ಕಾರಿಂಜೇಶ್ವರ ಬೆಟ್ಟದ ರಕ್ಷಣೆಗಾಗಿ ಶಿವರಾತ್ರಿಯಂದೇ ಮಾಲಾಧಾರಣೆ, ಪಾದಯಾತ್ರೆ ; ಗಣಿಗಾರಿಕೆ ವಿರುದ್ಧ ಜಾಗರಣ ವೇದಿಕೆ ಮತ್ತೊಂದು ಸುತ್ತಿನ ಹೋರಾಟ 

14-02-23 07:47 pm       Mangalore Correspondent   ಕರಾವಳಿ

ಗಣಿಗಾರಿಕೆಯಿಂದ ನಲುಗುತ್ತಿರುವ ಕಾರಿಂಜೇಶ್ವರ ದೇವಸ್ಥಾನದ ರಕ್ಷಣೆಗೆ ನಿಲ್ಲದ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಹಿಂದು ಜಾಗರಣ ವೇದಿಕೆ ಮುಂದಾಗಿದೆ.‌

ಮಂಗಳೂರು, ಫೆ.14 : ಗಣಿಗಾರಿಕೆಯಿಂದ ನಲುಗುತ್ತಿರುವ ಕಾರಿಂಜೇಶ್ವರ ದೇವಸ್ಥಾನದ ರಕ್ಷಣೆಗೆ ನಿಲ್ಲದ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಹಿಂದು ಜಾಗರಣ ವೇದಿಕೆ ಮುಂದಾಗಿದೆ.‌ ರಾಜ್ಯ ಸರ್ಕಾರದ ಗಮನಸೆಳೆಯುವ ಯತ್ನವಾಗಿ ಶಿವರಾತ್ರಿಯಂದೇ ಶಿವಭಕ್ತರು ಮಾಲಾಧಾರಿಗಳಾಗಿ ಪಾದಯಾತ್ರೆ ನಡೆಸಲಿದ್ದಾರೆ.

ಈ ಬಗ್ಗೆ ಜಾಗರಣ ವೇದಿಕೆ ಮುಖಂಡ ನರಸಿಂಹ ಮಾಣಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿಯ ಶಿವರಾತ್ರಿಗೆ ಸಾವಿರಾರು ಭಕ್ತರು ಶಿವ ಮಾಲಾಧಾರಣೆ ಮಾಡಲಿದ್ದಾರೆ. ಫೆ.16ರಂದು ಮಾಲೆ ಧರಿಸಿ 18ರ ಶಿವರಾತ್ರಿಯಂದು ವಗ್ಗದಿಂದ ಪಾದಯಾತ್ರೆ ನಡೆಸಲಿದ್ದಾರೆ. ಕಾರಿಂಜೇಶ್ವರ ದೇವರ ಮುಂಭಾಗದಲ್ಲಿ ಕೋಟಿ ಜಪಯಜ್ಞ ನಡೆಸಲಿದ್ದಾರೆ ಎಂದು ಹೇಳಿದರು.‌

ಬಂಟ್ವಾಳದ ಕಾರಿಂಜೇಶ್ವರ ಬೆಟ್ಟದಲ್ಲಿ ನೆಲೆಯಾಗಿರುವ ಶಿವನ ಸನ್ನಿಧಾನ ಅತ್ಯಂತ ಅಪರೂಪದ ದೇವಸ್ಥಾನ. ಏಕಶಿಲಾ ಬೆಟ್ಟದಲ್ಲಿ ಶಿವನ ಆಲಯವಿದೆ. ಇದರ ಸನಿಹದಲ್ಲಿ ಕಲ್ಲು ಗಣಿಗಾರಿಕೆ, ಸ್ಫೋಟ ನಡೆಸಿದರೆ ಈ ಬೆಟ್ಟಕ್ಕೆ ಧಕ್ಕೆಯಾಗಲಿದೆ. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿದರೂ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಎರಡು ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಬೇಕೆಂಬ ನಮ್ಮ ಆಗ್ರಹವನ್ನು ಮನ್ನಣೆ ನೀಡಿಲ್ಲ ಎಂದರು. 

ಎರಡು ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಈ ಬಗ್ಗೆ ಆದೇಶ ಬಂದಿಲ್ಲ. ಇದರ ನಡುವೆ, ಗಣಿಗಾರಿಕೆ ನಡೆಸುವವರು ಹೈಕೋರ್ಟಿಗೆ ಅಪೀಲು ಮಾಡಿ ತಮ್ಮ ಪರವಾಗಿ ಆದೇಶ ತರಿಸಿದ್ದಾರೆ. ಹೀಗಾಗಿ ಕಾರಿಂಜ ಬೆಟ್ಟ ಇರುವ ಜಾಗವನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಿಸಲು ಒತ್ತಾಯಿಸಿ ಮಾಲಾಧಾರಣೆ ಮಾಡುತ್ತಿದ್ದೇವೆ. ಆಮೂಲಕ ಬೆಟ್ಟದ ರಕ್ಷಣೆಗೆ ದೇವರ ಮೊರೆ ಹೋಗುತ್ತೇವೆ. ಸರಕಾರಕ್ಕೆ ಒಳ್ಳೆಯ ಬುದ್ಧಿ ಕೊಡಲೆಂದು ಪ್ರಾರ್ಥಿಸುತ್ತೇವೆ ಎಂದರು. 

ಹಿಂದು ಜಾಗರಣ ವೇದಿಕೆಯ ವತಿಯಿಂದ ಎರಡು ವರ್ಷಗಳ ಹಿಂದೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇದೇ ವಿಚಾರದಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಚುನಾವಣೆ ಹೊತ್ತಿಗೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾರ್ಯಕರ್ತರು ಮುಂದಾಗಿದ್ದಾರೆ.

Quarry units functioning near Karinjeshwara Temple, Hindu Jagarana Vedike to hold padayatre in Mangalore