ಹೊಸ ಕಮಿಷನರ್ ಬಂದ ಬೆನ್ನಲ್ಲೇ ನಿಂತು ಹೋಗಿದ್ದ ಪೊಲೀಸ್ ಬೀಟ್ ವ್ಯವಸ್ಥೆ ಶುರು ; ಹೊರಗೆ ಅವಮಾನ, ಒಳಗಡೆ ಸಮ್ಮಾನ, ಚರ್ಚೆಗೀಡಾಯ್ತು ಮಾನ !

26-02-23 11:09 pm       Mangalore Correspondent   ಕರಾವಳಿ

ನೂತನ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ದಿನವೇ ಎಲ್ಲ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳನ್ನು ಕರೆದು ಸಭೆ ನಡೆಸಿದ್ದಾರೆ.

ಮಂಗಳೂರು, ಫೆ.26: ನೂತನ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ದಿನವೇ ಎಲ್ಲ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳನ್ನು ಕರೆದು ಸಭೆ ನಡೆಸಿದ್ದಾರೆ. ಅಲ್ಲದೆ, ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಪೊಲೀಸಿಂಗ್ ಆಗಬೇಕು ಮತ್ತು ಬೀಟ್ ವ್ಯವಸ್ಥೆ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಮರುದಿನವೇ ಉಳ್ಳಾಲ, ಸುರತ್ಕಲ್, ಕಾವೂರು ಠಾಣೆಗೆ ಭೇಟಿ ಕೊಟ್ಟು ಅಲ್ಲಿನ ಕುಂದು ಕೊರತೆ ಪರಿಶೀಲಿಸಿದ್ದಾರೆ.

ಇದರ ಬೆನ್ನಲ್ಲೇ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಬೀಟ್ ವ್ಯವಸ್ಥೆ ಶುರು ಮಾಡಿದ್ದಾರೆ. ಠಾಣೆ ವ್ಯಾಪ್ತಿಯ ಮಸೀದಿ, ದೇವಸ್ಥಾನ, ಕಾಲೇಜು ಹೀಗೆ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟ ಎಲ್ಲ ಕಡೆಗೂ ಪೊಲೀಸರು ಬೆಳಗ್ಗೆ ಮತ್ತು ಸಂಜೆ ಭೇಟಿ ಕೊಡಬೇಕು. ಅಲ್ಲಿನ ಸ್ಥಿತಿಯನ್ನು ಅವಲೋಕನ ನಡೆಸಬೇಕು. ಠಾಣಾ ವ್ಯಾಪ್ತಿಯ ಎಲ್ಲ ಪ್ರದೇಶಕ್ಕೂ ಪೊಲೀಸರು ಭೇಟಿ ಕೊಟ್ಟಾಗ, ಪೊಲೀಸರಿದ್ದಾರೆ ಎನ್ನುವ ಭಯವೂ ಇರುತ್ತದೆ. ಜನರು ಏನು ಮಾಡುತ್ತಿದ್ದಾರೆ, ಏನೆಲ್ಲ ವ್ಯವಹಾರ, ಚಟುವಟಿಕೆ ಆಗುತ್ತದೆ ಎನ್ನುವುದು ಪೊಲೀಸರಿಗೂ ತಿಳಿಯುತ್ತದೆ.

ಹಾಗೆ ನೋಡಿದರೆ, ಪೊಲೀಸರ ಕೆಲಸವೇ ಪೊಲೀಸಿಂಗ್ ಮಾಡುವುದು. ಸಮಾಜದಲ್ಲಿ ಪ್ರತಿ ಚಟುವಟಿಕೆಯ ಬಗೆಗೂ ಪೊಲೀಸರು ನಿಗಾ ವಹಿಸಬೇಕು. ಆಡಳಿತ ನಡೆಸುವ ಸರಕಾರಕ್ಕೆ ಜನರ ಸ್ಪಂದನೆ ಏನು, ಪ್ರತಿಕ್ರಿಯೆ ಏನು ಅನ್ನೋದ್ರ ದೈನಂದಿನ ರಿಪೋರ್ಟ್ ಹೋಗುವುದೇ ಪೊಲೀಸರ ಮೂಲಕ. ಪೊಲೀಸ್ ಇಲಾಖೆಯಿಂದ ಸರಿಯಾದ ಕರ್ತವ್ಯ ನಿರ್ವಹಣೆ ಆದಲ್ಲಿ ಯಾವುದೇ ಕಡೆಯೂ ಅತಿ ಸೂಕ್ಷ್ಮ, ಕೋಮು ಸೂಕ್ಷ್ಮ ಅನ್ನುವಂತಹ ಸ್ಥಿತಿ ಉದ್ಭವ ಆಗಲಾರದು. ಬೆಂಗಳೂರಿನಲ್ಲಿ ರಾಜ್ಯದ ಇತರ ಕಡೆಗಳಿಗಿಂತ ತುಸು ಹೆಚ್ಚು ಪೊಲೀಸಿಂಗ್ ಮತ್ತು ಬೀಟ್ ವ್ಯವಸ್ಥೆ ಇದೆ. ಯಾಕಂದ್ರೆ, ಅಲ್ಲಿ ಇಡೀ ದೇಶದ ಬೇರೆ ಬೇರೆ ಕಡೆಯ ಜನರು ಇದ್ದಾರೆ. ನಾನಾ ಪ್ರದೇಶದ, ನಾನಾ ರೀತಿಯ ಮನಸ್ಥಿತಿಗಳು ಇರುವುದರಿಂದ ಅಪರಾಧ ಚಟುವಟಿಕೆಯೂ ಹೆಚ್ಚಿರುತ್ತದೆ. ರಾಜಧಾನಿಯೂ ಆಗಿರುವುದರಿಂದ ಅಲ್ಲಿ ಅಷ್ಟರಮಟ್ಟಿಗೆ ಪೊಲೀಸಿಂಗ್ ವ್ಯವಸ್ಥೆ ಬೇಕಾಗುತ್ತದೆ. ಹಾಗಿದ್ದರೂ, ಅಲ್ಲಿ ಪೊಲೀಸರಿಗೆ ನಿಯಂತ್ರಣ ಮಾಡಲಾಗದಷ್ಟು ಅಪರಾಧ ಚಟುವಟಿಕೆ ಬೆಳೆದು ನಿಂತಿದೆ.

ಮಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಪೊಲೀಸಿಂಗ್ ಮತ್ತು ಬೀಟ್ ವ್ಯವಸ್ಥೆ ಸಂಪೂರ್ಣ ನಿಂತೇ ಹೋಗಿತ್ತೋ ಅನ್ನುವಂತಹ ಸ್ಥಿತಿ ಇತ್ತು. ಏನಾದರೂ ಅಹಿತಕರ ಘಟನೆಗಳಾದಲ್ಲಿ ಮಾತ್ರ ಪೊಲೀಸರು ಅಲರ್ಟ್ ಆಗುತ್ತಿದ್ದರು. ಪೊಲೀಸರು ತಮ್ಮ ಕರ್ತವ್ಯದ ಬದಲು ಉಳಿದೆಲ್ಲವನ್ನೂ ಮಾಡುತ್ತಿದ್ದರು ಅನ್ನುವ ಗಂಭೀರ ಆರೋಪವೂ ಕೇಳಿಬಂದಿತ್ತು. ಪೊಲೀಸ್ ಠಾಣೆಗಳು ವಹಿವಾಟು ಕೇಂದ್ರಗಳಾಗಿ ಬದಲಾಗಿತ್ತು ಅನ್ನುವ ಮಾತುಗಳು ಕೇಳಿಬಂದಿದ್ದವು. ಸಾಮಾಜಿಕ ಕಾರ್ಯಕರ್ತರು ಮತ್ತು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ, ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಠಾಣೆಗಳ ಕರ್ಮಕಾಂಡವನ್ನು ಬಹಿರಂಗವಾಗಿಯೇ ಹೇಳಿದ್ದರು. ಅದರ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಬಂದು ಸಾರ್ವಜನಿಕರ ಅಹವಾಲು ಕೇಳುವ ನಾಟಕ ಮಾಡಿದ್ದರು. ಆದರೆ ಇಲ್ಲಿನ ಪೊಲೀಸರಿಂದಾಗಿ ಎಡಿಜಿಪಿಯೇ ಮುಜುಗರ ಅನುಭವಿಸಬೇಕಾದ ಸ್ಥಿತಿ ಬಂದಿತ್ತು. ಬಹಳಷ್ಟು ಮಂದಿ ನೇರವಾಗಿಯೇ ಕಮಿಷನರ್ ಮತ್ತು ಕೆಲವು ಪೊಲೀಸ್ ಅಧಿಕಾರಿಗಳ ಬಗ್ಗೆ ಆರೋಪ ಮಾಡಿದ್ದರು. ಹಿಂದೆ ಡಿಸಿಪಿ ಹರಿರಾಮ್ ಶಂಕರ್ ಇರುವ ವರೆಗೂ ಒಂದು ಹಂತದ ವರೆಗೆ ಕಮಿಷನರ್ ಕಚೇರಿ ಇತ್ತು. ಆನಂತರ ಗಬ್ಬೆದ್ದು ಹೋಗಿದೆ ಅನ್ನುವುದನ್ನು ಹೇಳಿದ್ದರು. ಸಾರ್ವಜನಿಕರು ದೂರು ಹೇಳುವಷ್ಟೂ ಕಾಳಜಿ ಇಲ್ಲದ ಸ್ಥಿತಿ ಬಂದಿದೆ ಎಂದಿದ್ದರು. ಇಷ್ಟೆಲ್ಲ ಬೆಳವಣಿಗೆ ಆಗಿದ್ದರೂ, ಇಲ್ಲಿನ ರಾಜಕಾರಣಿಗಳು, ಶಾಸಕ, ಸಂಸದರು ಏನೂ ಆಗಿಯೇ ಇಲ್ಲ ಎಂಬಂತೆ ಇದ್ದರು. ಎಡಿಜಿಪಿ ಬಂದು ಹೋದ ಎರಡು ವಾರದ ಬಳಿಕ ಕಡೆಗೂ ಶಶಿಕುಮಾರ್ ಎತ್ತಂಗಡಿ ಆಗಿದ್ದರು.

ಹೊರಗೆ ಅವಮಾನ, ಒಳಗೆ ಸಮ್ಮಾನ !

ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಅವರನ್ನು ದಿಢೀರ್ ಆಗಿಯೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇಷ್ಟೆಲ್ಲ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಯಾವುದೇ ತನಿಖೆಯೇ ನಡೆಸದೆ ವರ್ಗಾವಣೆ ಮಾಡುತ್ತಿರುವುದು ಎಲ್ಲವನ್ನೂ ಮುಚ್ಚಿ ಹಾಕಿದಂತೆ ಅಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದರು. ಗಂಬೀರ ಭ್ರಷ್ಟಾಚಾರ ಆರೋಪ ಇದ್ದರೂ, ಸರಿಯಾದ ಹುದ್ದೆ ತೋರಿಸದೆ ಎತ್ತಂಗಡಿ ಮಾಡಿದ್ದರೂ, ಮಂಗಳೂರಿನಲ್ಲಿ ಪೊಲೀಸರು ಮತ್ತು ಒಂದಷ್ಟು ಸಾರ್ವಜನಿಕರು ನಿರ್ಗಮಿತ ಕಮಿಷನರ್ ಶಶಿಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದಾರೆ. ಹೊರಗೆ ಅವಮಾನ, ಆಕ್ರೋಶ ಎದುರಾಗಿದ್ದರೂ, ಪೊಲೀಸ್ ಇಲಾಖೆಯ ಒಳಗೆ ಸಮ್ಮಾನ ನೆರವೇರಿಸಿರುವ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಒಳಗಾಗಿದೆ.

Mangalore Stopped Beat System and meeting resumes soon after Kuldeep Kumar Jain takes charge as commissioner. Fountain of complaints were thronging as the beat meeting was stopped as Shashi Kumar was the commissioner. As soon as Kuldeep Kumar jain has taken charge immidetely beat meeting to be followed on a regular basis has been ordered. A visit to Surathkal and Ullal police station also was made by Kuldeep Kumar.