ಮಹಾಶಿವರಾತ್ರಿ ಜಾಗರಣೆ ; ಸೋಮೇಶ್ವರ ರುದ್ರಪಾದೆಯಲ್ಲಿ ವೈದಿಕರಿಲ್ಲದೆ ಅಗ್ನಿಹೋತ್ರ, ಭಸ್ಮ ತಯಾರಿ ಯಜ್ಞ !

16-02-23 11:23 pm       Mangaluru Correspondent   ಕರಾವಳಿ

ಇದೇ ಫೆ.18ರ ಮಹಾಶಿವರಾತ್ರಿಯಂದು ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ವೈದಿಕರಿಲ್ಲದೆ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞ ನಡೆಯಲಿದೆ.

ಉಳ್ಳಾಲ, ಫೆ.16: ಇದೇ ಫೆ.18ರ ಮಹಾಶಿವರಾತ್ರಿಯಂದು ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ರುದ್ರಪಾದೆಯಲ್ಲಿ  ಲೋಕಕಲ್ಯಾಣಕ್ಕಾಗಿ ವೈದಿಕರಿಲ್ಲದೆ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞ ನಡೆಯಲಿದೆ.

ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಇದರ ಸೋಮೇಶ್ವರ ಶಕ್ತಿಕೇಂದ್ರದ ನೇತೃತ್ವದಲ್ಲಿ ಅಗ್ನಿಹೋತ್ರ ನಡೆಯಲಿದೆ ಎಂದು ಪರಿಷತ್ ನ ಪ್ರಮುಖರಾದ ಪದ್ಮನಾಭ ವರ್ಕಾಡಿ ತಿಳಿಸಿದ್ದಾರೆ. ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ವೈದಿಕರಿಲ್ಲದೆ ನಡೆಯುವ ಅಗ್ನಿಹೋತ್ರ ಮತ್ತು ಗೋವಿನ ಬೆರಣಿಯಿಂದ ಭಸ್ಮ ತಯಾರಿ ಯಜ್ಞದಲ್ಲಿ ಎಲ್ಲರೂ ಭಾಗಿಯಾಗಿ, ಅವರವರೇ ಹೋಮವನ್ನು ನೆರವೇರಿಸಬಹುದು. ತುಳಸಿ, ಗಂಧ, ಬಿಲ್ವಪತ್ರೆ ವಸ್ತುಗಳನ್ನು ಯಜ್ಞದಲ್ಲಿ ಉಪಯೋಗಿಸಲಾಗುವುದು. ದೇಶೀ ತಳಿಯ ಗೋವಿನ ಬೆರಣಿಯನ್ನು ಭಕ್ತರು ತಂದು ಯಜ್ಞಕ್ಕೆ ಸ್ವತಃ ಅರ್ಪಿಸಬಹುದು.  ಯಾವುದೇ ಕಾಣಿಕೆ, ಹರಕೆಯಿಲ್ಲದೆ ನಡೆಯುವಂತಹ ಕಾರ್ಯಕ್ರಮ ಇದಾಗಿದ್ದು, ಜನರ ಉಪಸ್ಥಿತಿಯೇ ಪ್ರಧಾನವಾಗಿದೆ. ಅನಾರೋಗ್ಯ ಕಾಡದಂತೆ ಯಜ್ಞದಲ್ಲಿ ದೊರಕುವ ಭಸ್ಮ ಉಪಯುಕ್ತವಾಗುವುದು. ಮಧ್ಯಪ್ರದೇಶದ ಭೋಪಾಲದಲ್ಲಿ  ಅನಿಲ ದುರಂತದ ನಂತರ ವಿಷಾನಿಲ ತಡೆಗಟ್ಟಲು  ಅಗ್ನಿಹೋತ್ರ ಯಾಗವನ್ನೇ ನಡೆಸಲಾಗಿತ್ತು. ಲೋಕ ಕಲ್ಯಾಣಾರ್ಥವಾಗಿ  ಯಾಗವನ್ನು ಆಯೋಜಿಸಲಾಗಿದೆ ಎಂದರು.

ಶರತ್‍ಚಂದ್ರ ಒಂಭತ್ತುಕೆರೆ ಮಾತನಾಡಿ, ಸೂರ್ಯೋದಯದ ಸಮಯದಲ್ಲಿ ಯಜ್ಞದಲ್ಲಿ ದೊರೆತ ಭಸ್ಮವನ್ನು ಪವಿತ್ರವಾದ ಒಂಭತ್ತುಕೆರೆಯಲ್ಲಿ ಸಂಸ್ಕರಿಸಿ ಬಳಿಕ ಯಜ್ಞದಲ್ಲಿ ಭಾಗಿಯಾದವರಿಗೆ ಹಂಚಲಾಗುವುದು. ಭಸ್ಮ ಹಂಚುವ ದಿನವನ್ನು ವಾಟ್ಸಪ್ ಗುಂಪಿನ ಮೂಲಕ ತಿಳಿಸಲಾಗುವುದು. ಶಿವರಾತ್ರಿ ದಿನದ ರಾತ್ರಿಯೇ ಭಸ್ಮ ತಯಾರಿ ನಡೆಸುವುದರಿಂದ ಪಾವಿತ್ರ್ಯತೆ ಇದೆ ಎಂದರು.                     

ಸುದ್ದಿಗೋಷ್ಠಿಯಲ್ಲಿ ಕರಾವಳಿ ಕಲ್ಯಾಣ ಪರಿಷತ್‍ನ ದಿನೇಶ್ ಕಾಜವ, ದಿನಮಣಿ ರಾವ್ ಮತ್ತು ವಸಂತ್ ಉಳ್ಳಾಲ ಉಪಸ್ಥಿತರಿದ್ದರು.

Mahashivratri night vigil, Agnihotra to be performed at someshwara temple.