ಕಾಡಾನೆ ದಾಳಿಗೆ ಇಬ್ಬರು ಸಾವು ; ಅರಣ್ಯ ಸಿಬಂದಿ ವಿರುದ್ಧ ಸ್ಥಳೀಯರ ಆಕ್ರೋಶ, ಶವ ಮುಂದಿಟ್ಟು ಪ್ರತಿಭಟನೆ, 15 ಲಕ್ಷ ಪರಿಹಾರ ಘೋಷಿಸಿದ ಜಿಲ್ಲಾಧಿಕಾರಿ, ಆನೆ ಹಿಡಿಯದೇ ಕದಲಲ್ಲ ಎಂದ ಡಿಎಫ್ಓ

20-02-23 04:18 pm       Mangalore Correspondent   ಕರಾವಳಿ

ಒಂಟಿ ಸಲಗದ ದಾಳಿಗೆ ಇಬ್ಬರು ಬಲಿಯಾದ ಪ್ರಕರಣ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೆಂಜಿಲಾಡಿಯ ಗ್ರಾಮಸ್ಥರು ಮೃತ ಇಬ್ಬರ ಶವಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರು, ಫೆ.20: ಒಂಟಿ ಸಲಗದ ದಾಳಿಗೆ ಇಬ್ಬರು ಬಲಿಯಾದ ಪ್ರಕರಣ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೆಂಜಿಲಾಡಿಯ ಗ್ರಾಮಸ್ಥರು ಮೃತ ಇಬ್ಬರ ಶವಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಆಕ್ರೋಶ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ರವಿಕುಮಾರ್, ಉದ್ರಿಕ್ತರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದೆ, ಮೃತಪಟ್ಟ ಎರಡು ಕುಟುಂಬಕ್ಕೂ ಜಿಲ್ಲಾಡಳಿತದಿಂದ ತಲಾ 15 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಕೂಡಲೇ ಇಬ್ಬರ ಸಾವಿಗೆ ಕಾರಣವಾದ ಆನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ಸ್ಥಳಕ್ಕೆ ಬಂದಿದ್ದ ಕಡಬ ಪೊಲೀಸರು ಮತ್ತು ಅರಣ್ಯಾಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ನಿರ್ಲಕ್ಷ್ಯದಿಂದಲೇ ಇಬ್ಬರ ಪ್ರಾಣ ಹೋಗುವಂತಾಗಿದೆ. ಜನರ ಪರವಾಗಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿದ್ದ ರಮೇಶ್ ರೈ ಅವರನ್ನೇ ಆನೆ ಕೆಡವಿ ಹಾಕಿದೆ. ಇದಕ್ಕೆ ಯಾರು ಹೊಣೆ. ಆನೆಗಳು ಉಪಟಳ ಕೊಡುತ್ತಿರುವ ಬಗ್ಗೆ ಬಹಳಷ್ಟು ಬಾರಿ ಅರಣ್ಯ ಇಲಾಖೆಗೆ ದೂರು ಕೊಡಲಾಗಿತ್ತು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೇ ಈ ಸಾವಿಗೆ ಕಾರಣ ಎಂದು ಆಕ್ರೋಶ ತೋರಿದ್ದಾರೆ. ಇದೇ ವೇಳೆ, ಸ್ಥಳದಲ್ಲಿ ವಿಡಿಯೋ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಕ್ಕೆ ಸ್ಥಳೀಯರು ತಿರುಗಿ ಬಿದ್ದ ಪ್ರಸಂಗವೂ ನಡೆಯಿತು.

ಹಾಲು ಸೊಸೈಟಿಗೆ ತೆರಳುತ್ತಿದ್ದ ಯುವತಿ

ಸೋಮವಾರ ಬೆಳಗ್ಗೆ ಎಂದಿನಂತೆ ರೆಂಜಿಲಾಡಿ ಗ್ರಾಮದ ಕುಟ್ರುಪಾಡಿಯ ತನ್ನ ಮನೆಯಿಂದ ರಂಜಿತಾ(21) ಪೇರಡ್ಕ ಹಾಲು ಸೊಸೈಟಿಗೆ ಕೆಲಸಕ್ಕೆಂದು ನಡೆದುಕೊಂಡು ತೆರಳುತ್ತಿದ್ದಾಗ ದಾರಿಯಲ್ಲಿದ್ದ ಆನೆ ದಾಳಿ ನಡೆಸಿತ್ತು. ಯುವತಿಯನ್ನು ಸೊಂಡಿಲಿನಲ್ಲಿ ಎತ್ತಿ ಹಾಕಿದ್ದು, ಆನೆ ತಿವಿತಕ್ಕೊಳಗಾದ ಯುವತಿ ಚೀರಾಡಿದ್ದಾಳೆ. ಇದನ್ನು ಕೇಳಿದ ಅಲ್ಲಿಯೇ ಪಕ್ಕದಲ್ಲಿದ್ದ ರಮೇಶ್ ರೈ ಎಂಬವರು ರಕ್ಷಣೆಗೆಂದು ಧಾವಿಸಿ ಬಂದಿದ್ದು, ಆನೆ ಅವರನ್ನೂ ಎತ್ತಿ ಹಾಕಿ ಕಾಲಿನಲ್ಲಿ ತುಳಿದು ಹಾಕಿದೆ. ರಮೇಶ್ ರೈ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಸ್ಥಿತಿಯಲ್ಲಿದ್ದ ಯುವತಿ ನೆಲ್ಯಾಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಎರಡು ಆನೆಗಳು ಇದ್ದುದನ್ನು ಸ್ಥಳೀಯರು ಗಮನಿಸಿದ್ದು, ಜನ ಸೇರುತ್ತಲೇ ಆನೆಗಳು ಕಾಡಿನಲ್ಲಿ ಮರೆಯಾಗಿದ್ದವು.

ರಂಜಿತಾ ಅವರ ವಯಸ್ಸಾದ ತಂದೆ ಮಗಳ ಶವದ ಮುಂದೆ ಕುಳಿತು ಬಿಕ್ಕಳಿಸುತ್ತಿದ್ದರು. ಸೇರಿದ್ದ ಜನರು ತಮಗೆ ತೋಚಿದಂತೆ ವ್ಯವಸ್ಥೆಯ ಲೋಪದ ಬಗ್ಗೆ, ಸರಕಾರದ ನಿರ್ಲಕ್ಷ್ಯದ ಬಗ್ಗೆ ಮಾತನಾಡುತ್ತಿದ್ದರು. ಪೊಲೀಸರು, ಅಲ್ಲಿಗೆ ಬಂದಿದ್ದ ಅಧಿಕಾರಿಗಳು, ಪಂಚಾಯತ್ ಮಟ್ಟದ ಅಧಿಕಾರಿಗಳ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದರು. ಜಿಲ್ಲಾಧಿಕಾರಿ ಕೊನೆಗೆ, ಮೃತ ರಂಜಿತಾಳ ತಂಗಿಗೆ ಕೆಲಸ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

ಸ್ಥಳಕ್ಕೆ ಬಂದಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್, ಜನರ ಆಕ್ರೋಶದ ನಡುವೆಯೇ ದುಬಾರೆಯಿಂದ ಪಳಗಿದ ಆನೆಗಳನ್ನು ಕರೆಸಿ, ಕಾಡಾನೆಗಳನ್ನು ಸೆರೆ ಹಿಡಿಯುವುದಾಗಿ ತಿಳಿಸಿದರು. ನಿಮ್ಮ ಬರೀ ಮಾತಿಗೆ ನಾವು ಬಗ್ಗುವುದಿಲ್ಲ. ಲಿಖಿತವಾಗಿ ಬರೆದು ಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಆಗ ದಿನೇಶ್ ಕುಮಾರ್, ಬರೆದು ಕೊಡುವುದು ಯಾಕೆ, ನಾನು ಇಲ್ಲಿಯೇ ಮೊಕ್ಕಾಂ ಹೂಡುತ್ತೇನೆ. ಈಗಿನಿಂದಲೇ ಆನೆ ಹಿಡಿವ ಕಾರ್ಯಾಚರಣೆ ನಡೆಸಲಾಗುವುದು. ಆನೆ ಸೆರೆ ಹಿಡಿಯದೇ ಇಲ್ಲಿಂದ ತೆರಳುವುದಿಲ್ಲ ಎಂದರು. ಅಲ್ಲದೆ, ಕಾಡಾನೆ ದಾಳಿ ಹೆಚ್ಚಿರುವ ಗ್ರಾಮಗಳ ಸುತ್ತ ಆನೆ ಕಂದಕಗಳನ್ನು ನಿರ್ಮಿಸುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದರು.

Two dead after Wild elephant attack in Kadaba, villagers protest over forest officials, 15 lakhs compensation for family. According to information, the deceased were identified as Ranjitha and Ramesh Rai, 55. The woman, working with the milk cooperative society in Peradka, was on her way to work when a wild elephant suddenly attacked her near Karmena. Hearing her screams, Rai, a local resident, rushed to her help only to be attacked by the elephant in his stomach.