ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ ; ಹೆತ್ತವರು ಬಿಟ್ಟು ಹೋದ ಶಂಕೆ 

17-02-23 03:34 pm       Mangalore Correspondent   ಕರಾವಳಿ

ನಗರದ ಸ್ಟೇಟ್‌ಬ್ಯಾಂಕ್‌ ಸಮೀಪದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿಯಂತೆ ಪೊಲೀಸರು ವೆನ್ಲಾಕ್‌ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಸೇರಿಸಿದ್ದಾರೆ. 

ಮಂಗಳೂರು, ಫೆ.17: ನಗರದ ಸ್ಟೇಟ್‌ಬ್ಯಾಂಕ್‌ ಸಮೀಪದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿಯಂತೆ ಪೊಲೀಸರು ವೆನ್ಲಾಕ್‌ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಸೇರಿಸಿದ್ದಾರೆ. 

ಹೆತ್ತವರು ಮಗುವನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದ್ದು ಮಗುವಿನ ಆರೋಗ್ಯದಲ್ಲಿ ಏರುಪೇರು ಇದೆ, ತಲೆಯಲ್ಲಿ ಸಣ್ಣ ಪುಟ್ಟ ಗಾಯಗಳಿವೆ. ಮಗು ಪತ್ತೆಯಾದ ವೇಳೆ ಮೂಗಿಗೆ ಟ್ಯೂಬ್‌ ಹಾಕಿದ ಸ್ಥಿತಿಯಲ್ಲಿತ್ತು. ಗಂಡು ಮಗುವಾಗಿದ್ದು, ಜನಿಸಿ ಒಂದು ವಾರ ಆಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಬಳಿಯ ಬಸ್ ನಿಲ್ದಾಣದ ಲೈಟ್‌ ಕಂಬದ ಬುಡದಲ್ಲಿ ಮಗು ಇರಿಸಿದ್ದನ್ನು ನೋಡಿದ ಬಸ್ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಲೇಡಿಗೋಷನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ತಪಾಸಣೆ ನಡೆಸಿ ವೆನ್ಲಾಕ್‌ ಗೆ ದಾಖಲಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿರವಾಗಿರದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಒಬ್ಬ ಗಂಡಸು ಹಾಗೂ ಹೆಂಗಸು ಮಗು ಹಿಡಿದುಕೊಂಡಿದ್ದನ್ನು ಸ್ಥಳೀಯರು ನೋಡಿದ್ದರು. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎನ್ನುವ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

New born baby found at service bus stand in Mangalore