ಗರೋಡಿಯಲ್ಲಿ ಪೈಪ್ ಒಡೆದು ನದಿಯಂತೆ ಹರಿವ ನೀರು, ರಸ್ತೆಯಲ್ಲಿ ವಾಹನ ಸವಾರರ ಪರದಾಟ ; ಪಾಲಿಕೆ ಆಡಳಿತ ನಿರ್ಲಕ್ಷ್ಯ

16-02-23 10:51 pm       Mangalore Correspondent   ಕರಾವಳಿ

ಬಂಟ್ವಾಳದ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಸುವ ಪೈಪ್ ಲೈನ್ ನಗರದ ಕಂಕನಾಡಿಯ ಗರೋಡಿಯಲ್ಲಿ ಒಡೆದು ಹೋಗಿದ್ದು ರಸ್ತೆಯಲ್ಲಿ ನೀರು ನದಿಯಂತೆ ಹರಿದಿದೆ. 

ಮಂಗಳೂರು, ಫೆ.16: ಬಂಟ್ವಾಳದ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಸುವ ಪೈಪ್ ಲೈನ್ ನಗರದ ಕಂಕನಾಡಿಯ ಗರೋಡಿಯಲ್ಲಿ ಒಡೆದು ಹೋಗಿದ್ದು ರಸ್ತೆಯಲ್ಲಿ ನೀರು ನದಿಯಂತೆ ಹರಿದಿದೆ. 

ಬುಧವಾರ ರಾತ್ರಿಯಿಂದಲೇ ನೀರು ಒಸರುತ್ತಿದ್ದು ಗುರುವಾರ ಸಂಜೆಯ ವೇಳೆಗೆ ನದಿಯ ರೂಪದಲ್ಲಿ ನೀರು ಹರಿಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ‌ಖಾಸಗಿ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಜೆಸಿಬಿ ತಾಗಿ ಪೈಪ್ ಒಡೆದಿದೆ ಎನ್ನಲಾಗಿದೆ. ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದುದರಿಂದ ವಾಹನ ಸವಾರರು ಪರದಾಟ ಅನುಭವಿಸಿದರು. ಗರೋಡಿ ರಸ್ತೆಯಿಂದ ಪಂಪ್ವೆಲ್ ಬರುವ ರಸ್ತೆಯ ಉದ್ದಕ್ಕೂ ನೀರು ತೋಡಿನಂತೆ ಹರಿದಿದ್ದು ಬಳಿಕ ತುಂಬೆಯಿಂದಲೇ ನೀರಿನ ಹರಿವನ್ನು ನಿಲ್ಲಿಸಲಾಗಿದೆ. 

ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗರೋಡಿ ಅವರನ್ನು ಕೇಳಿದಾಗ, ಬಂಟ್ವಾಳದ ನೇತ್ರಾವತಿಯಿಂದ ಮಂಗಳೂರು ಸಂಪರ್ಕಿಸುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದಿದೆ. ಗುರುವಾರ ಸಂಜೆ ವೇಳೆಗೆ ಜೆಸಿಬಿ ತಾಗಿ ಒಡೆದು ಹೋಗಿದ್ದು ನೀರು ರಸ್ತೆಯಲ್ಲೇ ಹರಿದು ಹೋಯಿತು. ಬಳಿಕ ನೀರಿನ ಪೂರೈಕೆಯನ್ನು ಸ್ಥಗಿತ ಮಾಡಲಾಯ್ತು ಎಂದು ತಿಳಿಸಿದ್ದಾರೆ. 

ರಸ್ತೆಯಲ್ಲಿ ಪೂರ್ತಿ ನೀರು ಹರಿಯುತ್ತಿದ್ದರೂ, ನಿಲ್ಲಿಸಲಾಗದ ಪಾಲಿಕೆಯ ಆಡಳಿತದ ಬಗ್ಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದರು. ಮಳೆಗಾಲ ಅಲ್ಲದಿದ್ದರೂ, ಜೆಸಿಬಿ ಚಾಲಕನ ಎಡವಟ್ಟಿನಿಂದ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆ ಪೂರ್ತಿ ಕೆಸರುಮಯ ಆಗುವ ಸ್ಥಿತಿ ಎದುರಾಗಿದೆ.

Mangalore Garodi water pipe breaks out, water goes wasted on road for hours near Garodi temple.