ಎಂಆರ್ ಪಿಎಲ್ ಮಾಲಿನ್ಯದಿಂದ ಜೋಕಟ್ಟೆ, ಕಳವಾರು ರೋಗಗ್ರಸ್ತ ; ಸಂಸದ, ಶಾಸಕರಿಗೆ ಕಂಪನಿ ಫಂಡ್ ಮೇಲೆ ಪ್ರೀತಿ, ಜನರ ಆರೋಗ್ಯದ ಮೇಲಿಲ್ಲ ಕಾಳಜಿ ! 

24-01-23 08:52 pm       Mangalore Correspondent   ಕರಾವಳಿ

ಸಾರ್ವಜನಿಕ ರಂಗದ ಎಂಆರ್ ಪಿಎಲ್ ಕಂಪನಿಯು ಪರಿಸರ, ಉದ್ಯೋಗದ ವಿಷಯದಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ. ಹಸಿರು ವಲಯ ನಿರ್ಮಾಣದ ಕಡ್ಡಾಯ ನಿಯಮವನ್ನೂ ಉಲ್ಲಂಘಿಸಿದ್ದು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನರು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ.

ಮಂಗಳೂರು, ಜ.24 : ಸಾರ್ವಜನಿಕ ರಂಗದ ಎಂಆರ್ ಪಿಎಲ್ ಕಂಪನಿಯು ಪರಿಸರ, ಉದ್ಯೋಗದ ವಿಷಯದಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ. ಹಸಿರು ವಲಯ ನಿರ್ಮಾಣದ ಕಡ್ಡಾಯ ನಿಯಮವನ್ನೂ ಉಲ್ಲಂಘಿಸಿದ್ದು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನರು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಾಲಿನ್ಯ ಮಾತ್ರ ನಮಗೆ, ಉದ್ಯೋಗ, ಲಾಭ ಇತರರಿಗೆ ಅನ್ನುವ ದೃಷ್ಟಿ ಎಂಆರ್ ಪಿಎಲ್ ಕಂಪನಿಯದ್ದಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. 

ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ವತಿಯಿಂದ ಹಸಿರು ವಲಯ ನಿರ್ಮಾಣ, ಪರಿಸರ ಮಾಲಿನ್ಯ ತಡೆಯಲು ಆಗ್ರಹಿಸಿ, ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹಿಸಿ ಎಂಆರ್ ಪಿಎಲ್ ಪ್ರಧಾನ ದ್ವಾರದ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.‌

ಕೈಗಾರಿಕೆಯ ಪೆಟ್ ಕೋಕ್ ಮಾಲಿನ್ಯ ತಡೆಯಲು ಸುತ್ತಲೂ 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶಂತೆ ಭೂಮಿ ಗುರುತಿಸಲಾಗಿದ್ದರೂ ಕಂಪೆನಿ ಕುಂಟು ನೆಪಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ. ಇದರಿಂದ ಜೋಕಟ್ಟೆ, ಕಳವಾರು ಗ್ರಾಮಗಳು ರೋಗಗ್ರಸ್ತಗೊಂಡಿವೆ. ಕಂಪೆನಿಯ ಮಾಲಿನ್ಯದಿಂದ ಫಲ್ಗುಣಿ ನದಿಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಕಂಪೆನಿಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಮುಲಾಜಿಲ್ಲದೆ ಹೊರಗಿಡಲಾಗುತ್ತಿದೆ. ಈ ಕುರಿತು ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಕಂಪೆನಿಯ ಹಿತಗಳ ಕುರಿತು ಹೆಚ್ಚು ಆಸಕ್ತರಾಗಿರುವ ಬಿಜೆಪಿ ಸಂಸದ, ಶಾಸಕರುಗಳಿಗೆ ಜನತೆಗಿಂತ ಕಂಪೆನಿಯ ಗುತ್ತಿಗೆ, ಸಿಎಸ್ಆರ್ ನಿಧಿಯೇ ಹೆಚ್ಚು ಹತ್ತಿರವಾಗಿದೆ.  ಯುವಜನರ ಉದ್ಯೋಗ, ಮಾಲಿನ್ಯದಂತಹ ಗಂಭೀರ ಪ್ರಶ್ನೆಗಳ ಕುರಿತು ಮಾತಾಡಬೇಕಾದ ಶಾಸಕರು ಧರ್ಮ ದ್ವೇಷದ ಭಾಷಣಗಳನ್ನು ಮಾಡಿ ಯುವಕರನ್ನು ಹಿಂಸೆಗೆ ಪ್ರಚೋದಿಸುವುದರಲ್ಲಿ ತೊಡಗಿಸಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು‌. 

ಮಾಜಿ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ಕಾಂಗ್ರೆಸ್ ಸರಕಾರ ಇದ್ದಾಗ ಪರಿಸರ ಮಾಲಿನ್ಯದಿಂದ ಆಗಿರುವ ಹಾನಿ ಸರಿಪಡಿಸಲು ಆರು ಅಂಶಗಳ ಪರಿಹಾರ ಕ್ರಮ ಜಾರಿಗೊಳಿಸುವಂತೆ ಎಂ ಆರ್ ಪಿಎಲ್ ಗೆ ಆದೇಶಿಸಿತ್ತು. ನಾನು ಶಾಸಕನಾಗಿದ್ದಾಗ ಪರಿಸರ ಮಾಲಿನ್ಯ ಕಂಡು ಹಿಡಿಯಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತಿ ತಿಂಗಳು ಇಡೀ ಸುರತ್ಕಲ್ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೆ. ಈಗಿನ ಶಾಸಕ ಭರತ್ ಶೆಟ್ಟಿ ಲವ್ ಜಿಹಾದ್, ಮಸೀದಿ ಮಂದಿರ ಅಂತ ಭಾಷಣ ಮಾಡುವುದರಲ್ಲೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಶಾಸಕರಿಂದಾಗಿ ಕಂಪೆನಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಮಾಜಿ ಉಪಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಮುಂದಾಳುಗಳಾದ ಮಂಜುಳಾ ನಾಯಕ್, ಸುಂದರ ಶೆಟ್ಟಿ, ನಾಗರಿಕ ಹೋರಾಟ ಸಮಿತಿಯ ಅಬೂಬಕ್ಕರ್ ಬಾವಾ, ಸಿಲ್ವಿಯಾ ಜೋಕಟ್ಟೆ, ಶರೀಫ್ ನಿರ್ಮುಂಜೆ, ಶೇಖರ ನಿರ್ಮುಂಜೆ, ರಾಜು ಜೋಕಟ್ಟೆ, ಚಂದ್ರಶೇಖರ ಜೋಕಟ್ಟೆ, ಸೀತಾರಾಮ ಆಚಾರ್ಯ, ಇಕ್ಬಾಲ್ ಜೋಕಟ್ಟೆ, ಯಮುನಾ ಕೆಂಜಾರು, ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ.ಕೆ ಮಕ್ಸೂದ್, ಪ್ರಮೀಳಾ, ಸಲೀಂ ಶ್ಯಾಡೋ, ಸಮರ್ಥ್ ಭಟ್ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು. ಆರಂಭದಲ್ಲಿ ಎಚ್ ಪಿಸಿಎಲ್ ಪ್ರಧಾನ ದ್ವಾರದಿಂದ ಎಮ್ಆರ್ ಪಿಎಲ್ ಪ್ರಧಾನ ದ್ವಾರದವರಗೆ ಬೃಹತ್ ಮೆರವಣಿಗೆ ನಡೆಯಿತು‌.

Highlighting the problems of air, water and noise pollution caused by Sulphur and Coke units at the Mangalore Refinery and Petrochemical Limited (MRPL) Phase III plant, several residents of Jokatte and surrounding villages staged a protest due to raising skin diseases.