ಮೀಸಲಾತಿ ದೇಶಕ್ಕೆ ಮಾರಕ, ಜಾತಿಗೊಂದು ಮೀಸಲು ಕೊಟ್ಟರೆ ಉಳಿದವರೇನು ಮಾಡಬೇಕು ?

18-01-23 11:02 pm       Mangalore Correspondent   ಕರಾವಳಿ

ಮೀಸಲಾತಿ ನೀಡುವುದು ದೇಶಕ್ಕೆ, ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಧಿಕಾರ ದಾಹದಿಂದ ಅವುಗಳ ತಾಳಕ್ಕೆ ಕುಣಿಯುತ್ತಿವೆ. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ ದೇಶದಲ್ಲಿ ಮುಂದೆ ದಂಗೆಯೇಳುವ ಸ್ಥಿತಿ ಬಂದೀತು.

ಮಂಗಳೂರು, ಜ.18: ಮೀಸಲಾತಿ ನೀಡುವುದು ದೇಶಕ್ಕೆ, ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಧಿಕಾರ ದಾಹದಿಂದ ಅವುಗಳ ತಾಳಕ್ಕೆ ಕುಣಿಯುತ್ತಿವೆ. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ ದೇಶದಲ್ಲಿ ಮುಂದೆ ದಂಗೆಯೇಳುವ ಸ್ಥಿತಿ ಬಂದೀತು. ಮೀಸಲಾತಿಗೆ ಹೋರಾಟ ನಡೆಸುವುದನ್ನು ನಾವು ಖಂಡಿಸುತ್ತೇವೆ. ಇದರ ಬಗ್ಗೆ ಜನಾಂದೋಲನ ರೂಪಿಸುತ್ತೇವೆ ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಮೂಲ ಸಂವಿಧಾನದಲ್ಲಿ ಯಾವುದೇ ಮೀಸಲಾತಿ ನೀಡುವುದನ್ನು ವಿರೋಧಿಸಲಾಗಿದೆ. ಅಲ್ಲದೆ, ಧರ್ಮಾಧರಿತ ಮೀಸಲಾತಿ ನೀಡಲೇಬಾರದು ಎಂದಿದೆ. ಆದರೆ ನಮ್ಮಲ್ಲಿ ಅಲ್ಪಸಂಖ್ಯಾತ ಹೆಸರಲ್ಲಿ ಧರ್ಮ ಆಧರಿತ ಮೀಸಲಾತಿ ಕಲ್ಪಿಸಲಾಗಿದೆ. ಧರ್ಮಕ್ಕೆ, ಜಾತಿಗೊಂದು ಮೀಸಲಾತಿ ನೀಡುತ್ತಾ ಹೋದರೆ ಸಮರ್ಥ ಯುವಜನತೆ ಅವಕಾಶ ವಂಚಿತರಾಗುತ್ತಾರೆ. ಅಧಿಕಾರ ಲಾಭ ಪಡೆಯಲು ಮೀಸಲಾತಿ ಕೊಡುವುದು, ಒಂದು ವರ್ಗವನ್ನು ಓಲೈಸುವುದು ಎಷ್ಟು ಸರಿ. ಮೀಸಲಾತಿ ಕೊಡುವದರ ಅರ್ಥ ಏನೆಂಬುದನ್ನು ರಾಜಕಾರಣಿಗಳು ಮೊದಲು ತಿಳಿದುಕೊಳ್ಳಬೇಕಿದೆ.

ಮೀಸಲಾತಿ ಹೆಸರಲ್ಲಿ ಒಂದು ಕುಟುಂಬದ ಎಲ್ಲರಿಗೂ ಸರಕಾರಿ ಹುದ್ದೆಗಳಲ್ಲಿ ಅವಕಾಶ ಕೊಡುತ್ತಾ ಹೋದರೆ, ಇತರೇ ಸಮುದಾಯಗಳು ಏನು ಮಾಡಬೇಕು. ಒಮ್ಮೆ ಮೀಸಲಾತಿ ಪಡೆದವರು ಆರ್ಥಿಕ ಸಬಲರಾದರೂ ಮತ್ತೆ ಮತ್ತೆ ತಮ್ಮ ಮಕ್ಕಳಿಗೆಲ್ಲ ಮೀಸಲಾತಿಯಿಂದ ಲಾಭ ಪಡೆಯುತ್ತಾ ಹೋದರೆ ಮೀಸಲಾತಿಗೇನು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳಾದವರು ಕೂಡ ಒಂದು ಜಾತಿಯ ಪರವಾಗಿ ಮೀಸಲಾತಿಗೆ ಆಗ್ರಹಿಸುತ್ತಿದ್ದಾರೆ. ಈಡಿಗ, ಬಿಲ್ಲವರಿಗಾಗಿ ಒಬ್ಬ ಸ್ವಾಮೀಜಿ, ಪಂಚಮಸಾಲಿ ಪರ ಇನ್ನೊಬ್ಬ ಸ್ವಾಮೀಜಿ ಧ್ವನಿ ಎತ್ತುವುದಾದರೆ ಇವರು ಕಾವಿ ಹಾಕಿ ಹಿಂದು ಸಮಾಜವನ್ನು ಪ್ರತಿನಿಧಿಸುವುದು ಯಾಕೆ ಎಂದು ಧರ್ಮೇಂದ್ರ ಪ್ರಶ್ನೆ ಮಾಡಿದರು.

ಇದಕ್ಕಾಗಿ ಒಂದೋ ಆರ್ಥಿಕ ಮೀಸಲಾತಿಯನ್ನು ಮಾತ್ರ ನೀಡಬೇಕು. ಇಲ್ಲವೇ ಗ್ರಾಮಾಂತರ ಪ್ರದೇಶದವರಿಗೆ ಮೀಸಲಾತಿ ನೀಡಲಿ. ಜಾತಿಗೊಂದು ಮೀಸಲಾತಿ ನೀಡುವುದನ್ನು ವಿರೋಧಿಸಿ ನಾವು ಸಮಾನ ಮನಸ್ಕರು ಪಕ್ಷ ಭೇದ ಮರೆತು ವಿರೋಧಿಸುತ್ತೇವೆ. ಇದಕ್ಕೊಂದು ಎನ್ ಜಿಓ ಸ್ಥಾಪನೆ ಮಾಡುವ ಉದ್ದೇಶ ಇದೆ. ಜಾತ್ಯತೀತ ರಾಷ್ಟ್ರ ಎಂದ ಮೇಲೆ ಜಾತಿಗೇನು ಕೆಲಸವಿದೆ. ಜಾತಿ ಕೇಳಿ ಉದ್ಯೋಗ ಕೊಡುವುದೇ ಅಸಭ್ಯ. ಶಾಲೆ, ಕಾಲೇಜಿನಲ್ಲಿ ಜಾತಿ ಕಾಲಂ ತೆಗೆದು ಹಾಕಬೇಕು ಎಂದು ಧರ್ಮೇಂದ್ರ ಹೇಳಿದರು.

Reservation is a threat to nation slams Hindu Maha saba in Mangalore