ಕಾವ್ಯ ಭಾವನೆಗಳನ್ನು ಹೇಳಿದರೆ, ವಿಜ್ಞಾನ ಸಾರ್ವತ್ರಿಕ ಸತ್ಯಗಳನ್ನು ಮಾತ್ರ ಹೇಳುತ್ತದೆ ; ಡಾ.ಮಾಧವ ಪೆರಾಜೆ

31-12-22 09:41 pm       Mangalore Correspondent   ಕರಾವಳಿ

ಸಾಮಾನ್ಯ ಭಾಷೆಗಿಂತ ಭಿನ್ನವಾದ ಭಾಷಾ ಪ್ರಯೋಗವೇ ಕಾವ್ಯ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನ ಮಾಡುವ ಹಾಗಿಲ್ಲ. ಆದರೆ ಕನ್ನಡದಲ್ಲಿ ಕ್ರಿಯಾಪದವನ್ನು ಎಲ್ಲಿ ಮತ್ತು ಹೇಗೆ ಬಳಸುತ್ತೇವೆ ಅನ್ನವುದರಲ್ಲಿ ಕಾವ್ಯದ ಅಂದ ಅಡಗಿರುತ್ತದೆ.

ಮಂಗಳೂರು, ಡಿ.31: ಸಾಮಾನ್ಯ ಭಾಷೆಗಿಂತ ಭಿನ್ನವಾದ ಭಾಷಾ ಪ್ರಯೋಗವೇ ಕಾವ್ಯ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನ ಮಾಡುವ ಹಾಗಿಲ್ಲ. ಆದರೆ ಕನ್ನಡದಲ್ಲಿ ಕ್ರಿಯಾಪದವನ್ನು ಎಲ್ಲಿ ಮತ್ತು ಹೇಗೆ ಬಳಸುತ್ತೇವೆ ಅನ್ನವುದರಲ್ಲಿ ಕಾವ್ಯದ ಅಂದ ಅಡಗಿರುತ್ತದೆ. ಸಾಹಿತ್ಯ, ಕಾವ್ಯಗಳು ವೈಯಕ್ತಿಕ ಭಾವನೆಗಳಿಗೆ ಒತ್ತು ಕೊಟ್ಟರೆ, ವಿಜ್ಞಾನ ಅಥವಾ ಸಮಾಜ ವಿಜ್ಞಾನಗಳು ಸಾರ್ವತ್ರಿಕ ಸತ್ಯಗಳನ್ನು ಮಾತ್ರ ಹೇಳುತ್ತದೆ ಎಂದು ಹಂಪಿ ವಿವಿಯ ಪ್ರಾಧ್ಯಾಪಕ, ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಮಾಧವ ಪೆರಾಜೆ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳ್ಳಿ, ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವುಗಳ ಒಟ್ಟು ಸೇರಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಡಿ.29ರಂದು ಕುಪ್ಪಳ್ಳಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕುವೆಂಪು ದರ್ಶನ ಹೆಸರಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಮಾಧವ ಪೆರಾಜೆ, ಈಗಿನ ಕಾಲದಲ್ಲಿ ಸಾಹಿತ್ಯಕ್ಕಿಂತ ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ಹೆಚ್ಚುತ್ತಿದ್ದಾರೆ. ಪದವಿಯಲ್ಲಿ ಹಿಂದೆಲ್ಲ ಶೇ. 80ರಷ್ಟು ವಿದ್ಯಾರ್ಥಿಗಳು ಸಾಹಿತ್ಯ ಓದುವವರಿದ್ದರೆ, ಈಗ ಇದರ ಸಂಖ್ಯೆ ಕುಂಠಿತವಾಗಿದೆ. ನಾವೆಲ್ಲ ಓದುವಾಗ ದೊಡ್ಡ ಮಟ್ಟದ ಲೈಬ್ರರಿ ಇರಲಿಲ್ಲ. ಪುಸ್ತಕಗಳ ಲಭ್ಯತೆ ಇರಲಿಲ್ಲ. ಆದರೆ ಈಗ ಬೆರಳ ತುದಿಯಲ್ಲಿ ಹೋಮಿಯರ್, ಈಲಿಯಡ್, ಶೇಕ್ಸ್ ಪಿಯರ್ ಸಾಹಿತ್ಯ ಸಿಗುತ್ತದೆ. ಗೂಗಲ್ ನಲ್ಲಿ ಸರ್ಚ್ ಮಾಡಿದರೆ, ಬಹುತೇಕ ಖ್ಯಾತನಾಮರ ಸಾಹಿತ್ಯಗಳು ನಮಗೆ ಸಿಗುತ್ತವೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.

ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾಧವ ಎಂ.ಕೆ. ಕಾರ್ಯಕ್ರಮದ ಆಶಯ ಭಾಷಣ ಮಾಡಿ, ಒಂದು ಕಾರ್ಯಕ್ರಮ ರೂಪಿಸುವುದಕ್ಕೆ ಸರಕಾರಿ ವ್ಯವಸ್ಥೆಯಲ್ಲಿ ಎಷ್ಟು ಕಷ್ಟ ಇದೆ ಎಂಬುದನ್ನು ವಿವರಿಸಿದರು. ಮಂಗಳೂರಿನ ವಿವಿ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳನ್ನು ಕುವೆಂಪು ಹುಟ್ಟಿದ ಊರು ಕುಪ್ಪಳ್ಳಿಗೆ ಕರೆದೊಯ್ದು ಅಲ್ಲಿನ ಮ್ಯೂಸಿಯಂ, ಕುವೆಂಪು ತಮ್ಮ ಬಾಲ್ಯವನ್ನು ಕಳೆದಿದ್ದ ಕುಂದಾದ್ರಿ ಬೆಟ್ಟ, ಅದನ್ನೀಗ ಕವಿಶೈಲ ಎನ್ನುವ ಹೆಸರಲ್ಲಿ ಪ್ರವಾಸಿ ತಾಣವಾಗಿಸಿದ್ದನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಮಹಾನ್ ಕವಿಯ ಕವಿತೆಗಳಿಗೆ ಪ್ರೇರಣೆಯಾಗಿದ್ದ ಅಂಶಗಳನ್ನು ವಿವರಿಸಿದರು.

ಕುಪ್ಪಳ್ಳಿಯಲ್ಲಿ ವಿಚಾರ ಸಂಕಿರಣ ಕೇವಲ ಭಾಷಣಕ್ಕೆ ಸೀಮಿತವಾಗದೆ, ರಸಋಷಿ ಕುವೆಂಪು ಜೀವನ, ಬಾಲ್ಯಗಳನ್ನು ಸಾಹಿತ್ಯ ವಿದ್ಯಾರ್ಥಿಗಳಿಗೆ ಕಟ್ಟಿಕೊಡಲು ಯಶಸ್ವಿಯಾಗಿತ್ತು. ವಿವಿಧ ಕಾಲೇಜುಗಳ ಕನ್ನಡ ವಿಭಾಗದ ಉಪನ್ಯಾಸಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕುವೆಂಪು ಸಾಹಿತ್ಯ, ಕಾವ್ಯಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದರು. ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಷಿಣಿ ಶ್ರೀವತ್ಸ ಮತ್ತು ವಿವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಧಾ ಎನ್. ವೈದ್ಯ ಎರಡು ಗೋಷ್ಟಿಗಳಲ್ಲಿ ಪ್ರಬಂಧ ಮಂಡನೆಗಳಿಗೆ ಸಮನ್ವಯಕಾರರಾಗಿದ್ದರು.

Dr madhava peraje talks about kuvempu lyrics in national seminar held kuppalli in thirthahalli.