ಗುಜರಾತ್ ಅಲ್ಲ, ಕರ್ನಾಟಕವೇ ಮಾಡೆಲ್, ಜಗ್ಗಿ ವಾಸುದೇವ್ ಗೆ ನೂರು ಕೋಟಿ ಕೊಡ್ತಾರೆ, ಮಕ್ಕಳಿಗೆ ಸ್ಕಾಲರ್ಶಿಪ್ ಕೊಡಲು ಇವ್ರಿಗೆ ದುಡ್ಡಿಲ್ಲ ; ಹರಿಪ್ರಸಾದ್ ವಾಗ್ದಾಳಿ  

22-01-23 10:07 pm       Mangalore Correspondent   ಕರಾವಳಿ

ಜನಾರ್ದನ ಪೂಜಾರಿ ಆಶೀರ್ವಾದದಲ್ಲಿ ಎಐಸಿಸಿ ಸದಸ್ಯನಾಗಿ ನನಗೆ ಇಡೀ ದೇಶ ಸುತ್ತಲು ಅವಕಾಶ ಸಿಕ್ಕಿದೆ. ಗುಜರಾತ್ ಮಾಡೆಲ್ ಅಂತ ಹೇಳ್ತಾರಲ್ಲಾ, ಅಲ್ಲಿ ಎಷ್ಟು ಮೆಡಿಕಲ್ ಕಾಲೇಜಿದೆ ಗೊತ್ತಾ..

ಮಂಗಳೂರು, ಜ.22: ಜನಾರ್ದನ ಪೂಜಾರಿ ಆಶೀರ್ವಾದದಲ್ಲಿ ಎಐಸಿಸಿ ಸದಸ್ಯನಾಗಿ ನನಗೆ ಇಡೀ ದೇಶ ಸುತ್ತಲು ಅವಕಾಶ ಸಿಕ್ಕಿದೆ. ಗುಜರಾತ್ ಮಾಡೆಲ್ ಅಂತ ಹೇಳ್ತಾರಲ್ಲಾ, ಅಲ್ಲಿ ಎಷ್ಟು ಮೆಡಿಕಲ್ ಕಾಲೇಜಿದೆ ಗೊತ್ತಾ.. ನಮ್ಮ ಉಳ್ಳಾಲ ಕ್ಷೇತ್ರದಲ್ಲಿ ಆಯುರ್ವೇದ ಕಾಲೇಜು ಸೇರಿ ಐದು ಮೆಡಿಕಲ್ ಕಾಲೇಜು ಇದೆ. ಆದರೆ, ಇಡೀ ಗುಜರಾತಿನಲ್ಲಿರೋದು ಕೇವಲ ಐದು ಮೆಡಿಕಲ್ ಕಾಲೇಜುಗಳು. ಅಲ್ಲಿರುವುದು ಕೇವಲ 9 ಸಾವಿರ ಇಂಜಿನಿಯರಿಂಗ್ ಸೀಟುಗಳು. ಹೇಗೆ ಹೇಳುತ್ತೀರಿ, ಗುಜರಾತ್ ಮಾಡೆಲ್ ಅಂತ. ಹೀಗೆಂದು ಪ್ರಶ್ನೆ ಮಾಡಿದ್ದಾರೆ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್.  

ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಮಾತೆತ್ತಿದರೆ ಸುಳ್ಳು ಮಾತ್ರ ಹೇಳೋದು. ಗುಜರಾತ್ ಮಾಡೆಲ್ ಅನ್ನುವ ಇವರು ಅಲ್ಲಿನ ನೈಜ ಸ್ಥಿತಿ ಏನೆಂದು ಹೇಳುತ್ತಾರೆಯೇ. ನಾನು ಗುಜರಾತ್ ಸುತ್ತಿರೋದ್ರಿಂದ ಅಲ್ಲಿನ ಸ್ಥಿತಿ ಏನೆಂದು ಗೊತ್ತಿದೆ. ನಮ್ಮಲ್ಲಿ ಪರಮೇಶ್ವರ್, ಡಿಕೆ ಶಿವಕುಮಾರ್ ಅವರ ಇಂಜಿನಿಯರಿಂಗ್ ಕಾಲೇಜು ಸೇರಿ 70 ಸಾವಿರ ಇಂಜಿನಿಯರಿಂಗ್ ಸೀಟುಗಳಿವೆ. ಆದರೆ ಗುಜರಾತಿನಲ್ಲಿರೋದು ಕೇವಲ 9 ಸಾವಿರ ಇಂಜಿನಿಯರಿಂಗ್ ಸೀಟು.

ಮಂಗಳೂರಿನಂಥ ಜಾಗದಲ್ಲಿ ಅದೆಷ್ಟು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಎಷ್ಟೊಂದು ಸೀಟುಗಳಿಲ್ಲ. ಇಡೀ ದೇಶದ ಜನ ಬಂದು ಓದುತ್ತಿಲ್ಲವೇ. ನಾನು ಯಾವತ್ತೂ ಹೇಳುತ್ತಿದ್ದೆ, ಕರ್ನಾಟಕ ಅನ್ನೋದು ಸ್ವರ್ಗ ಅಂತ. ಆರೋಗ್ಯ, ಶಿಕ್ಷಣ ಎಲ್ಲ ವಿಚಾರದಲ್ಲಿಯೂ ಕರ್ನಾಟಕ ಬಹಳ ಮುಂದಿದೆ. ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಅನ್ನೋದನ್ನು ನಮಗೆ ಹೇಳಿಕೊಡಬೇಕಿಲ್ಲ. ನಾವು ತುಂಬ ಮುಂದೆ ಇದ್ದೇವೆ.

ಕರ್ನಾಟಕದಲ್ಲಿ ಮೂರು ವರ್ಷದಿಂದ ಅಧಿಕಾರ ನಡೆಸಿದ ಬಿಜೆಪಿಯವರು ಖಜಾನೆ ಖಾಲಿ ಮಾಡಿದ್ದಾರೆ. ಇವರಿಗೆ ಬಡ ಮಕ್ಕಳು, ಆದಿವಾಸಿ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡಲು ದುಡ್ಡಿಲ್ಲ. ಇವರು ಜಗ್ಗಿ ವಾಸುದೇವ್ ಅನ್ನುವ ವ್ಯಕ್ತಿಗೆ ನೂರು ಕೋಟಿ ಕೊಡುತ್ತಾರೆ. ಜಗ್ಗಿ ವಾಸುದೇವ್ ಈ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು.. ಯಾಕಾಗಿ ಅವರಿಗೆ ಇಷ್ಟು ಹಣ ಕೊಡಬೇಕು. ಬಡ ವಿದ್ಯಾರ್ಥಿಗಳಿಗೆ ಹೆಚ್ಚಂದರೆ ನಾಲ್ಕು ಕೋಟಿ ಬೇಕಾದ ಮೊತ್ತವನ್ನು ಕೊಡುವುದಕ್ಕೆ ದುಡ್ಡಿಲ್ಲ. ಇವರು ಜನರ ಪರ ಇದ್ದಾರೆಯೇ ಅನ್ನೋದು ಗೊತ್ತಾಗತ್ತೆ.

ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಕಾರ್ಯಕರ್ತರಿಗೆ ಸಾಧ್ಯವಾಗುವ ಮಾತನ್ನು ಹೇಳಬೇಕು. ಆಡಳಿತ ಪಕ್ಷದ ರಾಜ್ಯಾಧ್ಯಕ್ಷನಾಗಿರುವ ವ್ಯಕ್ತಿ ಹೇಳುವುದು ಡಾಲರ್ ರೇಟನ್ನು 40 ರೂ.ಗೆ ಇಳಿಸ್ತೀವಿ, ಮರಳಿಗೆ ಎರಡು ಸಾವಿರಕ್ಕೆ ಮಾಡ್ತೀವಿ, ಚರಂಡಿ ವಿಚಾರ ಬೇಡ, ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತ. ಒಂಚೂರು ಬುದ್ಧಿ ಅಂತ ಇರುತ್ತಿದ್ದರೆ ಇದನ್ನು ಹೇಳುತ್ತಾರೆಯೇ.. ಇವರನ್ನು ಯಾಕೆ ಜನ ಮತ ಕೊಟ್ಟು ಸಂಸದರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ.

Image

ನಮ್ಮ ಜಿಲ್ಲೆಯ ಇತಿಹಾಸ, ಪರಂಪರೆ ಹೇಳಿದರೆ ಎಷ್ಟು ಭವ್ಯ ಇತ್ತು. ಬಂಟ ಸಮುದಾಯದ ಸುಬ್ಬಯ್ಯ ಶೆಟ್ಟರು ಭೂಸುಧಾರಣೆ ಕಾಯ್ದೆ ಬಂದಾಗ ತಾನೇ ಮುಂದೆ ನಿಂತು ಭೂಮಿಯನ್ನು ದಾನ ಮಾಡಿದ್ದು ಇಲ್ಲಿನ ಪರಂಪರೆ. ಜನಾರ್ದನ ಪೂಜಾರಿಯವರು ಯಾವುದೇ ಅಡಮಾನ ಇಲ್ಲದೆ ಸಾಲ ಕೊಟ್ಟ ಹಾಗೆ. ಬ್ಯಾಂಕಿನವರು ಏನೂ ಇಲ್ಲದೆ ಸಾಲ ಕೊಡುವಂತೆ ಮಾಡಿದ್ದು ಪೂಜಾರಿಯವರು. ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಅವರ ಕಾಲುಗಳಿಗೆ ಶಿರಬಾಗಿ ಒರಗುತ್ತೇನೆ. ಆದರೆ, ಅಂಥ ಪರಂಪರೆ ಇರುವ ಜಿಲ್ಲೆಯ ಈಗಿನ ಸ್ಥಿತಿ ಹೇಗಿದೆ ಅಂದ್ರೆ, ಸಾಮರಸ್ಯವೇ ಕದಡಿ ಹೋಗಿದೆ. ಜನರು ಒಟ್ಟಿಗೆ ಕುಳಿತು ಚಹಾ ಕುಡಿಯುವುದಕ್ಕೂ ಬೆದರುವ ಸ್ಥಿತಿ ಇದೆ. ಬಿಜೆಪಿಯವರ ಬೆಂಕಿ ಕೊಡುವ ಭಾಷಣ, ಜನರನ್ನು ವಿಭಜಿಸುವ ಭಾಷಣಗಳಿಂದಾಗಿ ಜನರ ಮನಸ್ಸು ಒಡೆದು ಹೋಗಿದೆ.

Image

ಹಾಗಾಗಿ ಹೇಳುತ್ತೇನೆ, ನಿಮ್ಮ ಭವಿಷ್ಯ ನಿಮ್ಮದೇ ಕೈಯಲ್ಲಿದೆ, ನಿಮ್ಮ ಮಕ್ಕಳಿಗೆ ಚಾಕು, ಚೂರಿ ಹಿಡಿದು ಭಯೋತ್ಪಾದಕರಾಗಿ ಮಾಡ್ತೀರಾ.. ಒಳ್ಳೆ ಓದಿಸಿ ಇಂಜಿನಿಯರೋ, ಐಪಿಎಸ್, ಐಎಎಸ್ ಮಾಡಿಸುತ್ತೀರೋ ಅನ್ನುವುದು ನಿಮ್ಮ ನಿರ್ಧಾರ. ನೀವೇ ನಿರ್ಧರಿಸಿ, ಯಾರು ಆಳ್ವಿಕೆ ನಡೆಸಬೇಕು ಅನ್ನೋದು ಅಂತ. ನಾಡಿನಲ್ಲಿ ಶಾಂತಿ, ಸಾಮರಸ್ಯ ಬೇಕಂದ್ರೆ, ಕಾಂಗ್ರೆಸನ್ನು ಆಯ್ಕೆ ಮಾಡಿ ಎಂದು ಹರಿಪ್ರಸಾದ್ ಹೇಳಿದರು.

BJP has money fro Jagadish Vasudev but not for students scholarship slams Hariprasad in Mangalore.