4750 ಕೋಟಿ ಬೋಗಸ್ ಹೇಳಿಕೆ, ಹಿಂದಿನ ಸರ್ಕಾರದ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದೇ ಇವರ ಸಾಧನೆ, ಬೆಂಗ್ರೆಗೆ ತೂಗುಸೇತುವೆ ಅವೈಜ್ಞಾನಿಕ ಚಿಂತನೆ !  

18-01-23 03:42 pm       Mangalore Correspondent   ಕರಾವಳಿ

ಮಂಗಳೂರಿಗೆ 4750 ಕೋಟಿ ಅನುದಾನ ಅನ್ನುವ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ಬೋಗಸ್. ಜಲಸಿರಿ, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಎಲ್ಲವೂ ಕಾಂಗ್ರೆಸ್ ಸರಕಾರ ಇದ್ದಾಗ ಬಂದಿರುವುದು.

ಮಂಗಳೂರು, ಜ.18 : ಮಂಗಳೂರಿಗೆ 4750 ಕೋಟಿ ಅನುದಾನ ಅನ್ನುವ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ಬೋಗಸ್. ಜಲಸಿರಿ, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಎಲ್ಲವೂ ಕಾಂಗ್ರೆಸ್ ಸರಕಾರ ಇದ್ದಾಗ ಬಂದಿರುವುದು. ಸಿದ್ದರಾಮಯ್ಯ ಸರ್ಕಾರದ ಯೋಜನೆ, ಅನುದಾನಗಳಿಗೆ ಶಂಕುಸ್ಥಾಪನೆ ಮಾಡಿದ್ದಷ್ಟೇ ಈಗಿನ ಶಾಸಕರ ಸಾಧನೆ. ಇವರಿಗೆ ಕನಿಷ್ಠ ಒಂದು ಮನೆ ಕಟ್ಟಿಕೊಡಲು ಆಗಿಲ್ಲ. ಇವರಿಗೆ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಬಿಜೆಪಿಯವರು ಮಂಗಳೂರು ನಗರವನ್ನು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೊ ಹರಿಹಾಯ್ದಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತಾನು ಶಾಸಕನಾಗಿದ್ದಾಗ ತಂದಿದ್ದ ಅನುದಾನಗಳನ್ನು ಶಂಕುಸ್ಥಾಪನೆ ಮಾಡಿ, ಶಾಸಕರು ತನ್ನದೆಂದು ಹೇಳುತ್ತಿದ್ದಾರೆ. ಇವರ ಸರ್ಕಾರದಿಂದ ತಂದಿರುವ ಅನುದಾನ, ಯೋಜನೆ ಏನೆಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಹೇಳಿದರು. ಮೀನುಗಾರಿಕೆ ಬಂದರಿನಿಂದ ಬೆಂಗ್ರೆಗೆ 35 ಕೋಟಿ ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸುವುದು ಅತ್ಯಂತ ಅವೈಜ್ಞಾನಿಕ ಯೋಜನೆ. ಅಲ್ಲಿ ಖಾಯಂ ಸೇತುವೆ ಮಾಡಿದರೆ, ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆಯಾಗುತ್ತದೆ. ಅಲ್ಲಿಂದ ವಾಹನಗಳಲ್ಲಿ ಬರುವುದಕ್ಕೆ ದಾರಿಯಾಗುತ್ತದೆ. ನವ ಮಂಗಳೂರು ಬಂದರಿಗೆ ಕನೆಕ್ಟ್ ಆಗಲು ಸಾಧ್ಯವಾಗುತ್ತದೆ. ಅಲ್ಲಿ ಪ್ರವಾಸೋದ್ಯಮ ದೃಷ್ಟಿಯ ತೂಗುಸೇತುವೆ ಅವೈಜ್ಞಾನಿಕ ಚಿಂತನೆ. ಯಾರಿಗೂ ಉಪಯೋಗಕ್ಕೆ ಬಾರದ ವ್ಯವಸ್ಥೆಗೆ 35 ಕೋಟಿ ಹಾಕಿ ಏನು ಪ್ರಯೋಜನ. ಅದಕ್ಕೆ ಹತ್ತು ಕೋಟಿ ಸೇರಿಸಿದರೆ ಪರ್ಮನೆಂಟ್ ಸೇತುವೆ ಆಗುತ್ತದೆ. ಮಂಗಳೂರಿನ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಇಟ್ಟು ಕೆಲಸ ಆಗಬೇಕು. ಸಮುದ್ರ ಬದಿಯಲ್ಲಿ ತೂಗುಸೇತುವೆ ಮಾಡಿ, ಅದು ಒಂದೆರಡು ವರ್ಷದಲ್ಲಿ ತುಕ್ಕು ಹಿಡಿದು ಹೋದರೆ ಯಾರಿಗೆ ಉಪಯೋಗ ಇದೆ ಎಂದು ಪ್ರಶ್ನೆ ಮಾಡಿದರು. 

ಕುರುಚಲು ಗಿಡ ತೋರಿಸಿ ಡೀಮ್ಡ್ ಫಾರೆಸ್ಟ್ ಎಂದಿದ್ದು ಬಿಜೆಪಿ 

ಶಕ್ತಿನಗರದಲ್ಲಿ ಬಡವರಿಗೆ 920 ವಸತಿಗಳನ್ನು ನಿರ್ಮಿಸಲು ನಾನು ಶಾಸಕನಾಗಿದ್ದಾಗಲೇ ಶಂಕುಸ್ಥಾಪನೆ ಮಾಡಿದ್ದೇನೆ. ಎಕ್ಕಾರಿನಲ್ಲಿ ಹತ್ತು ಎಕರೆ ಪರ್ಯಾಯ ಜಾಗ ಕೊಟ್ಟು ಅನುಮತಿಯನ್ನು ಪಡೆದಿದ್ದೆವು. ಬಿಜೆಪಿಯವರು ಕುರುಚಲು ಗಿಡಗಳನ್ನು ತೋರಿಸಿ ಡೀಮ್ಡ್ ಫಾರೆಸ್ಟ್ ಎಂದು ಹೇಳಿ ತಪ್ಪು ದಾರಿಗೆಳೆದಿದ್ದರು. ಅದು ಡೀಮ್ಡ್ ಫಾರೆಸ್ಟ್ ಅಲ್ಲ, ಕಂದಾಯ ಭೂಮಿಯಾಗಿತ್ತು.‌ ಅಲ್ಲಿನ ಜಾಗ ಪತ್ತೆ ಮಾಡುವುದಕ್ಕಾಗಿ ಮೂರು ವರ್ಷ ತಗಲಿತ್ತು. ಮೊದಲಿಗೆ ಐದೈದು ಎಕರೆ ವಿಭಾಗಿಸಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿದ್ದೆವು. ಬಳಿಕ ಹತ್ತು ಎಕರೆಯಲ್ಲಿ ಒಂದೇ ಕಡೆಯಲ್ಲಿ ವಸತಿ ಯೋಜನೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು‌. ಬಿಜೆಪಿ ಶಾಸಕರು ಆಗಲೇ ಫಾಲೋಅಪ್ ಮಾಡುತ್ತಿದ್ದರೆ ಒಂದೇ ವರ್ಷದಲ್ಲಿ ಕೆಲಸ ಆಗುತ್ತಿತ್ತು. ಈವರೆಗೂ ಅದು ಸಾಧ್ಯವಾಗದಿರುವುದು ಶಾಸಕರ ವೈಫಲ್ಯ. ನಾನು ಮತ್ತೆ ಶಾಸಕನಾದರೆ ಕೇವಲ ಆರು ತಿಂಗಳಲ್ಲಿ ಮಾಡಿ ತೋರಿಸುತ್ತೇನೆ ಎಂದರು ಲೋಬೊ. 

ಯೋಜನೆ ಆಗೋ ಮೊದಲು ಹಕ್ಕುಪತ್ರ ಕೊಟ್ಟಿದ್ದು ಯಾಕೆಂಬ ಪ್ರಶ್ನೆಗೆ, ಹಕ್ಕುಪತ್ರ ಕೊಟ್ಟು ಪ್ರತಿ ಸದಸ್ಯನಿಗೆ ಬ್ಯಾಂಕ್ ಲೋನ್ ಮಾಡಿಸುವುದು ಸರಿಯಾದ ನಡೆ. ಜಾಗದ ಹಕ್ಕುಪತ್ರ ಇಲ್ಲದೆ, ಬ್ಯಾಂಕ್ ಸಾಲ ಕೊಡುತ್ತಾರೆಯೇ.. ನಾನು ಸರಿಯಾಗಿಯೇ ಮಾಡಿದ್ದೇನೆ. ಆಗ ವಸತಿ ಯೋಜನೆಗೆ ಸರಕಾರದಿಂದ 70 ಕೋಟಿ ಬಿಡುಗಡೆಯಾಗಿತ್ತು. ಮೂರು ಕೋಟಿ ಮೂಲಸೌಕರ್ಯಕ್ಕಾಗಿ ಬಿಡುಗಡೆ ಆಗಿತ್ತು. ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ ಯಾವುದೇ ಕೆಲಸ ಮಾಡುವುದಕ್ಕೂ ಅವಕಾಶ ಇದೆಯೆಂದು ಮುಖ್ಯಮಂತ್ರಿಯೇ ಹೇಳುತ್ತಾರೆ. ಈಗಿನ ಶಾಸಕರಿಗೆ ಈ ಬಗ್ಗೆ ಅರಿವು ಇಲ್ಲದ ಕಾರಣ ಇಷ್ಟೆಲ್ಲ ವಿಳಂಬ ಆಗಿದೆ, ಈಗ ಮತ್ತೆ ಶಂಕುಸ್ಥಾಪನೆ ಮಾಡುತ್ತೇನೆ ಎನ್ನುವುದು ನಾಚಿಕೆಗೇಡು ಎಂದರು. 

ಸ್ಮಾರ್ಟ್ ಸಿಟಿ ಉದ್ದೇಶವೇ ಬೇರೆ, ಇವರು ಮಾಡಿದ್ದೇ ಬೇರೆ 

ಲಕ್ಷದ್ವೀಪಕ್ಕೆ ಜೆಟ್ಟಿ ನಿರ್ಮಿಸುವ ಯೋಜನೆ ತಂದಿದ್ದು ಕೂಡ ನಾನು ಶಾಸಕನಾಗಿದ್ದಾಗ. ಸ್ಮಾರ್ಟ್ ಸಿಟಿಯಡಿ ರಸ್ತೆ, ಗುಂಡಿ, ಚರಂಡಿ ಸರಿಪಡಿಸುವ ಯೋಜ‌ನೆ ಮಾಡುವುದಲ್ಲ. ಸ್ಮಾರ್ಟ್ ಸಿಟಿಯದ್ದು ಬಂದರು, ಪ್ರವಾಸೋದ್ಯಮ ಮತ್ತು ಒಟ್ಟು ನಗರದ ಬೆಳವಣಿಗೆಯ ಉದ್ದೇಶ ಹೊಂದಿತ್ತು. ಆದರೆ ಇವರು ಫುಟ್ ಪಾತ್, ರಸ್ತೆ, ಚರಂಡಿ ಕೆಲಸಕ್ಕೆ ಹಣ ಹಾಕುತ್ತಿದ್ದಾರೆ. ಸ್ಮಾರ್ಟ್ ಸಿಟಿಯ ಮೂಲ ಉದ್ದೇಶವೇ ಹಾಳಾಗುತ್ತಿದೆ. ಸ್ಮಾರ್ಟ್ ಸಿಟಿಯ ಮಾನದಂಡಕ್ಕೆ ತಕ್ಕಂತೆ ಪ್ರಸ್ತಾಪ ಮುಂದಿಟ್ಟು ಯೋಜನೆ ತರಲು ಶ್ರಮಿಸಿದ್ದೇನೆ. ಆದರೆ ಅದರ ಉದ್ದೇಶ ಈಡೇರಿಕೆ ಆಗಿಲ್ಲ. ಹಿಂದೆಲ್ಲ ಯಾವುದೇ ವಿಚಾರಕ್ಕೂ ಸಾರ್ವಜನಿಕ ಅಭಿಪ್ರಾಯ ಕ್ರೋಡೀಕರಿಸುತ್ತಿದ್ದೆವು. ಈಗಿನ ಶಾಸಕರು, ಸ್ಮಾರ್ಟ್ ಸಿಟಿಯವರು ಜನರ ಜೊತೆ ಸಂವಾದ ನಡೆಸಿದ್ದಾರೆಯೇ. ಮಾಜಿ ಶಾಸಕರನ್ನು ಕರೆದಿದ್ದಾರೆಯೇ.. ಜನರನ್ನು ವಿಶ್ವಾಸಕ್ಕೆ ತೆಗೆದು ಚರ್ಚೆ ಮಾಡಬೇಕಿತ್ತು. ಇವರಿಗೆ ಅಭಿವೃದ್ಧಿ ಕುರಿತು ಚಿಂತನೆ ಇಲ್ಲ. ಪಂಪ್ವೆಲ್ ಬಸ್ ನಿಲ್ದಾಣಕ್ಕೆ ಆವಾಗಲೇ ಜಾಗ ಪಡೆದಿದ್ದರೂ, ಒಂದು ಕಲ್ಲು ಇಡಲಿಕ್ಕೆ ಇವರಿಂದ ಆಗಿಲ್ಲ. 

ಮಾರುಕಟ್ಟೆ ಕಾಮಗಾರಿ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಮಾನವೀಯ ದೃಷ್ಟಿ ಇರಬೇಕು. ನಾವು ಬಿಜೈ, ಉರ್ವಾ, ಕಂಕನಾಡಿ ಮಾರುಕಟ್ಟೆ ಕಾಮಗಾರಿ ವೇಳೆ ಪರ್ಯಾಯ ವ್ಯವಸ್ಥೆ ಮಾಡಿದ್ದೆವು. ಸೆಂಟ್ರಲ್ ಮಾರುಕಟ್ಟೆ ತೆಗೀವಾಗ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆಯೇ ಇವರು.. ಒಂದೇ ಒಂದು ರೂಪಾಯಿ ಮಂಜೂರು ಮಾಡುವ ಯೋಗ್ಯತೆ ಇಲ್ಲ. ಒಂದು ಮನೆಯನ್ನು ಕಟ್ಟಿಕೊಡುವ ಯೋಗ್ಯತೆ ಇಲ್ಲ. ಅನುದಾನದ ಬಗ್ಗೆ ಸುಳ್ಳು ಆಶ್ವಾಸನೆ ನೀಡುತ್ತಾರೆಂದು ವ್ಯಂಗ್ಯವಾಡಿದರು. ಎಬಿ ಶೆಟ್ಟಿಯವರು ವಿಜಯಾ ಬ್ಯಾಂಕಿನ ಸ್ಥಾಪಕರು. ಮಂಗಳೂರಿನಲ್ಲಿ ದೊಡ್ಡ ಹೆಸರು ಅವರದು. ಅವರ ಹೆಸರಲ್ಲಿದ್ದ ಸರ್ಕಲ್ ಕಿತ್ತು ಹಾಕಿದ್ದಾರೆ. ಹ್ಯಾಮಿಲ್ಟನ್ ಸರ್ಕಲ್ ಗೂ ಒಂದು ಇತಿಹಾಸ ಇದೆ. ಅದನ್ನೂ ತೆಗೆದು ಹೆಸರಿಲ್ಲದಂತೆ ಮಾಡಿದ್ದಾರೆ. ಇದೇ ಈಗಿನ ಶಾಸಕರ ಸಾಧನೆಯೇ ಎಂದು ಲೋಬೊ ಪ್ರಶ್ನೆ ಮಾಡಿದರು.

Rs 4750 crore funds in my tenure MLA Vedavyas kamat is Bogus slams JR Lobo in Mangalore.