ವಿಐಪಿ ಇರುವಾಗಲೇ ಏರ್ಪೋರ್ಟ್ ರಸ್ತೆ ಬಂದ್ ; ಕೊರಗಜ್ಜನ ಕೋಲದ ನೆಪದಲ್ಲಿ ರಸ್ತೆ ಬ್ಲಾಕ್ ಭದ್ರತಾ ವೈಫಲ್ಯವಲ್ಲವೇ ?! 

11-02-23 10:52 pm       Mangalore Correspondent   ಕರಾವಳಿ

ಫೆ.11ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ದೇಶದ ಎರಡನೇ ಅತಿದೊಡ್ಡ ವಿವಿಐಪಿ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿದ್ದರು. ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರವಾಸ ಕಾರ್ಯಕ್ರಮ ಇದ್ದುದರಿಂದ ಎರಡು ತಾಲೂಕುಗಳಲ್ಲಿ ಪೂರ್ತಿಯಾಗಿ ಪೊಲೀಸರನ್ನು ಎಲರ್ಟ್ ಮಾಡಲಾಗಿತ್ತು.

ಮಂಗಳೂರು, ಫೆ.11: ಫೆ.11ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ದೇಶದ ಎರಡನೇ ಅತಿದೊಡ್ಡ ವಿವಿಐಪಿ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿದ್ದರು. ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರವಾಸ ಕಾರ್ಯಕ್ರಮ ಇದ್ದುದರಿಂದ ಎರಡು ತಾಲೂಕುಗಳಲ್ಲಿ ಪೂರ್ತಿಯಾಗಿ ಪೊಲೀಸರನ್ನು ಎಲರ್ಟ್ ಮಾಡಲಾಗಿತ್ತು. ಮುಖ್ಯಮಂತ್ರಿ, ರಾಜ್ಯಪಾಲರಂತಹ ವಿಐಪಿಗಳು ಬರುವುದಿದ್ದರೆ, ರಸ್ತೆ ತಡೆ ಇಲ್ಲದಂತಾಗಲು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸುವುದು, ಕಾನೂನು ಪಾಲನೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡುವುದು ವಾಡಿಕೆ.  

ಆದರೆ ಮಂಗಳೂರು ನಗರದಿಂದ ಏರ್ಪೋರ್ಟ್ ಸಾಗುವ ರಸ್ತೆಯ ಪದವಿನಂಗಡಿಯಲ್ಲಿ ರಸ್ತೆಯನ್ನೇ ಬ್ಲಾಕ್ ಮಾಡಲಾಗಿತ್ತು. ಅತ್ಯಂತ ಹೆಚ್ಚು ವಾಹನಗಳು ಸಾಗುವ ಮತ್ತು ವಿಐಪಿಗಳ ಪ್ರಯಾಣಿಸುವ ರಸ್ತೆಯಾಗಿರುವ ಇಲ್ಲಿ ಕೊರಗಜ್ಜನ ಕೋಲ ಇದೆಯೆಂದು ಶನಿವಾರ ಬೆಳಗ್ಗಿನಿಂದಲೇ ಒಂದು ಬದಿಯ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಅದರಲ್ಲೂ ಮಂಗಳೂರಿಗೆ ದೇಶದ ವಿಐಪಿ ವ್ಯಕ್ತಿಯೊಬ್ಬರು ಆಗಮಿಸುತ್ತಿರುವ ಹೊತ್ತಲ್ಲಿ ಈ ರೀತಿ ಪ್ರಮುಖ ಏರ್ಪೋರ್ಟ್ ರಸ್ತೆಯನ್ನೇ ಮುಚ್ಚಿರುವುದು ಪ್ರಮುಖ ಭದ್ರತಾ ವೈಫಲ್ಯಗಳಲ್ಲಿ ಒಂದು ಎಂದರೆ ತಪ್ಪಲ್ಲ.

ಅಮಿತ್ ಷಾ ಪುತ್ತೂರಿನಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ನಲ್ಲಿ ಬರುವುದೆಂದು ನಿಗದಿಯಾಗಿತ್ತು. ಒಂದ್ವೇಳೆ, ಸಂಜೆ ಅಲ್ಲಿಂದ ಹೊರಡುವುದು ತಡವಾಗುತ್ತಿದ್ದರೆ ಪರ್ಯಾಯ ರಸ್ತೆಯನ್ನು ಮೊದಲೇ ರೆಡಿ ಮಾಡಿಡಬೇಕಿರುತ್ತದೆ. ಅದಕ್ಕಾಗಿ ಆ ರಸ್ತೆಯ ಉದ್ದಕ್ಕೂ ಪೊಲೀಸರನ್ನೂ ನಿಯೋಜನೆ ಮಾಡಬೇಕಾಗುತ್ತದೆ. ಯಾಕಂದ್ರೆ, ಝೀರೋ ಟ್ರಾಫಿಕ್ ಮಾಡಿ ರಸ್ತೆಯನ್ನು ಸಂಚಾರಕ್ಕೆ ತೆರೆಸಿಕೊಡುವ ಜವಾಬ್ದಾರಿ ಪೊಲೀಸರದ್ದು ಇರುತ್ತದೆ. ಹಾಗಾಗುತ್ತಿದ್ದರೆ, ಪುತ್ತೂರಿನಿಂದ ಬಂಟ್ವಾಳ, ಮಂಗಳೂರು ಆಗಿಯೇ ಕೆಪಿಟಿ ವೃತ್ತದಿಂದ ಪದವಿನಂಗಡಿ, ಬೊಂದೇಲ್ ರಸ್ತೆಯಾಗಿ ಏರ್ಪೋರ್ಟ್ ತಲುಪಬೇಕಿತ್ತು. ಆ ಕಾರಣದಿಂದ ಯಾವುದೇ ಕಾರಣಕ್ಕೂ ಪರ್ಯಾಯ ರಸ್ತೆ ಎಂದು ಇರಿಸಬೇಕಾದ ದಾರಿಯನ್ನು ಮುಚ್ಚುವಂತಿಲ್ಲ.

ಆದರೆ ಮಂಗಳೂರು ಪೊಲೀಸರು ಪದವಿನಂಗಡಿಯಲ್ಲಿ ಕೊರಗಜ್ಜನ ಕೋಲ ಇದೆಯೆಂದು ಬೆಳಗ್ಗಿನಿಂದಲೇ ಒಂದು ಭಾಗದ ರಸ್ತೆಯನ್ನು ಬಂದ್ ಮಾಡಲು ಅವಕಾಶ ಕೊಟ್ಟಿದ್ದರು. ಪ್ರತಿ ವರ್ಷವೂ ಕೊರಗಜ್ಜನ ವಾರ್ಷಿಕ ಕೋಲದಂದು ಸಂಜೆ ಹೊತ್ತಿಗೆ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ಜನ ಸೇರುವುದರಿಂದ ರಸ್ತೆಯಲ್ಲಿಯೇ ಕುರ್ಚಿಗಳನ್ನಿಟ್ಟು ವ್ಯವಸ್ಥೆ ಮಾಡುತ್ತಾರೆ. ಆದರೆ ಈ ಬಾರಿ ಬೆಳಗ್ಗೆಯೇ ರಸ್ತೆಯಲ್ಲಿ ವೇದಿಕೆ ನಿರ್ಮಿಸಿ, ಪೆಂಡಾಲ್ ಹಾಕಿದ್ದರು. ಸಂಜೆಯ ಕಾರ್ಯಕ್ರಮಕ್ಕಾಗಿ ಬೆಳಗ್ಗಿನಿಂದಲೇ ರಸ್ತೆಯಲ್ಲಿ ಕುರ್ಚಿಗಳನ್ನು ಇರಿಸಬೇಕಾಗಿತ್ತೇ ಅನ್ನುವುದು ಪ್ರಶ್ನೆ. ಸಂಜೆಯ ವೇಳೆಗೆ ವೇದಿಕೆಯಲ್ಲಿ ರಸಮಂಜರಿ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ಕೋರ್ಟ್ ನಿಯಮದ ಪ್ರಕಾರ ಯಾವುದೇ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಲು ಅವಕಾಶ ಇಲ್ಲ.

ಹಾಗಿದ್ದರೂ, ಮಂಗಳೂರಿನಲ್ಲಿ ಎಸ್ ಪಿಜಿ ಭದ್ರತೆ ಇರುವ ಸಂದರ್ಭದಲ್ಲಿ ಏರ್ಪೋರ್ಟ್ ರಸ್ತೆಯನ್ನು ಬಂದ್ ಮಾಡಿರುವುದು ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ವೈಫಲ್ಯವಲ್ಲವೇ ಅನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು. ಒಂದು ದಿನದ ಹಿಂದೆ ಅಮಿತ್ ಷಾ ಕಾವೂರಿನಿಂದ ಬೋಂದೆಲ್ ಅಥವಾ ಪದವಿಂಗಡಿ ವರೆಗೆ ರೋಡ್ ಶೋ ನಡೆಸುವುದೆಂದು ಬಿಜೆಪಿ ಪ್ಲಾನ್ ಇತ್ತು. ಕೊನೆಗೆ, ಅಮಿತ್ ಷಾ ಬರುವಾಗ ತಡವಾಗುತ್ತದೆ ಮತ್ತು ಪದವಿನಂಗಡಿಯಲ್ಲಿ ಕೊರಗಜ್ಜನ ಕೋಲ ಇದೆಯೆಂದು ಚುನಾವಣೆ ಹೊತ್ತಲ್ಲಿ ಅದಕ್ಕೆ ಅಡ್ಡಿಪಡಿಸಿ ವಿರೋಧ ಕಟ್ಟಿಕೊಳ್ಳುವುದು ಬೇಡವೆಂದು ರೋಡ್ ಶೋವನ್ನೇ ರದ್ದುಪಡಿಸಿದ್ದರು. ಆದರೆ ಪರ್ಯಾಯ ಇಡಬೇಕಾಗಿದ್ದ ರಸ್ತೆಯನ್ನು ಪೂರ್ತಿಯಾಗಿ ಮುಚ್ಚಿಡುವುದಕ್ಕೆ ಎಸ್ ಪಿಜಿ ಅವಕಾಶ ಕೊಟ್ಟಿದ್ದು ಹೇಗೆ? ಇದು ಪೊಲೀಸ್ ವ್ಯವಸ್ಥೆಯ ಭದ್ರತಾ ವೈಫಲ್ಯ ಅಲ್ಲವೇ ಅನ್ನುವ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ಕೊಡಬೇಕು.

Mangalore Airport road closed for hours public face issues due to Amith Shah visit, administration blames Kola as reason.