ಇದು ಪ್ರಥಮ ಸರಕಾರಿ ಕಂಬಳ ಕರೆ ; ಮೋರ್ಲದಲ್ಲಿ ಮಾರ್ಚ್ 25ಕ್ಕೆ ಕಂಬಳ, ನಿಂತು ಹೋಗಿದ್ದ ಲವ ಕುಶ ಕಂಬಳಕ್ಕೆ ಮತ್ತೆ ಚಾಲನೆ 

01-03-23 05:43 pm       Mangalore Correspondent   ಕರಾವಳಿ

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳ ಎಂಬಲ್ಲಿ ಶಾಸಕ ಯು.ಟಿ.ಖಾದರ್ ಅನುದಾನದಿಂದ ನಿರ್ಮಾಣಗೊಂಡ ಕಂಬಳ ಕರೆ ಉದ್ಘಾಟನೆಗೊಂಡಿದ್ದು, ಇಲ್ಲಿ ಇದೇ ಮಾರ್ಚ್ 25 ಮತ್ತು 26ರಂದು ಲವ ಕುಶ ಜೋಡುಕರೆ ಕಂಬಳ ನಡೆಯಲಿದೆ.

ಉಳ್ಳಾಲ, ಮಾ.1: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳ ಎಂಬಲ್ಲಿ ಶಾಸಕ ಯು.ಟಿ.ಖಾದರ್ ಅನುದಾನದಿಂದ ನಿರ್ಮಾಣಗೊಂಡ ಕಂಬಳ ಕರೆ ಉದ್ಘಾಟನೆಗೊಂಡಿದ್ದು, ಇಲ್ಲಿ ಇದೇ ಮಾರ್ಚ್ 25 ಮತ್ತು 26ರಂದು ಲವ ಕುಶ ಜೋಡುಕರೆ ಕಂಬಳ ನಡೆಯಲಿದೆ.

ಮೋರ್ಲ‌, ಬೋಳದ ವಿಶಾಲ ಪ್ರದೇಶದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಕಂಬಳದ ಕರೆಯನ್ನ ಬುಧವಾರ ಲವ-ಕುಶ ಜೋಡುಕರೆ ಕಂಬಳ ಉತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಉದ್ಘಾಟಿಸಿದರು. ಇದೇ ವೇಳೆ, ಶಾಸಕ ಯು.ಟಿ ಖಾದರ್ ಮಾತನಾಡಿ ಕಂಬಳ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳಿದ್ದಂತೆ. ಯಕ್ಷಗಾನ, ಕಂಬಳದಂತಹ ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನ ಭವಿಷ್ಯದಲ್ಲಿ ಉಳಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ನರಿಂಗಾನದಲ್ಲಿ‌ ಕಂಬಳ‌ ಕರೆ ನಿರ್ಮಾಣವಾದುದರಿಂದ ಗ್ರಾಮೀಣ ಮಟ್ಟದ ಈ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಹಿಂದೆ ತಲಪಾಡಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ರಾಜ್ಯ ಸರ್ಕಾರವು ಪ್ರಥಮ ಬಾರಿ ಅನುದಾನ ನೀಡಿತ್ತು. ಇದೀಗ ನರಿಂಗಾನದಲ್ಲಿ ಸರಕಾರಿ ಅನುದಾನದಲ್ಲೇ ಸುಸಜ್ಜಿತ ಕಂಬಳ ಕರೆ ನಿರ್ಮಾಣವಾಗಿದ್ದು ಇದು ಗ್ರಾಮಕ್ಕೆ ಹೆಮ್ಮೆಯ ವಿಚಾರ ಎಂದರು.

ಲವ ಕುಶ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಕಂಬಳ ಎಂಬುದು ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುವ ಉತ್ಸವವಾಗಿದೆ. ಕರಾವಳಿಗರ ಜನಪದ ಕ್ರೀಡೆ ಕಂಬಳಕ್ಕೆ ಸರ್ಕಾರ ಬಜೆಟಲ್ಲಿ ಅನುದಾನ ಮೀಸಲಿಡಬೇಕು. ರಾಜ್ಯೋತ್ಸವ ಪ್ರಶಸ್ತಿಗಳನ್ನು ಶಿಫಾರಸು, ಒತ್ತಡಕ್ಕೆ ಮಣಿದು ನೀಡದೆ, ಆದ್ಯತೆ ಮೇರೆಗೆ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಕಾನೂನು ತಂದು ಕಂಬಳ ಕೂಟ ನಡೆಸಿ ಸಾಧಕರನ್ನು ಗೌರವಿಸಬೇಕು, ಕಂಬಳ ಓಟಗಾರರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದರು. 

ನರಿಂಗಾನ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಸರಕಾರಿ ಕಂಬಳ ಕರೆಯಲ್ಲಿ ಬುಧವಾರ ಕೋಣಗಳ ಕುದಿ ಕಂಬಳ ನಡೆಯಿತು. ವಿವಿಧ ಗುತ್ತಿನ ಮನೆತನದ ಕೋಣಗಳನ್ನ ಕರೆಯಲ್ಲಿ ಪ್ರಾತ್ಯಕ್ಷಿಕೆ ಸಲುವಾಗಿ ಓಡಿಸಲಾಯಿತು. ಇದೇ ಕಂಬಳ ಕರೆಯಲ್ಲಿ ಈ ಹಿಂದೆ ಪಜೀರು ಗ್ರಾಮದಲ್ಲಿ ನಡೆಸಲ್ಪಡುತ್ತಿದ್ದ ಲವ ಕುಶ ಜೋಡುಕರೆ ಕಂಬಳ ಇದೇ ಮಾರ್ಚ್ 25, 26ರಂದು ನಡೆಯಲಿದೆ. ಪಜೀರಿನಲ್ಲಿ ಸುಮಾರು 25 ವರ್ಷಗಳಿಂದ ನಡೆಯುತ್ತಿದ್ದ ಲವ-ಕುಶ ಜೋಡುಕರೆ ಕಂಬಳವು ಸ್ಥಳಾವಕಾಶದ ಕೊರತೆ ಇನ್ನಿತರ ಕಾರಣಗಳಿಂದ‌ ನಿಂತು ಹೋಗಿತ್ತು. ಬೋಳ ಸಂತ‌ ಲಾರೆನ್ಸ್ ಚರ್ಚ್ ಧರ್ಮಗುರು ಫೆಡ್ರಿಕ್ ಕೊರೆಯಾ, ಲವ-ಕುಶ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಗುಣಪಾಲ ಕಡಂಬ ಮೊದಲಾದವರು ಉಪಸ್ಥಿತರಿದ್ದರು.

Mangalore March 25th Lava Kusha jodukere kambala to be held in Ullal first time solely under government aide.