ಸುರತ್ಕಲ್ ಬಾಳದಲ್ಲಿ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ ; ರಾತ್ರೋರಾತ್ರಿ ಕಟ್ಟಡ ಒಡೆದು ದರ್ಪ, ಯೋಧನ ಪತ್ನಿ ಕಣ್ಣೀರು

16-02-23 10:02 pm       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಬಾಳ ಎಂಬಲ್ಲಿ ಬಡ ಮಹಿಳೆಗೆ ಸೇರಿದ ಕಟ್ಟಡ ಒಂದನ್ನು ಉದ್ಯಮಿ ಅಶೋಕ್ ರೈ ರಾತ್ರೋರಾತ್ರಿ ಜೆಸಿಬಿ ತಂದು ಒಡೆದು ಹಾಕಿರುವ ಘಟನೆ ನಡೆದಿದೆ.

ಮಂಗಳೂರು, ಫೆ.16: ಸುರತ್ಕಲ್ ಬಳಿಯ ಬಾಳ ಎಂಬಲ್ಲಿ ಬಡ ಮಹಿಳೆಗೆ ಸೇರಿದ ಕಟ್ಟಡ ಒಂದನ್ನು ಉದ್ಯಮಿ ಅಶೋಕ್ ರೈ ರಾತ್ರೋರಾತ್ರಿ ಜೆಸಿಬಿ ತಂದು ಒಡೆದು ಹಾಕಿರುವ ಘಟನೆ ನಡೆದಿದೆ. ಅಶೋಕ್ ರೈ ತನಗೆ ಸೇರಿದ ಜಾಗಕ್ಕೆ ರಸ್ತೆ ಮಾಡಲೆಂದು ಕಟ್ಟಡವನ್ನು ಒಡೆದು ಹಾಕಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಾಳದಲ್ಲಿರುವ ಬಿಎಎಸ್ಎಫ್ ಕಾರ್ಖಾನೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ನೌಕಾ ಪಡೆಯ ಮಾಜಿ ಯೋಧ ಚಿತ್ತರಂಜನ್ ರಾವ್ ಮತ್ತು ಅವರ ಪತ್ನಿ ಪ್ರಭಾವತಿಗೆ ಸೇರಿದ ಸಣ್ಣ ಕಟ್ಟಡ ಇತ್ತು. 30 ವರ್ಷಗಳ ಹಿಂದೆ ಚಿತ್ತರಂಜನ್ ರಾವ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾಗ ಕಷ್ಟದಲ್ಲಿ ಕಟ್ಟಿದ್ದ ಕಟ್ಟಡದಲ್ಲಿ ಪತ್ನಿ ಪ್ರಭಾವತಿ ಅವರು ಜೆರಾಕ್ಸ್ ಅಂಗಡಿ ಇನ್ನಿತರ ಕಚೇರಿ ಇಟ್ಟು ವಹಿವಾಟು ನಡೆಸುತ್ತಿದ್ದರು. ಆದರೆ ಜನವರಿ 9ರಂದು ರಾತ್ರಿ ಜೆಸಿಬಿ ತಂದು ಕಟ್ಟಡವನ್ನು ನೇರವಾಗಿ ಒಡೆದು ಹಾಕಿದ್ದಾರೆ. ಮಹಿಳೆ ಅಡ್ಡ ಬಂದು ಪ್ರಶ್ನೆ ಮಾಡಿದಾಗ, ನೀವು ಪೊಲೀಸ್ ದೂರು ಕೊಡಿ ಅಥವಾ ಕೋರ್ಟಿನಲ್ಲಿ ಕೇಸು ಹಾಕಿ ಎಂದು ಅಶೋಕ್ ರೈ ಆವಾಜ್ ಹಾಕಿದ್ದಾರೆ.

ತಾವು ದುಡಿದು ಕಟ್ಟಿದ್ದ ಕಟ್ಟಡವನ್ನು ಏಕಾಏಕಿ ಒಡೆದು ಹಾಕಿದ ಅಶೋಕ್ ರೈ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಭಾವತಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಮಹಜರು ನಡೆಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಪ್ರಭಾವತಿ ಅವರು ಕಟ್ಟಡವನ್ನು ಒಡೆಯದಂತೆ ಅಡ್ಡಬಂದಾಗ ಅವರನ್ನು ಕೈಮಾಡಿ ದೂಡಿ ಹಾಕಿರುವ ಘಟನೆಯೂ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು ಮಾನಭಂಗ ಪ್ರಕರಣವೂ ದಾಖಲಾಗಿದೆ. ಕಟ್ಟಡವನ್ನು ಒಡೆದು ಹಾಕಿದ ಜಾಗದಲ್ಲಿ ಅಶೋಕ್ ರೈ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಅಲ್ಲಿಯೇ ಹಿಂಭಾಗದಲ್ಲಿ ಅಶೋಕ್ ರೈ ಎರೂಡವರೆ ಎಕ್ರೆ ಜಾಗ ಖರೀದಿಸಿದ್ದು ಅಲ್ಲಿ ಟಿವಿಎಸ್ ಕಂಪನಿಗೆ ಕಾರ್ಖಾನೆ ನಿರ್ಮಿಸಲು ಕೊಡುತ್ತಿದ್ದಾರೆ ಎನ್ನಲಾಗಿದೆ. ಕಾರ್ಖಾನೆಗೆ ಕಾಂಕ್ರೀಟ್ ರಸ್ತೆಯನ್ನು ಮಾಡಿಕೊಡಲು ಬಿಎಎಸ್ಎಫ್ ಕಂಪನಿಗೆ ಸೇರಿದ ಈ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭಿಸಿದೆ.

ಮಹಿಳೆ ಹೇಳುವ ಪ್ರಕಾರ, ಈ ಜಾಗ ಹಿಂದೆ ಚಿತ್ತರಂಜನ್ ರಾವ್ ಕುಟುಂಬಕ್ಕೆ ಸೇರಿದ್ದಾಗಿದ್ದು 30 ವರ್ಷಗಳ ಹಿಂದೆ ಬಿಎಎಸ್ಎಫ್ ಕಂಪನಿಗೆ ಬಿಟ್ಟು ಕೊಡಲಾಗಿತ್ತು. ಅದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ 800 ಚದರಡಿ ವ್ಯಾಪ್ತಿಯಲ್ಲಿ ಪ್ರಭಾವತಿ ರಾವ್ ಸಣ್ಣ ಕಟ್ಟಡ ಕಟ್ಟಿಕೊಂಡಿದ್ದರು. ಆ ಜಾಗಕ್ಕೆ ಮಹಿಳೆಯ ಬಳಿ ಪ್ರತ್ಯೇಕ ಹಕ್ಕುಪತ್ರ ಇಲ್ಲವಾದರೂ, ಡೋರ್ ನಂಬರ್, ವಿದ್ಯುತ್ ಕನೆಕ್ಷನ್ ಕೊಡಲಾಗಿತ್ತು. ಹೀಗಾಗಿ ಕಟ್ಟಡವನ್ನು ಒಡೆಯುವ ಸಂದರ್ಭದಲ್ಲಿ ಪಂಚಾಯತ್ ಮೂಲಕ ತೆರವುಗೊಳಿಸುವ ಕಾರ್ಯ ಮಾಡಬೇಕಾಗಿತ್ತು. ಆದರೆ ಅಶೋಕ್ ರೈ ತಾನೇ ಜೆಸಿಬಿ ತಂದು ಕಟ್ಟಡವನ್ನು ಒಡೆಯುವ ಕಾರ್ಯ ಮಾಡಿದ್ದು ಮಹಿಳೆ ವಿರುದ್ಧ ದರ್ಪ ತೋರಿದ್ದಾರೆ.

Mangalore Family in surathkal alleges of Gundagiri by congress leader Ashok Rai, house office demolished without any consent. FIR has been registered against Ashok rai at surathkal police station.