ಕರಾವಳಿ ಜನರ ಬೇಡಿಕೆ  ; ಮುರುಡೇಶ್ವರ - ಬೆಂಗಳೂರು ರೈಲು ಮೇ ಕೊನೆಯ ತನಕ ವಿಸ್ತರಣೆ

22-01-23 01:26 pm       Mangalore Correspondent   ಕರಾವಳಿ

ಪ್ರಯಾಣಿಕರ ಬೇಡಿಕೆಗೆ ಭಾರತೀಯ ರೈಲ್ವೆ ಮಣಿದಿದೆ. ಮುರುಡೇಶ್ವರ- ಬೆಂಗಳೂರು ನಡುವಿನ ರೈಲು ಸೇವೆಯನ್ನು 2023ರ ಮೇ ತಿಂಗಳ ಕೊನೆಯ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಮಂಗಳೂರು, ಜ 22; ಪ್ರಯಾಣಿಕರ ಬೇಡಿಕೆಗೆ ಭಾರತೀಯ ರೈಲ್ವೆ ಮಣಿದಿದೆ. ಮುರುಡೇಶ್ವರ- ಬೆಂಗಳೂರು ನಡುವಿನ ರೈಲು ಸೇವೆಯನ್ನು 2023ರ ಮೇ ತಿಂಗಳ ಕೊನೆಯ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಚಳಿಗಾಲದ ಅವಧಿಗಾಗಿ ಜನವರಿ ಅಂತ್ಯದ ತನಕ ಮಾತ್ರ ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಲಾಗಿತ್ತು.

MURDESHWAR Reviews, Tourist Places, Tourist Destinations, Tourist  Information, MURDESHWAR Information, India - Reviews - 21 to 40 -  MouthShut.com

ಕರಾವಳಿ ಭಾಗದ ಜನರು ಈ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನೈಋತ್ಯ ರೈಲ್ವೆ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ ತಿಂಗಳ ಅಂತ್ಯದ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಈ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೆಚ್ಚಿನ ಪ್ರಯಾಣಿಕರು ಇರುವ ಹಿನ್ನಲೆಯಲ್ಲಿ ಈ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಸಹ ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿ ಒತ್ತಾಯಿಸುತ್ತಿದೆ.

Kundapura residents resent lack of advance railway ticket booking facility  - The Hindu

ವೇಳಾಪಟ್ಟಿ;

ಈ ರೈಲು ಬೆಂಗಳೂರು ನಗರದ ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 1 ಗಂಟೆಗೆ ಮುರುಡೇಶ್ವರ ತಲುಪಲಿದೆ. ಮುರುಡೇಶ್ವರದಿಂದ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಟು, ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪುತ್ತದೆ.

ವಾರಾಂತ್ಯದ ಶನಿವಾರ ಬೆಂಗಳೂರಿನಿಂದ ರಾತ್ರಿ ತಡವಾಗಿ ರೈಲು ಹೊರಡುವ ಕಾರಣದಿಂದ ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕಡೆಯ ಜನರು ಸಂಚಾರ ನಡೆಸಲು ಅನುಕೂಲವಾಗಿತ್ತು.

ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಎಲ್ಲಾ ಸೀಟುಗಳು ಭರ್ತಿಯಾಗಿ ವೈಟಿಂಗ್ ಲಿಸ್ಟ್‌ನಲ್ಲಿ ಜನರು ಕಾಯಬೇಕಿತ್ತು. ಆದ್ದರಿಂದ ಈ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ 10 ರಿಂದ ಜನವರಿ 29ರ ತನಕ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಈ ಮೊದಲು ಘೋಷಣೆ ಮಾಡಿತ್ತು. ಈಗ ಮತ್ತೆ ರೈಲು ಸೇವೆಯನ್ನು ಮೇ ಅಂತ್ಯದ ತನಕ ವಿಸ್ತರಣೆ ಮಾಡಲಾಗಿದೆ.

ಮುರುಡೇಶ್ವರ ಬೆಂಗಳೂರು ನಡುವೆ ರೈಲು ಸಂಖ್ಯೆ 06564, 06563 ರೈಲು ಸಂಚಾರ ನಡೆಸುತ್ತದೆ. ಈ ರೈಲು ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಮುರುಡೇಶ್ವರಕ್ಕೆ ತಲುಪಲಿದೆ.

ಬೆಂಗಳೂರಿನ ಯಶವಂತಪುರದಿಂದ-ಮುರುಡೇಶ್ವರಕ್ಕೆ ಈ ವಿಶೇಷ ರೈಲು ವಾರಕ್ಕೆ ಒಮ್ಮೆ ಸಂಚಾರ ನಡೆಸುತ್ತದೆ. ಆದರೆ ರೈಲು ದಕ್ಷಿಣ ಕನ್ನಡ, ಉಡುಪಿ ಮೂಲಕ ಸಾಗುವುದರಿಂದ ನೂರಾರು ಜನರಿಗೆ ಅನುಕೂಲವಾಗಲಿದೆ. ಈ ರೈಲು ಸೇವೆಗೆ ಜನರ ಪ್ರತಿಕ್ರಿಯೆ ಹೀಗೆ ಮುಂದುವರೆದರೆ ಮತ್ತೆ ಅದನ್ನು ವಿಸ್ತರಣೆ ಮಾಡಲಾಗುತ್ತದೆ.

ವೇಗ ಪರೀಕ್ಷೆ;

ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಶನಿವಾರ ಮೈಸೂರು ವಿಭಾಗದ ಮಾಸರಹಳ್ಳಿ-ಶಿವಮೊಗ್ಗ ಸಿಂಗಲ್ ಲೈನ್ ವಿಭಾಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಗಂಟೆಗೆ 90 ಕಿ. ಮೀ. ವೇಗದಲ್ಲಿ ವೇಗ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರು.

ಮತ್ತೊಂದು ಕಡೆ ಲೋಂಡಾ-ಮೀರಜ್ ಡಬ್ಲಿಂಗ್ ಯೋಜನೆಯ ಭಾಗವಾಗಿ ಗೋಕಾಕ್-ಘಟಪ್ರಭಾ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 125ರಲ್ಲಿ ಹೊಸದಾಗಿ ದ್ವಿಗುಣಗೊಂಡ ಮಾರ್ಗದಲ್ಲಿ ವೇಗ ಪ್ರಯೋಗ ನಡೆಸಲಾಯಿತು. ರೈಲು ಗಂಟೆಗೆ 120 ಕಿ. ಮೀ. ಗರಿಷ್ಠ ವೇಗದಲ್ಲಿ ಸಾಗಿದೆ.

Murudeshwar bangalore train extended till may end by railway department.