ಕಾಂತಾರ ಪಂಜುರ್ಲಿ ರೀತಿ ಅನುಕರಿಸಿದ ಸಾಂತಾ ಕ್ಲಾಸ್ ; ತುಳುವರ ನಂಬಿಕೆಗೆ ಅವಮಾನವೆಂದು ಟೀಕೆ, ವಿಡಿಯೋ ವೈರಲ್ 

29-12-22 10:29 pm       Udupi Correspondent   ಕರಾವಳಿ

ಕ್ರಿಸ್ಮಸ್ ಸಂದರ್ಭದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಕ್ರಿಸ್ತ ಹುಟ್ಟಿದ ಸಂದರ್ಭವನ್ನು ನೆನಪಿಸುವುದು ವಾಡಿಕೆ. ಆದರೆ ಇಲ್ಲೊಬ್ಬರು ಕ್ರಿಸ್ಮಸ್ ನೆಪದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಕಾಂತಾರ ಚಿತ್ರದ ಪಂಜುರ್ಲಿ ರೀತಿಯಲ್ಲಿ ವರ್ತಿಸಿ ಟೀಕೆಗೆ ಒಳಗಾಗಿದ್ದಾರೆ. 

ಉಡುಪಿ, ಡಿ.29 : ಕ್ರಿಸ್ಮಸ್ ಸಂದರ್ಭದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಕ್ರಿಸ್ತ ಹುಟ್ಟಿದ ಸಂದರ್ಭವನ್ನು ನೆನಪಿಸುವುದು ವಾಡಿಕೆ. ಆದರೆ ಇಲ್ಲೊಬ್ಬರು ಕ್ರಿಸ್ಮಸ್ ನೆಪದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಕಾಂತಾರ ಚಿತ್ರದ ಪಂಜುರ್ಲಿ ರೀತಿಯಲ್ಲಿ ವರ್ತಿಸಿ ಟೀಕೆಗೆ ಒಳಗಾಗಿದ್ದಾರೆ. 

ಕಾಂತಾರ ಚಿತ್ರದ ಕೊನೆಯಲ್ಲಿ ಪಂಜುರ್ಲಿ ಭೂತವು ಸೇರಿದ ಊರಿನ ಜನರನ್ನು ಎಲ್ಲರೂ ನನ್ನ ಭಕ್ತರು, ಎಲ್ಲರನ್ನೂ ಕಾಪಾಡುವುದು ನನ್ನ ಹೊಣೆ ಎನ್ನುವುದನ್ನು ತೋರಿಸಲು ಕೈಯಿಂದ ತಟ್ಟಿ ಹತ್ತಿರ ಕರೆಯುವ ಭಾವನಾತ್ಮಕ ಸನ್ನಿವೇಶ ಇದೆ. ಇದನ್ನು ಅನುಕರಿಸಲು ಹೋಗಿ ಹಲವರು ಟೀಕೆಗೆ ಒಳಗಾಗಿದ್ದಾರೆ. ಆದರೆ ಇದೊಂದು ಧಾರ್ಮಿಕ ನಂಬಿಕೆ, ದೈವಾರಾಧನೆಯ ಭಾಗ. ತುಳುನಾಡಿನ ಜನರ ಆರಾಧನೆ ಮತ್ತು ನಂಬಿಕೆಯ ವಸ್ತು ಎನ್ನುವುದನ್ನು ಮರೆತು ಅದೇ ರೀತಿ ಅನುಕರಿಸಲು ಹೋಗುತ್ತಾರೆ. 

ಇದೀಗ ಸಾಂತಾ ಕ್ಲಾಸ್ ವೇಷ ಧರಿಸಿದ್ದ ವ್ಯಕ್ತಿ ಪಂಜುರ್ಲಿಯ ರೀತಿ ವರ್ತಿಸಿ, ದೀಟಿಗೆಯ ರೀತಿ ವಿದ್ಯುತ್ ಬೆಳಕನ್ನು ಆವಾಹಿಸುವ ಸನ್ನಿವೇಶದ ಹಾಗೆ ನರ್ತಿಸಿದ್ದಾನೆ. ಅಲ್ಲದೆ, ಆವೇಶದಿಂದ ಓಡಿ ಹೋಗುವ ದೃಶ್ಯವೂ ಇದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆಯೂ ವ್ಯಕ್ತವಾಗಿದೆ. ರೋಶನ್ ರೆನಾಲ್ಡ್ ಎಂಬವರು ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ, ಈ ರೀತಿ ಮತ್ತೊಂದು ಧರ್ಮದ ನಂಬಿಕೆಯನ್ನು ಅಪಮಾನಿಸುವುದು ತಪ್ಪು. ಹೀಗೆ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹ ಮಾಡಿದ್ದಾರೆ. ಅಲ್ಲದೆ, ಸಾಂತಾ ಕ್ಲಾಸ್ ಮಾಡುವುದಕ್ಕೆ ಹಿನ್ನೆಲೆ ಇದೆ, ಅದಕ್ಕೊಂದು ಮರ್ಯಾದೆಯೂ ಇದೆ. ಅದನ್ನು ಹಾಳು ಗೆಡವಬೇಡಿ ಎಂದು ಹೇಳಿದ್ದಾರೆ. 

ಇದು ಎಲ್ಲಿ ನಡೆದಿರುವುದು ಮತ್ತು ಮಂಗಳೂರಿನದ್ದೇ ಹೊರಗೆಲ್ಲಾದರೂ ಮಾಡಿದ್ದೇ ಗೊತ್ತಾಗಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದು ಭಾರೀ ಟೀಕೆಯೂ ವ್ಯಕ್ತವಾಗಿದೆ.

Udupi Youths mock Kantara Panjurli wearing Santa Claus Costume, video goes viral, sparks controversy. The video is going viral on social media and netizens demand for apology.