವುದಕ್ಕೆ ಪೊಲೀಸರ ಲೋಪವೇ ಕಾರಣ ಎಂದಿದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳಾಗುತ್ತಿವೆ. ಈ ಬಗ್ಗೆ ಸಮಗ್ರ ಸಿಬಿಐ ತನಿಖೆ ಆಗಬೇಕು. ಯಾರು ಇದರ ಹಿಂದೆ ಇದ್ದಾರೆ, ಅವರನ್ನು ಪತ್ತೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಹತ್ಯೆ ನಡೆದು ಎರಡು ತಿಂಗಳಲ್ಲಿ ಆರೋಪಿಗಳು ಹೊರ ಬರುತ್ತಾರೆ. ಪೊಲೀಸರು ಕಠಿಣ ಕ್ರಮ ಜರುಗಿಸದ ಕಾರಣ ಇಂಥದ್ದು ಮರುಕಳಿಸುತ್ತಿದೆ. ಕೊಲೆಗಾರರ ವಿರುದ್ಧ ದೇಶದ್ರೋಹದ ಕೇಸು ಹಾಕಬೇಕು ಎಂದು ಆಗ್ರಹಿಸಿದರು. 

ಮತ್ತೆ ಶಾಂತಿ ಕದಡುತ್ತಾ ಕೋಮು ದ್ವೇಷ ! 

ಒಟ್ಟಿನಲ್ಲಿ ಚುನಾವಣೆ ಹೊತ್ತಲ್ಲಿ ಮತ್ತೊಂದು ಹತ್ಯೆ ನಡೆದಿರುವುದು ಮಂಗಳೂರಿನಲ್ಲಿ ಮತ್ತೆ ಕೋಮು ದ್ವೇಷ ಕದಡುತ್ತಾ ಅನ್ನುವ ಶಂಕೆ ಎದುರಾಗಿದೆ. ಹೀಗಾಗಿ ಮಂಗಳೂರಿನಲ್ಲಿ ಮತ್ತೆ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ 2018ರ ಚುನಾವಣೆ ಸಂದರ್ಭದಲ್ಲಿಯೂ ಕೋಮು ದ್ವೇಷದ ಹತ್ಯೆಗಳು ನಡೆದಿದ್ದವು. ಅದರಿಂದ ಕೋಮು ಧ್ರುವೀಕರಣ ನಡೆದು ಬಿಜೆಪಿಗೆ ರಾಜಕೀಯವಾಗಿ ಲಾಭ ಆಗಿತ್ತು. ಹತ್ಯೆಗಳಿಗೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಪ್ರಚಾರ ಮಾಡಲಾಗಿತ್ತು. ಈಗ ಬಿಜೆಪಿ ಸರಕಾರ ಇರುವಾಗಲೇ ಹತ್ಯೆ ನಡೆದಿರುವುದು ಜನರಲ್ಲಿ ಮತ್ತೆ ತಳಮಳ ಸೃಷ್ಟಿಸಿದೆ.

A huge gathering staged a protest keeping the dead body of slain Jaleel in a masjid demanding justice to his bereaved family here on Sunday, December 25, The protestors also demanded compensation for Jaleel's family and also arrest in this murder and previous such cases in Surathkal.