ಕರಾವಳಿಯಲ್ಲಿ ಬಿಸಿಲ ಝಳ ; ಕಣ್ಣು ಕೋರೈಸುವ ಬಿಸಿಲಿಗೆ ಜನ ಹೈರಾಣ

26-02-23 04:47 pm       Mangalore Correspondent   ಕರಾವಳಿ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಉಷ್ಣತೆ ಮಟ್ಟ ಏರುತ್ತಿದೆ.

ಮಂಗಳೂರು, ಫೆ.26: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಉಷ್ಣತೆ ಮಟ್ಟ ಏರುತ್ತಿದೆ. ಫೆಬ್ರವರಿ ತಿಂಗಳಲ್ಲೇ ಗರಿಷ್ಠ ತಾಪಮಾನದ ಅನುಭವ ಆಗುತ್ತಿದ್ದು, ಜನರು ಮಧ್ಯಾಹ್ನ ಹೊತ್ತಿಗೆ ಹೊರಗೆ ಬರುವುದಕ್ಕೇ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹಗಲಿನ ಉಷ್ಣತೆ ಮಂಗಳೂರಿನಲ್ಲಿ 35 ಡಿಗ್ರಿಯಷ್ಟಿದೆಯಂತೆ.

ಈ ಬಾರಿ ಫೆಬ್ರವರಿ 14ರಂದು ಮಂಗಳೂರಿನಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಇದು ಈವರೆಗಿನ ಫೆಬ್ರವರಿ ತಿಂಗಳ ಗರಿಷ್ಠ ತಾಪಮಾನವಾಗಿದೆ. ಜನವರಿ ತಿಂಗಳ ಚಳಿಗಾಲ ಕಳೆದು ಒಮ್ಮಿಂದೊಮ್ಮೆಲೇ ಬೇಸಗೆಯತ್ತ ವಾತಾವರಣ ಮುಖ ಮಾಡಿದ್ದು, ಜನರಿಗೆ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಅತಿ ಬಿಸಿಯಿಂದಾಗಿ ಶರೀರ ಅದಕ್ಕೆ ಒಗ್ಗಿಕೊಳ್ಳುವಷ್ಟು ದಿನ ವೈಪರೀತ್ಯದ ಅನುಭವ ಆಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಳಗ್ಗೆ ಮಂಜಿನ ರೀತಿಯ ಅನುಭವ, ಮಧ್ಯಾಹ್ನ ಆಗುತ್ತಲೇ ತೀವ್ರ ಬಿಸಿಯಾದ ಬಿಸಿಲಿನ ಝಳ. ಇದರಿಂದಾಗಿ ವಾಹನ ಸವಾರರು ಕೂಡ ಕಷ್ಟ ಅನುಭವಿಸುತ್ತಿದ್ದಾರೆ. ಉಷ್ಣ ಏರುತ್ತಿರುವುದರಿಂದ ಕಣ್ಣಿನ ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಸಮುದ್ರ ತೀರದ ಕರಾವಳಿಯ ಉದ್ದಕ್ಕೂ ಈ ರೀತಿಯ ಸ್ಥಿತಿ ಒಂದೆರಡು ವಾರ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ ಮಧ್ಯಂತರದಲ್ಲಿ ಬೇಸಗೆಯ ನಿಜ ಅನುಭವ ಆಗಲಿದ್ದು, ಆನಂತರ ಮಳೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ.

Temperature is soaring high in twin districts of Dakshina Kannada and Udupi day by day. The average temperature is about to touch 35 deg C. Pricking heat is continuing. According to weather experts, the conditions will prevail for some days. In Mangaluru, the maximum temperature of 34.9 deg C was recorded on Friday. So far the highest for the month of February was 37.5 deg C that was recorded on February 14.