ಉಳ್ಳಾಲದ ರಸ್ತೆಯುದ್ದಕ್ಕೂ ಹರಿದ ಫಿಶ್ ಮೀಲ್ ತ್ಯಾಜ್ಯ ; ಸರಣಿ ಅಪಘಾತ, ಸ್ಥಳೀಯರಿಂದ ಟ್ಯಾಂಕರ್ ತಡೆದು ಆಕ್ರೋಶ 

27-01-23 03:49 pm       Mangalore Correspondent   ಕರಾವಳಿ

ಟ್ಯಾಂಕರ್ ಒಂದರಲ್ಲಿ ಸಾಗಿಸುತ್ತಿದ್ದ ಫಿಶ್ ಮಿಲ್ ಫ್ಯಾಕ್ಟರಿಯ ದುರ್ನಾತ ತ್ಯಾಜ್ಯವು ರಸ್ತೆಯುದ್ದಕ್ಕೂ ಹರಿದ ಪರಿಣಾಮ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿದ್ದು ರೊಚ್ಚಿಗೆದ್ದ ಸ್ಥಳೀಯರು ಟ್ಯಾಂಕರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. 

ಉಳ್ಳಾಲ, ಜ.27: ಟ್ಯಾಂಕರ್ ಒಂದರಲ್ಲಿ ಸಾಗಿಸುತ್ತಿದ್ದ ಫಿಶ್ ಮಿಲ್ ಫ್ಯಾಕ್ಟರಿಯ ದುರ್ನಾತ ತ್ಯಾಜ್ಯವು ರಸ್ತೆಯುದ್ದಕ್ಕೂ ಹರಿದ ಪರಿಣಾಮ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿದ್ದು ರೊಚ್ಚಿಗೆದ್ದ ಸ್ಥಳೀಯರು ಟ್ಯಾಂಕರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. 

ಫಿಶ್ ಮೀಲ್ ತ್ಯಾಜ್ಯ ಹೊತ್ತಿದ್ದ ಟ್ಯಾಂಕರ್ ಇಂದು ಬೆಳಗ್ಗೆ ಉಳ್ಳಾಲ ಕೋಟೆಪುರದ ಫ್ಯಾಕ್ಟರಿ ಕಡೆ ಸಾಗುತ್ತಿದ್ದ ವೇಳೆ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ಣದವರೆಗೆ ರಸ್ತೆಯುದ್ದಕ್ಕೂ ದುರ್ನಾತ ಬೀರುವ ರಾಸಾಯನಿಕ‌ ಮಿಶ್ರಿತ ತ್ಯಾಜ್ಯವನ್ನ ಚೆಲ್ಲುತ್ತಾ ಸಾಗಿದೆ. ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಜಾರಿ ಬಿದ್ದಿದ್ದು, ಸ್ಥಳೀಯರು ತಕ್ಷಣ ಟ್ಯಾಂಕರನ್ನ ತಡೆದು ನಿಲ್ಲಿಸಿ ಚಾಲಕನನ್ನ ತರಾಟೆಗೆ ತೆಗೆದಿದ್ದಾರೆ.

ಸ್ಥಳೀಯ ಮೀನುಗಾರರಾದ ಗಣೇಶ್ ಉಳ್ಳಾಲ್ ಮಾತನಾಡಿ ಉಳ್ಳಾಲ ಕೋಟೆಪುರದಲ್ಲಿರುವ ಫಿಶ್ ಮೀಲ್ ಫ್ಯಾಕ್ಟರಿಗಳು ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಾಚರಿಸುತ್ತಿವೆ. ತಮ್ಮ ಫ್ಯಾಕ್ಟರಿಗಳ ಮಲಿನಗಳನ್ನ ಸಮುದ್ರಕ್ಕೆ ಬಿಟ್ಟು ಮತ್ಸ್ಯ ಸಂತತಿಗಳ ಮಾರಣ ಹೋಮ ನಡೆಸಿವೆ. ಸಾಲದಕ್ಕೆ ಇದೀಗ ಹೊರ ರಾಜ್ಯಗಳಿಂದಲೂ ಫಿಶ್ ಮೀಲ್ ಮಲಿನಗಳನ್ನ ಆಮದು ಮಾಡಿಸಿ ಉಳ್ಳಾಲ ನಗರವನ್ನೆ ಗಬ್ಬು ನಾರವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಎಚ್ಚೆತ್ತ ಫಿಶ್ ಮೀಲ್ ಫ್ಯಾಕ್ಟರಿಯವರು ಟ್ಯಾಂಕರ್ ನೀರನ್ನ ಬಳಸಿ ರಸ್ತೆಯನ್ನ ಸ್ವಚ್ಛಗೊಳಿಸಿದ್ದಾರೆ. ಸ್ಥಳಕ್ಕೆ ಉಳ್ಳಾಲ ನಗರಸಭೆ ಆಯುಕ್ತರಾದ ವಿದ್ಯಾ ಕಾಳೆ ಭೇಟಿ ನೀಡಿದ್ದು ಟ್ಯಾಂಕರಲ್ಲಿದ್ದ ತ್ಯಾಜ್ಯವನ್ನ ಸುರಕ್ಷಿತವಾಗಿ ವಿಲೇವಾರಿ ನಡೆಸದ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Mangalore Truck spills dirty fish water all over the road at Kotepura in Ullal, public stop truck and protest.