ಮಲ್ಪೆಯಲ್ಲಿ ಜ.22ರ ವರೆಗೆ 'ರಜತ ಉಡುಪಿ' ಬೀಚ್‌ ಉತ್ಸವ ; ವಾಟರ್‌ ಗೇಮ್ಸ್ , ಓಪನ್‌ ಸ್ವಿಮ್ಮಿಂಗ್ ಸ್ಪರ್ಧೆ, ರಾಜೇಶ್‌ ಕೃಷ್ಣನ್‌ ಹಾಗೂ ಚಂದನ್‌ ಶೆಟ್ಟಿ ಅವರಿಂದ ರಸಸಂಜೆ ! 

20-01-23 10:18 am       Udupi Correspondent   ಕರಾವಳಿ

ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಮಲ್ಪೆಯಲ್ಲಿ ಜ. 20ರಿಂದ 22ರ ವರೆಗೆ ನಡೆಯಲಿರುವ ಬೀಚ್‌ ಉತ್ಸವ-2023ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಉಡುಪಿ, ಜ.20: ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಮಲ್ಪೆಯಲ್ಲಿ ಜ. 20ರಿಂದ 22ರ ವರೆಗೆ ನಡೆಯಲಿರುವ ಬೀಚ್‌ ಉತ್ಸವ-2023ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಬೃಹತ್‌ ಗಾತ್ರದ ವೇದಿಕೆ ನಿರ್ಮಾಣವಾಗುತ್ತಿದೆ. ಕರಕುಶಲ ವಸ್ತುಗಳು ಸೇರಿದಂತೆ ಆಹಾರ ಮೇಳಗಳ ಪ್ರದರ್ಶನ ಮತ್ತು ಮಾರಾಟದ 20 ಮಳಿಗೆಗಳನ್ನು ತೆರೆಯಲಾಗುತ್ತದೆ. ಸುಮಾರು 5 ಸಾವಿರ ಮಂದಿ ವೀಕ್ಷಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಜ. 20ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಮೀನುಗಾರಿಕೆ ಸಚಿವ ಎಸ್‌. ಅಂಗಾರ ಚಾಲನೆ ನೀಡಲಿದ್ದಾರೆ. ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದು, ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌, ಆನಂದ ಸಿಂಗ್‌, ಸಂಸದರು, ಜಿಲ್ಲೆಯ ಶಾಸಕರು, ವಿವಿಧ ನಿಗಮಗಳ‌ ಅಧ್ಯಕ್ಷರು ಮೊದಲಾದ ಗಣ್ಯರು ಪಾಲ್ಗೊಳ್ಳಲಿರುವರು.

ಮುಂಜಾಗ್ರತೆಗಾಗಿ ಈಗಾಗಲೇ ಬೀಚ್‌ ಅಭಿವೃದ್ಧಿ ಸಮಿತಿಯಿಂದ 32 ಕೆಮರಾಗಳನ್ನು ಅಳವಡಿಸಲಾಗಿದೆ. ವಾಹನಗಳ ನಿಲುಗಡೆಗೆ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. 100ಕ್ಕೂ ಅಧಿಕ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದ್ದು, 4 ವೀಕ್ಷಣ ಟವರ್‌ಗಳನ್ನು ನಿರ್ಮಿಸಲಾಗಿದೆ.

ಜ. 20ರಂದು ಸಂಜೆ ರಾಜೇಶ್‌ ಕೃಷ್ಣನ್‌ ಹಾಗೂ ಚಂದನ್‌ ಶೆಟ್ಟಿ ಅವರಿಂದ ರಸಸಂಜೆ, 21ರಂದು ಕುನಾಲ್‌ ಗಾಂಜಾವಾಲ, 22ರಂದು ರಘುದೀಕ್ಷಿತ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ಓಪನ್‌ ಈಜು :

ಸ್ವಿಮ್ಮಿಂಗ್‌ ಫೆಡರೇಶನ್‌ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯ ವತಿಯಿಂದ ರಾಷ್ಟ್ರ ಮಟ್ಟದ ಓಪನ್‌ ಸ್ವಿಮ್ಮಿಂಗ್‌ ಸ್ಪರ್ಧೆಗಳು ಮಲ್ಪೆ ಸಮುದ್ರದಲ್ಲಿ ನಡೆಯಲಿದೆ. 10 ಕಿ.ಮೀ., 7.5 ಕಿ.ಮೀ., 5 ಕಿ.ಮೀ. ಮತ್ತು ರಿಲೇ ವಿಭಾಗದ ಸ್ಪರ್ಧೆಗಳು ಇರಲಿವೆ.

ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ 200 ಈಜುಗಾರರು ನೋಂದಣಿ ಮಾಡಿದ್ದಾರೆ. ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ತರಲಾಗಿದೆ. ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಮಕ್ಕಳಿಗೆ ಉಚಿತವಾಗಿ ಕಯಾಕಿಂಗ್‌ ತರಬೇತಿ ನೀಡಲಾಗುತ್ತದೆ.

ವಿನೂತನ ವಾಟರ್‌ ಸೋರ್ಟ್ಸ್, ಸ್ಪರ್ಧೆಗಳು :

ಮಹಿಳೆಯರಿಗೆ ತ್ರೋಬಾಲ್‌, ಪುರುಷರಿಗೆ ಕಬ್ಬಡಿ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಗಾಳಿಪಟ ಉತ್ಸವ, ಶ್ವಾನ ಪ್ರದರ್ಶನ ಸ್ಪರ್ಧೆ, ಕಲಾ ಶಿಬಿರ, ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ವಿನೂತನ ಬಗೆಯ ವಾಟರ್‌ ಸೋರ್ಟ್ಸ್ ಗಳಾದ ಯಾಚ್‌ ಚಾರ್ಟರ್‌, ಕ್ಲಿಫ್‌ ಡೈವಿಂಗ್‌, ಸ್ಲಾಕ್‌ ಲೆನ್‌, ಫ್ಲೈ ಬೋರ್ಡ್‌, ಸ್ಕೂಬಾ ಡೈವಿಂಗ್‌ ನಡೆಯಲಿದೆ.

ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ವಿಶೇಷ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿನೂತನ ಬಗೆಯ ವಾಟರ್‌ ನ್ಪೋರ್ಟ್ಸ್ ಗಳನ್ನು ಪರಿಚಯಿಸಲಾಗುತ್ತದೆ. ರಾಷ್ಟ್ರ ಮಟ್ಟದ ಈಜುಗಾರರು ಭಾಗವಹಿಸಲಿದ್ದು, 50-60 ಸಾವಿರ ಮಂದಿ ಅಗಮಿಸುವ ನಿರೀಕ್ಷೆ ಇದೆ. 2,500 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅತ್ಯಾಧುನಿಕ ಧ್ವನಿ-ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ.

Three day Rajata Udupi beach utsav in Malpe from 20th to 22nd, water sports, musical evening by Rajesh and Chandan Shetty. The three-day “Rajata Udupi” beach utsav, which is part of the valedictory of silver jubilee celebration of formation of Udupi district, will be held in Malpe beach from Friday.