ಪುಟಾಣಿ ಅಯ್ಯಪ್ಪ ಸ್ವಾಮಿಗೆ ಮುಸ್ಲಿಂ ವ್ಯಕ್ತಿಯ ಗೌರವ ; ದ್ವೇಷ ಕದಡಿದ ನೆಲದಲ್ಲಿ ಸೌಹಾರ್ದ ನಡೆ 

08-01-23 03:00 pm       Mangalore Correspondent   ಕರಾವಳಿ

ಹಿಂದು - ಮುಸ್ಲಿಂ ಕೋಮು ದ್ವೇಷ ಕದಡಿದ್ದ ಸುಳ್ಯದಲ್ಲಿ ಸೌಹಾರ್ದ ಮರೆಯಾಗಿಲ್ಲ ಎನ್ನುವುದನ್ನು ತೋರಿಸುವ ಫೋಟೊ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಯ, ಜ.8: ಹಿಂದು - ಮುಸ್ಲಿಂ ಕೋಮು ದ್ವೇಷ ಕದಡಿದ್ದ ಸುಳ್ಯದಲ್ಲಿ ಸೌಹಾರ್ದ ಮರೆಯಾಗಿಲ್ಲ ಎನ್ನುವುದನ್ನು ತೋರಿಸುವ ಫೋಟೊ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವ ಪುಟಾಣಿ ಮಗುವನ್ನು ಕೈ ಹಿಡಿದು ಮುಸ್ಲಿಂ ವ್ಯಕ್ತಿಯೊಬ್ಬರು ರಸ್ತೆ ದಾಟಿಸಿದ್ದಲ್ಲದೆ, ಹಣ್ಣು ಹಂಪಲು ತೆಗೆದುಕೊಟ್ಟು ಉಪಚರಿಸಿದ್ದು ಜನರ ಗಮನ ಸೆಳೆದಿದೆ. 

ಸುಳ್ಯದ ಕಲ್ಲುಗುಂಡಿಯಲ್ಲಿ ಅಯ್ಯಪ್ಪ ಮಾಲಾಧಾರಿ ಪುಟಾಣಿ ಸ್ವಾಮಿಯ ಕೈ ಹಿಡಿದು ಹಣ್ಣಿನ ಅಂಗಡಿಗೆ ಕರೆದುಕೊಂಡು ಹೋದ ಮುಸ್ಲಿಂ ವ್ಯಕ್ತಿ ಇಬ್ರಾಹಿಂ ಮೈಲಿಕಲ್ಲು ಎಂಬವರು ಮಗುವಿಗೆ ಹಣ್ಣು ಹಂಪಲನ್ನು ನೀಡಿ ಪ್ರೀತಿಯಿಂದ ಉಪಚರಿಸಿದ್ದಾರೆ. ಮುಸ್ಲಿಂ ವ್ಯಕ್ತಿಯ ಸೌಹಾರ್ದ ಮತ್ತು ಅಯ್ಯಪ್ಪ ಮಾಲೆ ಧರಿಸಿದ್ದ ಮಗುವನ್ನು ಗೌರವಿಸಿದ್ದು ಸಾರ್ವಜನಿಕರ ಗಮನ ಸೆಳೆದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರಾವಳಿಯಲ್ಲಿ ಪದೇ ಪದೇ ಕೋಮು ದ್ವೇಷದ ಕೃತ್ಯಗಳು ನಡೆಯುತ್ತಿರುವುದರಿಂದ ಹಿಂದು - ಮುಸ್ಲಿಂ ಅಂದರೆ ಮುಖ ತಿರುಗಿಸುವ ಮಟ್ಟಿಗೆ ಕೆಲವು ಕಡೆ ದ್ವೇಷದ ವಾತಾವರಣ ಉಂಟಾಗಿದೆ. ಹಾಗಿದ್ದರೂ, ಸೌಹಾರ್ದ ಮರೆಯಾಗಿಲ್ಲ ಎನ್ನುವುದನ್ನು ಕೆಲವು ಸಂದರ್ಭಗಳಲ್ಲಿ ನಾವು ಕಾಣುತ್ತೇವೆ.

Muslim man found holding hands of little boy wearing Ayyappa mala at Sullia, photo goes viral amid communal fights in Mangalore.